Advertisement
ಅತೃಪ್ತರನ್ನು ಸಮಾಧಾನ ಪಡಿಸಲು ರಾಜ್ಯ ನಾಯಕರು ಸಂಪುಟ ಪುನಾರಚನೆಗೆ ಮಾಡಿದ ಪ್ರಯತ್ನಕ್ಕೆ ಸಚಿವರಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪುನಾರಚನೆ ಬದಲು ವಿಸ್ತರಣೆಗೆ ನಿರ್ಧಾರ ಮಾಡಿದ್ದಾರೆ. ರಾಜ್ಯ ನಾಯಕರ ಈ ನಿರ್ಧಾರಕ್ಕೆ ಸಚಿವಾಕಾಂಕ್ಷಿಗಳು ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
Related Articles
Advertisement
ಆದರೆ, ಈಗಾಗಲೇ ಬಂಡಾಯದ ಬಾವುಟ ಹಾರಿಸಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತೆರೆಮರೆಯಲ್ಲಿ ಅತೃಪ್ತ ಶಾಸಕರನ್ನು ಒಂದುಗೂಡಿಸುವ ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರು ತಿಂಗಳ ಹಿಂದೆ ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ತಮ್ಮೊಂದಿಗೆ ಬಂಡಾಯದ ಬಾವುಟ ಹಾರಿಸಿದ್ದ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಮಹೇಶ್ ಕುಮಠಳ್ಳಿ, ಶ್ರೀಮಂತ ಪಾಟೀಲ್, ಬಿ.ನಾಗೇಂದ್ರ, ಆನಂದ್ ಸಿಂಗ್, ಬಿ.ಸಿ. ಪಾಟೀಲ್, ಡಿ.ಎಸ್.ಹೂಲಗೇರಿ, ಭಿಮಾ ನಾಯ್ಕ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.
ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್ ಈಗಾಗಲೇ ಸಂಪುಟ ವಿಸ್ತರಣೆಯ ಕುರಿತು ಅಸಮಾಧಾನ ಹೊರ ಹಾಕಿದ್ದು, ಮೈತ್ರಿ ಸರ್ಕಾರದಲ್ಲಿ ಚೇಲಾಗಳಿಗೆ ಮಾತ್ರ ಅವಕಾಶ ದೊರೆಯುತ್ತದೆ. ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದರೂ ಬೇಡ ಎನ್ನುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹಿರಿಯರು ಕಾದು ನೋಡುವ ತಂತ್ರ: ಪಕ್ಷದ ನಾಯಕರ ನಡೆಯ ಬಗ್ಗೆ ಬಹಿರಂಗ ಬಂಡಾಯ ಸಾರಿದ್ದ ಹಿರಿಯ ನಾಯಕರಾದ ರೋಷನ್ ಬೇಗ್ ಹಾಗೂ ರಾಮಲಿಂಗಾರೆಡ್ಡಿ ಸಂಪುಟ ವಿಸ್ತರಣೆಯ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಅವಕಾಶ ನೀಡುತ್ತಾರೆ, ಪಕ್ಷದ ಶಾಸಕರಿಗೆ ಅವಕಾಶ ದೊರೆಯುತ್ತದೆಯೋ ಅಥವಾ ಕೇವಲ ಪಕ್ಷೇತರರಿಗೆ ಮಾತ್ರ ಅವಕಾಶ ನೀಡಿ ಕೈ ತೊಳೆದುಕೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಒಂದು ಸ್ಥಾನ ನಿಗೂಢ: ಮೈತ್ರಿ ಸರ್ಕಾರದಲ್ಲಿ ಮೂರು ಸಚಿವ ಸ್ಥಾನ ಖಾಲಿ ಇದ್ದು, ಜೆಡಿಎಸ್ ಬಳಿ ಇರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಪಕ್ಷೇತರ ಶಾಸಕ ನಾಗೇಶ್‌ಗೆ, ಕಾಂಗ್ರೆಸ್ ಬಳಿ ಇರುವ ಒಂದು ಸ್ಥಾನವನ್ನು ಇನ್ನೊಬ್ಬ ಪಕ್ಷೇತರ ಶಾಸಕ ಆರ್. ಶಂಕರ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಖಾಲಿ ಉಳಿಯುವ ಇನ್ನೊಂದು ಸ್ಥಾನವನ್ನು ಕಾಂಗ್ರೆಸ್‌ನ ಅತೃಪ್ತ ಶಾಸಕರಲ್ಲಿ ಬಹಿರಂಗ ಆರೋಪ ನಡೆಸುತ್ತಿರುವ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅಥವಾ ಬಿ.ಸಿ.ಪಾಟೀಲ್‌ಗೆ ನೀಡುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದ್ದರೂ, ತಕ್ಷಣಕ್ಕೆ ಒಂದು ಸ್ಥಾನ ಖಾಲಿ ಇಟ್ಟುಕೊಂಡು ಶಾಸಕರ ನಡೆಯ ಮೇಲೆ ನಿರ್ಧಾರ ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾನು ಸಚಿವಾಕಾಂಕ್ಷಿಯಲ್ಲ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ರಮೇಶ್ ಜಾರಕಿಹೊಳಿ ಯಾರೊಂದಿಗೆ ಸಭೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಾನು ಪಕ್ಷದ ನಾಯಕರ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ.-ಮಹೇಶ್ ಕುಮಠಳ್ಳಿ, ಅಥಣಿ ಶಾಸಕ