ಮಹಾನಗರ: ಕೆರೆಗಳ ಪುನರುಜ್ಜೀವನ ಗೊಳಿಸಿ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದ್ದು, ಈಗಾಗಲೇ 8 ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಗೊಂಡಿದೆ. ಆ ಪೈಕಿ 2 ಕೆರೆಗಳ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಹಾಗೆಯೇ ಬಾಕಿ ಉಳಿದ 6 ಕೆರೆಗಳ ಕಾಮ ಗಾರಿಗಳು ಪ್ರಗತಿಯಲ್ಲಿವೆ. 10ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಗೊಳಿಸುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಪ್ರಾಧಿಕಾರದ ಕೆರೆಗಳ ಅಭಿವೃದ್ಧಿ ಮೊತ್ತವನ್ನು ಬಳಸಿಕೊಂಡು ಪುನರುಜ್ಜೀವನ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
ನಗರದ ಪಡೀಲ್‌ನಲ್ಲಿರುವ ಬೈರಾಡಿ ಕೆರೆಯನ್ನು ಅಭಿವೃದ್ಧಿಗೊಳಿಸಿ ಸಂರಕ್ಷಿಸುವ ಕಾರ್ಯವನ್ನು ಪ್ರಾಧಿಕಾರದಿಂದ ಈಗಾಗಲೇ ನಡೆಸಲಾಗಿದ್ದು, ಸುಮಾರು 1.17 ಕೋ. ರೂ. ವಿನಿಯೋಗಿಸಲಾಗಿದೆ. ಮುಂದುವರಿದ ಕಾಮಗಾರಿಗೆ ಸುಮಾರು 1 ಕೋ. ರೂ. ಮಂಜೂರಾಗಿದ್ದು, ಇದರಲ್ಲಿ ತಡೆಗೋಡೆ, ಇಂಟರ್‌ಲಾಕ್ ಅಳವಡಿಕೆ ಸಹಿ ತ ಬಾಕಿ ಕಾಮಗಾರಿ ಕೈಗೆತ್ತಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕಾಟಿಪಳ್ಳ ಕೆರೆ ಪುನರುಜ್ಜೀವನ ಕಾರ್ಯವನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗಿದ್ದು, 85 ಲಕ್ಷ ರೂ. ವಿನಿಯೋಗಿಸಲಾಗಿದೆ.
ಪ್ರಾಧಿಕಾರ ವ್ಯಾಪ್ತಿಯ ಇನ್ನೂ ಆರು ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಕೊಣಾಜೆ ಸಮೀಪದ ದಡಸ ಕೆರೆಯನ್ನು 1 ಕೋ. ರೂ., 62ನೇ ತೋಕೂರು ಬಳಿಯ ಜಳಕದ ಕೆರೆಯನ್ನು 1.5 ಕೋ. ರೂ., ಪಡುಪಣಂಬೂರು ಕೆರೆಯನ್ನು 25 ಲಕ್ಷ ರೂ., ಜೆಪ್ಪಿನಮೊಗರು ಗ್ರಾಮದ ಕುಂರ್ಬಿಸ್ಥಾನ ಕೆರೆಯನ್ನು 25 ಲಕ್ಷ ರೂ., ಬಜಾಲ್ ಗ್ರಾಮದ ಕುಂದೋಡಿ ಕೆರೆಯನ್ನು 25 ಲಕ್ಷ ರೂ., ಕಸ್ಬಾ ಬಜಾರ್ ಗ್ರಾಮದ ನಡುಪಳ್ಳಿ ಕೆರೆಯನ್ನು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಸುಮಾರು 10 ಕೆರೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿ ಸಾಧ್ಯತೆ ಗುರುತಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಬೋಳೂರು ವಾರ್ಡ್‌ನ ಕುಟ್ಟಿನಾಡ್ ಕೆರೆ, ಅಳಪೆಯ ಕಂರ್ಭಿಮಾರ್ ಕೆರೆ, ಮಂಗಳೂರಿನ ಮಹಾಮ್ಮಾಯ ಕೆರೆ, ಟ್ಯಾಂಕ್ ಕಾಲನಿ ಕೆರೆ, ಹರೇಕಳ ಗ್ರಾಮದ ರಾಜಗುಡ್ಡೆಯ ತಾವರಕೆರೆ, ಕೊಣಾಜೆಯ ಪುಲಿಂಡಿ ಕೆರೆ, ಅಂಬ್ಲಿಮೊಗರು ವಾಡ ಕೆರೆ, ಉಳ್ಳಾಲ ನಗರಸಭೆಯ 9 ಕೆರೆ ಬಳಿಯ ಸಾರ್ವಜನಿಕ ಕೆರೆ, ಬೆಳ್ಮ ಗ್ರಾಮದ ಬೆಳ್ಮದೋಟ ಸಾರ್ವಜನಿಕ ಕೆರೆಗಳು ಸೇರಿವೆ.
ಮಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಗುಜ್ಜರಕೆರೆ ಹಾಗೂ ಕಾವೂರು ಕೆರೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
ರಾಜ್ಯ ಸರಕಾರದ ವಿವಿಧ ಅನುದಾನಗಳಿಂದ ಗುಜ್ಜರಕೆರೆ ಅಭಿವೃದ್ಧಿ ಕಾರ್ಯ ಕಳೆದ ಹಲವು ವರ್ಷ ಗಳಿಂದ ನಡೆಯುತ್ತಾ ಬಂದಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ 4 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾವೂರು ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಜಪ್ಪಿನಮೊಗರು ಬಳಿ ಈಗಾಗಲೇ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ.
ಸರ್ವೆ ಕಾರ್ಯ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೆರೆಗಳು ಅಭಿವೃದ್ಧಿ ಹೊಂದಲು ಇರುವ ಅವಕಾಶಗಳನ್ನು ಅಧ್ಯಯನ ನಡೆಸಿ ಆದ್ಯತೆಯ ಮೇರೆಗೆ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಲೇ 2 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು , 6 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 10 ಕೆರೆಗಳನ್ನು ಗುರುತಿಸಲಾಗಿದ್ದು, ಸರ್ವೆ ಕಾರ್ಯ ನಡೆಯುತ್ತಿದೆ.
- ದಿನೇಶ್ ಕುಮಾರ್,
ಆಯುಕ್ತರು, ಮೂಡಾ