Advertisement

ಕಾಡ್ತಿದೆ ಕೊಳೆರೋಗ

04:40 PM Aug 25, 2018 | |

ತೀರ್ಥಹಳ್ಳಿ: ಮಲೆನಾಡಿನಾದ್ಯಂತ ಕಳೆದ ಎರಡು ತಿಂಗಳಿಂದ ಸುರಿಯುತ್ತರಿರುವ ಮಳೆಗೆ ತೀರ್ಥಹಳ್ಳಿ ತಾಲೂಕಿನ ಅಡಕೆ ಬೆಳೆಗಾರರು ಆತಂಕದ ಕ್ಷಣವನ್ನು ಎದುರಿಸುತ್ತಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಅಡಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಅದರಲ್ಲೂ ಆಗುಂಬೆ ಭಾಗದ ಅಡಕೆ ಬೆಳೆಗಾರರು ಕೊಳೆ ರೋಗದಿಂದ ತಾವು ಬೆಳೆದ ಶೇ.70ರಷ್ಟು ಅಡಕೆ ಫಸಲನ್ನೇ ಕಳೆದುಕೊಂಡಿದ್ದಾರೆ.

Advertisement

ಪ್ರತೀ ವರ್ಷ ಮಲೆನಾಡು ಭಾಗದ ಅಡಕೆ ತೋಟಗಳಲ್ಲಿ ಕೊಳೆ ರೋಗ ಸಾಮಾನ್ಯ. ಸುರಿದ ಭಾರೀ ಮಳೆ ಶೀತ ಪ್ರದೇಶದಲ್ಲಿನ ಥಂಡಿಗಾಳಿಯಿಂದ ಅಡಕೆ ಮರಕ್ಕೆ ಶಿಲೀಂದ್ರಗಳಿಂದ ರೋಗ ಹರಡುತ್ತದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೋಡೋ ದ್ರಾವಣ ಸಿಂಪಡಣೆಗೂ ಕಾಲಾವಕಾಶ ಸಿಗುತ್ತಿಲ್ಲ. ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಬೋರ್ಡೋ ದ್ರಾವಣ ಸಿಂಪಡಣೆಯ
ಕಾಲವಾಗಿದೆ. ಆಗುಂಬೆ ಭಾಗದಲ್ಲಿ ಮಳೆಗಾಲದ ಮೂರು ತಿಂಗಳುಗಳಲ್ಲಿ ಸತತವಾಗಿ ನಾಲ್ಕು ಬಾರೀ ಬೋರ್ಡೋ
ದ್ರಾವಣ ಸಿಂಪಡಿಸುತ್ತಾರೆ. ಆದರೆ ಈ ಸಲ ಔಷಧಿ ಸಿಂಪಡಣೆಯ ನಂತರವೂ ಕೊಳೆ ರೋಗದಿಂದ ಅಡಕೆ ಮಿಳ್ಳೆಗಳು
ಉದುರುತ್ತಿವೆ. ಅಡಕೆ ತೋಟಗಳಲ್ಲಿ ಭಾರೀ ಮಳೆಯಿಂದ ಥಂಡಿ ಹೆಚ್ಚಾಗಿ ನೀರುಗೊಳೆ ಹಾಗೂ ಬೂದುಗೊಳೆ ಹೆಚ್ಚಾಗಿದ್ದು ಮುಂದಿನ
ದಿನಗಳಲ್ಲಿ ನಾವು ಬದುಕುವುದೇ ಕಷ್ಟವಾಗಿದೆ ಎಂದು ಆಗುಂಬೆ ಭಾಗದ ಅಡಕೆ ಬೆಳೆಗಾರರ ರೋಧನ ಕೇಳಿಬರುತ್ತಿದೆ.

ತಾಲೂಕಿನ 3500 ಹೆಕ್ಟರ್‌ ಪ್ರದೇಶಗಳಲ್ಲಿನ ಅಡಕೆ ತೋಟಗಳಿಗೆ ಕೊಳೆ ರೋಗ ಆವರಿಸಿದೆ. ಆಗುಂಬೆ ಹೋಬಳಿಯ 1800 ಹೆಕ್ಟೇರ್‌ ಪ್ರದೇಶದಲ್ಲಿ ಅತಿ ಹೆಚ್ಚು ಕೊಳೆ ರೋಗ ತಗುಲಿದೆ. ಈ ಭಾಗದಲ್ಲಿ ಶೇ.75ರಷ್ಟು ಕೊಳೆರೋಗ ಇದೆ ಎಂದು ತೋಟಗಾರಿಕ
ಇಲಾಖೆಯವರ ಅಭಿಪ್ರಾಯವಾಗಿದೆ. ತಾಲೂಕಿನ ಕಸಬಾ, ಮುತ್ತೂರು, ಅಗ್ರಹಾರ, ಮಂಡಗದ್ದೆ ಹೋಬಳಿಯ ಶೇ.40ಕ್ಕಿಂತಲೂ
ಹೆಚ್ಚು ತೋಟಗಳಲ್ಲಿ ಕೊಳೆರೋಗದ ಪ್ರಮಾಣ ಏರುತ್ತಲೇ ಇದೆ. ಅಡಕೆ ಬೆಳೆಗಾರರು ತೋಟಕ್ಕೆ ಔಷಧ ಸಿಂಪಡಣೆಗೂ ಆಗುವ ಖರ್ಚಿನ ಬಗ್ಗೆಯೂ ಲೆಕ್ಕಿಸದೇ ಮುಂದಿನ ದಿನಗಳಲ್ಲಿ ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಒಂದು ಎಕರೆ ಅಡಕೆಗೆ ಬೋರ್ಡೋ ದ್ರಾವಣ ಸಿಂಪಡಿಸಲು 10 ರಿಂದ 12ಸಾವಿರ ರೂ ಖರ್ಚಾಗುತ್ತದೆ. ಈ ಬಾರೀ ಮೂರಕ್ಕಿಂತ ಹೆಚ್ಚು ಸಲ ರೈತರು ಔಷಧ ಸಿಂಪಡಿಸಿದ್ದಾರೆ. ಆದರೆ ಅಡಕೆ ಚಿಗುರುಗಳೆಲ್ಲ ಹಾಸಿದಂತೆ ತೋಟದ ಮರದ ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ರೈತರನ್ನು ಚಿಂತೆಗೆ ಈಡುಮಾಡಿದೆ. ಸಂಶೋಧನೆಗೆ ಸವಾಲಾಗಿರುವ ಕೊಳೆ ರೋಗದ ಬಗ್ಗೆ ತೋಟಗಾರಿಕಾ ಇಲಾಖೆ
ಹೆಚ್ಚು ಆಸಕ್ತಿ ವಹಿಸಬೇಕಾಗಿದೆ. ಸುಮಾರು 100 ವರ್ಷಗಳ ಹಿಂದೆ ಬ್ರಿಟಿಷ್‌ ವಿಜ್ಞಾನಿ ಕೋಲ್‌ವುನ್‌ ಕಾμ ತೋಟಗಳಲ್ಲಿ
ಶಿಲೀಂದ್ರಗಳಿಂದ ಉಂಟಾಗುವ ಕೊಳೆ ರೋಗ ನಿಯಂತ್ರಣಕ್ಕೆ ಕಂಡುಹಿಡಿದ ಬೋರ್ಡೋ ದ್ರಾವಣವನ್ನೇ ಇಂದಿಗೂ ಅಡಕೆ ಬೆಳೆಗಾರರು ಬಳಸುತ್ತಿದ್ದಾರೆ. ಅಡಕೆಗೆ ಕಂಡು ಬರುತ್ತಿರುವ ಕೊಳೆ ರೋಗದ ಬಗ್ಗೆ ತೀರ್ಥಹಳ್ಳಿಯಲ್ಲಿರುವ ಅಡಕೆ ಸಂಶೋಧನಾ ಕೇಂದ್ರದವರು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇನ್ನಾದರೂ ಅಡಕೆ ಬೆಳೆಗಾರರ ಸಮಸ್ಯೆಯನ್ನು ಆಲಿಸಬೇಕಾಗಿದೆ. 

2013ರಲ್ಲಿ ತಾಲೂಕಿನಲ್ಲಿ ಇದೇ ರೀತಿ ಅಡಕೆ ಬೆಳೆಗೆ ಕೊಳೆ ರೋಗ ಬಂದು ರೈತರು ಸಂಕಷ್ಟದಲ್ಲಿದ್ದರು. ಅಂತಹ ಸಂದರ್ಭದಲ್ಲಿ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರತೀ ಎಕರೆಗೆ 7500 ರೂ ಪರಿಹಾರ ಧನ ನೀಡಿ ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದರು. ಆದರೆ ಈ ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ಕೃಷಿ ಸಚಿವರಾಗಲಿ ಆಗುಂಬೆ ಭಾಗಕ್ಕೆ ಭೇಟಿ ನೀಡಿ ನಮ್ಮ ಕಷ್ಟವನ್ನು ಆಲಿಸುವವರೇ ಎಂಬ ಮಾತನ್ನು ಆಗುಂಬೆ ಸಮೀಪದ ಅವರೇಮನೆಯ ಅಡಕೆ ಬೆಳೆಗಾರ ಕೃಷ್ಣಮೂರ್ತಿ ಭಟ್ಟರು ಹೇಳುತ್ತಾರೆ.

Advertisement

ಒಟ್ಟಾರೆ ಮಲೆನಾಡಿನಲ್ಲಿ ಅಡಕೆ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಅಡಿಕೆ ಬೆಳೆಗಾರರ ನೋವಿನ ಕೃಷಿ ಬದುಕಿನ ಕಥೆಯನ್ನು ಸರ್ಕಾರ ಇನ್ನಾದರೂ ಗಮನ ಹರಿಸಬಹುದೇ ಎಂದು ರೈತರು
ಕಾದುಕುಳಿತಿದ್ದಾರೆ.  

ನಿರಂತರ ಮಳೆಯಿಂದ ತಾಲೂಕಿನಲ್ಲಿ ಅಡಕೆಗೆ ಕೊಳೆ ರೋಗ ಹೆಚ್ಚಾಗಿದೆ. ಫಸಲಿನ ಆಸೆಯನ್ನೇ ರೈತ ಕೈಬಿಟ್ಟಿದ್ದಾನೆ.
ಬೆಳೆ ಹಾನಿಗೆ ಪರಿಹಾರ ನೀಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಎಪಿಎಂಸಿ ವತಿಯಿಂದ ಕೃಷಿ ಸಚಿವರಿಗೂ
ಮನವಿ ಮಾಡಿದ್ದೇವೆ.  ಕೇಳೂರು ಮಿತ್ರ, ಎಪಿಎಂಸಿ ಅಧ್ಯಕ್ಷರು ತೀರ್ಥಹಳ್ಳಿ ಅಡಿಕೆ ಬೆಳೆಗಾರರು ಮಳೆ ಬಿಡುವಿದ್ದಾಗ ಗರಿಷ್ಟ ಪ್ರಮಾಣದಲ್ಲಿ ಔಷಧ ಸಿಂಪಡಿಸಲೇ ಬೇಕಾಗುತ್ತದೆ. ಕೊಳೆ ಇರುವ ತೋಟದಲ್ಲಿ ನೀರು ನಿಲ್ಲದಂತೆ ಬಿಸಿಕಾಲುವೆ ನಿರ್ಮಿಸಬೇಕು.
ಜೊತೆಗೆ ಕೊಳೆತ ಹಾಳೆ ಹಾಗೂ ಕೊಳೆ ಬಂಧು ಉದುರಿದ ಅಡಕೆಗಳನ್ನು ಹೆರಕಿ ಹೊರಹಾಕಬೇಕು. ಬೆಳೆಗಾರರು ಬೆಳೆ ವಿಮೆ
ಮಾಡಿಸಿದ್ದರೆ ಈ ಸಂದರ್ಭದಲ್ಲಿ ರೈತರಿಗೆ ವಿಮೆ ಸಿಗಲಿದೆ. 
 ಸಿದ್ದಲಿಂಗೇಶ್‌, ಹಿರಿಯ ತೋಟಗಾರಿಕಾ ನಿರ್ದೇಶಕರು, ತೀರ್ಥಹಳ್ಳಿ

„ರಾಂಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next