Advertisement
ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಾಕ್ಸಮರ ನಡೆಸಿದ್ದಾರೆ. ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಸರಕಾರವು ಪಕ್ಷಪಾತ ಧೋರಣೆ ಮತ್ತು ಸಣ್ಣತನದಿಂದಾಗಿ ಕರ್ನಾಟಕಕ್ಕೆ ಅಕ್ಕಿ ಕೊಡಲಿಲ್ಲ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಜನರಿಗೆ ನೀಡಿರುವ ಗ್ಯಾರಂಟಿ ಈಡೇರಿಸಲಾಗದೇ ಕಾಂಗ್ರೆಸ್ ನಾಟಕವಾಡುತ್ತಿದೆ ಎಂದಿದೆ.
Related Articles
Advertisement
ತುಮಕೂರು: ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆ ಕೆಲಸವನ್ನು ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ. ಗೋಡನ್‌ನಲ್ಲಿ ಅಕ್ಕಿ ಇದ್ದರೂ ಕೊಡುತ್ತಿಲ್ಲ. ನಾವು ಜನರಿಗೆ ಮಾತು ಕೊಟ್ಟಿದ್ದೇವೆ. ಈಗ ತಾತ್ಕಾಲಿಕವಾಗಿ ಹಣ ನೀಡಿ ಇನ್ನು ಮೂರು ತಿಂಗಳಲ್ಲಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.
ಕೊರಟಗೆರೆಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ರಾಜ್ಯದ ಜನರಿಗೆ ಅಕ್ಕಿ ಕೊಡಲೇಬೇಕು ಎಂದು ತೀರ್ಮಾನಿಸಿದ್ದೇವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ಕಿ ಬದಲಿಗೆ ದುಡ್ಡು ಕೊಡುವುದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ಆದರೆ ನಾವು ದುಡ್ಡು ಕೊಟ್ಟರೂ ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್ಸಿಐನಲ್ಲಿ 7 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಖಾಸಗಿಯವರಿಗೆ ಮಾರುತ್ತಿದ್ದಾರೆ. ನಮಗೆ ರಾಜಕೀಯ ಕಾರಣಕ್ಕೋಸ್ಕರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು.
ಇದು ಪ್ರತಿಷ್ಠೆಯ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರತಿಷ್ಠೆಯಿಂದ ಹೊಟ್ಟೆ ತುಂಬುವುದಿಲ್ಲ. ಬಿಜೆಪಿಯವರೇ “ಹಣ ಕೊಡಿ ಹಣ ಕೊಡಿ’ ಎಂದು ಬೊಬ್ಬೆಯೊಡೆದರು. ಈಗ ಏಕಾಏಕಿ ಟೀಕಿಸುತ್ತಿದ್ದಾರೆ. ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು.
-ಡಾ| ಜಿ.ಪರಮೇಶ್ವರ್, ಗೃಹ ಸಚಿವ
ಅಕ್ಕಿ ಕೊಡಲು ಆಗದಿದ್ದರೆ ಹಣ ನೀಡಿ ಎಂದಿದ್ದ ಬಿಜೆಪಿಯವರು ಈಗ ಹಣ ಕೊಡುವ ಸರಕಾರ ನಿರ್ಧಾರವನ್ನೂ ಟೀಕಿಸುತ್ತಿದ್ದಾರೆ. ಎಲ್ಲದಕ್ಕೂ ಟೀಕಿಸುವ ಇವರ ಉದ್ದೇಶ ಏನೆಂಬುದೇ ಅರ್ಥವಾಗುತ್ತಿಲ್ಲ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ