Advertisement
“ನಾನು ಕಥೆ ಕೇಳಬೇಕು, ಒಂದರ ಹಿಂದೊಂದು ಚಿತ್ರ ಮಾಡಬೇಕು ಅಂತ ಮಾಡುತ್ತಿಲ್ಲ. ನಾನು ಹಲವರಿಗೆ ಸಿನಿಮಾ ಮಾಡೋಕೆ ಅವಕಾಶ ಕೊಡುತ್ತಿದ್ದೀನಿ, ಸತತವಾಗಿ ಚಿತ್ರಗಳನ್ನ ನಿರ್ಮಿಸುತ್ತೀನಿ ಅಂತೆಲ್ಲಾ ಸುದ್ದಿಯಾಗಿದೆ. ಹಾಗೇನಿಲ್ಲ. ಇಷ್ಟು ಚಿತ್ರಗಳನ್ನು ನಿರ್ಮಿಸುತ್ತೀನಿ ಅಂತ ಯಾವುದೇ ಡೆಡ್‌ಲೈನ್ ಹಾಕಿಕೊಂಡಿಲ್ಲ. ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಸಿನಿಮಾ ನಿರ್ಮಾಣ ಮಾಡುತ್ತೀನಿ ಅಷ್ಟೇ.
Related Articles
Advertisement
ಬರೀ ಪ್ರಶಸ್ತಿ ಬರೋದಷ್ಟೇ ಮುಖ್ಯ ಅಲ್ಲ. ನಮಗೆ ಜನ ಕೊಡೋ ರಿವಾರ್ಡು ಸಹ ಅಷ್ಟೇ ಮುಖ್ಯ. ರಿವಾರ್ಡು ಬಂದರೆ, ಅವಾರ್ಡು ಬಂದಷ್ಟೇ ಸಂತೋಷ. ನಾನು ಯಾವುದೇ ಕಥೆ ಕೇಳಿದರೂ ನಿರ್ಮಾಪಕನಾಗಿ ಕೇಳುವುದಿಲ್ಲ, ಪ್ರೇಕ್ಷಕನಾಗಿ ಕೇಳುತ್ತೀನಿ. ಪ್ರೇಕ್ಷಕನಾಗಿ ಇಷ್ಟವಾದರೆ ಚಿತ್ರ ಮಾಡಲು ಮುಂದಾಗುತ್ತೀನಿ’ ಎನ್ನುತ್ತಾರೆ ಪುನೀತ್.
“ಒಂದು ಮೊಟ್ಟೆಯ ಕಥೆ’ ಸ್ಫೂರ್ತಿ: ಪ್ರಮುಖವಾಗಿ ಪುನೀತ್ ನಿರ್ಮಾಣಕ್ಕಿಳಿಯುವುದಕ್ಕೆ “ಒಂದು ಮೊಟ್ಟೆಯ ಕಥೆ’ ಸ್ಫೂರ್ತಿ ಎನ್ನಬಹುದು. “ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ನಮ್ಮಲ್ಲಿ ಬರುತ್ತಿವೆ ಮತ್ತು ಯಶಸ್ವಿಯಾಗುತ್ತಿದೆ. ಅದರಲ್ಲೂ “ಒಂದು ಮೊಟ್ಟೆಯ ಕಥೆ’ ನೋಡಿ ಬಹಳ ಖುಷಿಯಾಯಿತು.
ಸಹಜವಾದ ಕಥೆ, ನಿರೂಪಣೆ, ಸಂಗೀತ ಎಲ್ಲವೂ ಚೆನ್ನಾಗಿತ್ತು. ಅಷ್ಟು ಕಡಿಮೆ ಬಜೆಟ್‌ನಲ್ಲಿ ಎಷ್ಟೊಳ್ಳೆಯ ಚಿತ್ರ ಮಾಡಿದ್ದಾರಲ್ಲ ಎಂದು ಖುಷಿಯಾಯಿತು. ನಾವು ಯಾಕೆ ಮಾಡಬಾರದು ಅಂತ ಅನಿಸಿದ್ದು ಆಗಲೇ. ಮೇಲಾಗಿ ಮಲ್ಟಿಪ್ಲೆಕ್ಸ್‌ಗಳು ಹೆಚ್ಚಿದಂತೆ ಜನ ಇವತ್ತು ಬೇರೆ ತರಹದ, ಬೇರೆ ಭಾಷೆಗಳ ಸಿನಿಮಾಗಳನ್ನು ನೋಡೋದು ಜಾಸ್ತಿಯಾಗಿದೆ.
ನಾನೇ ಹಲವು ಸ್ಪಾನಿಷ್ ಸಿನಿಮಾಗಳನ್ನ ನೋಡಿದ್ದೀನಿ. ಸಬ್‌ಟೈಟಲ್ ಇದ್ದರೆ ಅಷ್ಟೇ ಸಾಕು. ಅದೇ ತರಹ ಕನ್ನಡ ಚಿತ್ರಗಳಿಗೂ ಸಬ್‌ಟೈಟಲ್ ಹಾಕಿ ಯಾಕೆ ಬೇರೆ ಕಡೆ ಬಿಡುಗಡೆ ಮಾಡಬಾರದು ಅಂತ ಚಿತ್ರ ನಿರ್ಮಾಣ ಪ್ರಾರಂಭಿಸಿದ್ದೀನಿ. ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಥೆ ಚೆನ್ನಾಗಿರಬೇಕು ಅಷ್ಟೇ’ ಎಂಬುದು ಪುನೀತ್ ಅಭಿಪ್ರಾಯ.
ಒಂದೇ ಸೂರಿನಲ್ಲಿ ಎಲ್ಲಾ ವಿಭಾಗಗಳು: ಗಾಂಧಿನಗರದಲ್ಲಿದ್ದ ವಜ್ರೆಶ್ವರಿ ಆಫೀಸ್ ಕಟ್ಟವನ್ನು ಕೆಡವಿ ಅಲ್ಲಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಕಟ್ಟಡ ಮುಗಿದ ಮೇಲೆ ಮತ್ತೆ ವಜ್ರೆಶ್ವರಿ ಆಫೀಸ್ ಶಿಫ್ಟ್ ಆಗುತ್ತದೆ ಎನ್ನುತ್ತಾರೆ ಪುನೀತ್. “ಇನ್ನೊಂದು ತಿಂಗಳಲ್ಲಿ ಕಟ್ಟಡ ನಿರ್ಮಾಣ ಮುಗಿಯಲಿದೆ.
ನಮಗೆ ಒಂದು ಫ್ಲೋರ್ ಸಾಕು. ಮಿಕ್ಕಂತೆ ಬಾಡಿಗೆಗೆ ಕೊಡುತ್ತೀವಿ. ಒಂದೇ ಫ್ಲೋರ್‌ನಲ್ಲಿ ವಜ್ರೆಶ್ವರಿ, ಪಿಆರ್‌ಕೆ ಎಲ್ಲ ಇರುತ್ತದೆ. ಈಗ ಎಲ್ಲಾ ಡಿಜಿಟಲ್ ಆಗಿರುವುದರಿಂದ, ಮುಂಚಿನಂತೆ ಜಾಸ್ತಿ ಜಾಗ ಬೇಕು ಅಂತಿಲ್ಲ. 10/10 ರೂಮ್ ಇದ್ದರೂ ಸಾಕು. ಹಾಗಾಗಿ ಪಿಆರ್‌ಕೆ ಪ್ರೊಡಕ್ಷನ್ ಹೌಸ್, ಪಿಆರ್‌ಕೆ ಆಡಿಯೋ ಎಲ್ಲಾ ಅದೇ ಕಟ್ಟಡಕ್ಕೆ ಬರುತ್ತದೆ’ ಎನ್ನುತ್ತಾರೆ ಪುನೀತ್.