Advertisement
ರಾಜ್ಯ ಸರಕಾರದ 2017ನೇ ಸಾಲಿನ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆಗೆ 200 ಕೋ.ರೂ. ಮೀಸಲಿರಿಸಲಾಗಿದೆ. ಆದರೆ ಬಜೆಟ್ ಮಂಡನೆಯಾಗಿ 9 ತಿಂಗಳು ಕಳೆದರೂ ಈ ಯೋಜನೆಯ ಅನುಷ್ಠಾನದ ಬಗ್ಗೆ ಇಲ್ಲಿಯವರೆಗೆ ಸರಕಾರದ ಕಡೆಯಿಂದ ಸ್ಪಷ್ಟ ತೀರ್ಮಾನ ಹೊರಬಿದ್ದಿರಲಿಲ್ಲ. ಸೋಮವಾರ ನಡೆದ ಸಚಿವಸಂಪುಟ ಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು , ಶೀಘ್ರ ಜಾರಿಗೆ ಬರಲಿದೆ.
ಪಶ್ಚಿಮವಾಹಿನಿ ಯೋಜನೆಗೆ ಸುಮಾರು 15 ವರ್ಷಗಳ ಇತಿಹಾಸವಿದೆ. ಆದರೆ ಎತ್ತಿನಹೊಳೆ ಯೋಜನೆ ಆರಂಭಗೊಂಡಾಗ ಪಶ್ಚಿಮವಾಹಿನಿ ಯೋಜನೆ ಪ್ರಸ್ತಾವ ಜೋರಾಗಿ ಕೇಳಿಬಂತು. ಎತ್ತಿನಹೊಳೆ ವಿರುದ್ಧ ಹೋರಾಟ ತೀವ್ರಗೊಂಡಾಗ ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರು ಕೂಡ ಕರಾವಳಿ ಭಾಗದಲ್ಲಿ ಪಶ್ಚಿಮವಾಹಿನಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಬಂದ ಸಂದರ್ಭಗಳಲ್ಲಿ ಪಶ್ಚಿಮವಾಹಿನಿ ಯೋಜನೆಯ ಪ್ರಸ್ತಾವವೆತ್ತಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
Related Articles
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿ ಯುವ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿ ಸುವ ಸಮಗ್ರ ಯೋಜನೆ ಇದು. ದ.ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಗಳನ್ನು ಒಳಗೊಂಡಿರುವ ಪಶ್ಚಿಮವಾಹಿನಿ ಯೋಜನೆ ಸುಮಾರು 15 ವರ್ಷಗಳ ಹಿಂದೆ ರೂಪು ಗೊಂಡದ್ದು. ಆಗ ಮೂರು ಜಿಲ್ಲೆಗಳಲ್ಲಿ ಹರಿಯುವ ನದಿಗಳು ಹಾಗೂ ಉಪನದಿಗಳಿಗೆ 1,489 ಅಣೆಕಟ್ಟು ನಿರ್ಮಿಸಿ 39,041.67 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಪ್ರಸ್ತಾವನೆಯನ್ನು ಹೊಂದಿತ್ತು. ಒಟ್ಟು 295 ಕೋ.ರೂ. ವೆಚ್ಚವನ್ನು ಅಂದಾ ಜಿಸ ಲಾಗಿತ್ತು. ಆರ್ಥಿಕ ಸಂಪನ್ಮೂಲದ ಕೊರತೆ ಯಿಂದ ಯೋಜನೆ ಸಾಕಾರಗೊಳ್ಳುವಲ್ಲಿ ಹಿನ್ನಡೆ ಕಂಡಿತ್ತು. ಮುಂದೆ ಹಲವಾರು ಬಾರಿ ಸದ್ದು ಮಾಡಿದ್ದರೂ ಅನುಷ್ಠಾನ ಸಾಧ್ಯವಾಗಿರಲಿಲ್ಲ.
Advertisement
ದ.ಕ., ಉಡುಪಿ ಪ್ರಮುಖ ಫಲಾನುಭವಿ ಜಿಲ್ಲೆ ಅಂಕಿ-ಅಂಶವೊಂದರ ಪ್ರಕಾರ ದ.ಕನ್ನಡ ಜಿಲ್ಲೆಯ ಐದು ನದಿಗಳಿಂದ 657.21 ಟಿಎಂಸಿ, ಉಡುಪಿ ಜಿಲ್ಲೆಯ 13 ನದಿಗಳಿಂದ 582.48 ಟಿಎಂಸಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ನದಿಗಳಿಂದ 240.31 ಟಿಎಂಸಿ ನೀರು ಸೇರಿದಂತೆ ಒಟ್ಟು 1,480 ಟಿಎಂಸಿ ನೀರು ಸಮುದ್ರಕ್ಕೆ ಹರಿಯುತ್ತಿದೆ. ದಕ್ಷಿಣಕನ್ನಡದಲ್ಲಿ ನೇತ್ರಾವತಿ, ನಂದಿನಿ, ಶಾಂಭವಿ, ಫಲ್ಗುಣಿ (ಗುರುಪುರ), ಕುಮಾರಧಾರಾ, ಗೌರಿಹೊಳೆ, ಶಿರಿಯ ಹೊಳೆ; ಉಡುಪಿ ಜಿಲ್ಲೆಯಲ್ಲಿ ಸ್ವರ್ಣ, ವಾರಾಹಿ, ಸೀತಾ, ಚಕ್ರಾ, ಉದ್ಯಾವರ, ಸುಂಕದಗುಂಡಿ, ಎಡಮಾವಿನ ಹೊಳೆ, ಬೈಂದೂರು, ಪಾಂಗಾಳ ಹೊಳೆಗಳು; ಉತ್ತರಕನ್ನಡ ಜಿಲ್ಲೆಯಲ್ಲಿ ಶರಾವತಿ, ಕಾಳಿ, ಬೇಡ್ತಿ, ಅಘನಾಶಿನಿ ಪ್ರಮುಖ ನದಿಗಳಾಗಿವೆ. ಈ ಎಲ್ಲ ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬಿ ಸಮುದ್ರವನ್ನು ಸೇರುತ್ತವೆ. ಈ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು ಪಶ್ಚಿಮವಾಹಿನಿ ಯೋಜನೆ. ಕೃಷಿ ಹಾಗೂ ಕುಡಿಯುವ ಉದ್ದೇಶಗಳಿಗೆ ನೀರು ಒದಗಿಸುವುದು ಮತ್ತು ಅಂತರ್ಜಲ ವೃದ್ಧಿ ಯೋಜನೆಯ ಮೂಲ ಉದ್ದೇಶವಾಗಿದೆ. ಯಾರಿಗೆಲ್ಲ ಲಾಭ?
ದ.ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿ ಹಾಗೂ ಬೇಸಗೆಯಲ್ಲಿ ಅನಾವೃಷ್ಟಿ ಉಂಟಾಗುತ್ತದೆ. ಈ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಮತ್ತು ಮಣ್ಣಿನ ಗುಣಲಕ್ಷಣಗಳಿಂದಾಗಿ ಬೃಹತ್ ಅಣೆಕಟ್ಟು ಹಾಗೂ ಇಂಗು ಕೆರೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಕರಾವಳಿ ತೀರದ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಜಲಮಟ್ಟ ಕ್ಷೀಣಿಸುವುದರಿಂದ ಉಪ್ಪು ನೀರಿನ ಒರತೆ ಉಂಟಾಗುತ್ತದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದರಿಂದ ಕೃಷಿ ಮತ್ತು ಕುಡಿಯುವ ನೀರಿನ ನಿರಂತರ ಪೂರೈಕೆ ಸಾಧ್ಯ. ಉಪ್ಪು ನೀರಿನ ಒರತೆ ತಡೆಯಬಹುದಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಿ ತೆರೆದ ಬಾವಿ, ಕೊಳವೆ ಬಾವಿ ಮತ್ತು ಕೆರೆಗಳ ನೀರಿನ ಮಟ್ಟ ಹೆಚ್ಚಿಸಬಹುದು. ಕಿಂಡಿ ಅಣೆಕಟ್ಟುಗಳ ಮೇಲ್ಭಾಗವನ್ನು ಸೇತುವೆಯಾಗಿ ಪರಿವರ್ತಿಸುವುದರಿಂದ ರಸ್ತೆ ಸಂಪರ್ಕ ಸಾಧ್ಯ. – ಕೇಶವ ಕುಂದರ್