ನಿರ್ಮಾಣ: ರೀಜೆನ್ಸಿ ಎಂಟರ್‌ಪ್ರೈಸಸ್
ಚೇತನ್ ಓ.ಆರ್.
Advertisement
ಹ್ಯು ಗ್ಲಾಸ್ ಎಂಬ ಬೇಟೆಗಾರನೊಬ್ಬನ ಕತೆಯಿದು. 1823ರಲ್ಲಿ ಆ್ಯಂಡ್ರೂ ಹೆನ್ರಿ ಎಂಬಾತನ ನೇತೃತ್ವದ ಬೇಟೆಗಾರರ ಗುಂಪಿಗೆ ಮಾರ್ಗದರ್ಶಕನಾಗಿ ಹ್ಯು ಗ್ಲಾಸ್ ಸೇವೆ ಸಲ್ಲಿಸುತ್ತಿದ್ದ. ಒಮ್ಮೆ ಇವರ ಗುಂಪು, ಕಾಡಿನ ಆದಿವಾಸಿಗಳ ದಾಳಿಗೆ ಸಿಲುಕುತ್ತದೆ. ಗ್ಲಾಸ್‌ಗೆ ಕಾಡಿನ ಅಡ್ಡದಾರಿಗಳೆಲ್ಲ ಚಿರಪರಿಚಿತ. ಸಹವರ್ತಿಗಳ ಪ್ರಾಣ ಕಾಪಾಡುವ ಸಂಕಷ್ಟದಲ್ಲಿದ್ದಾಗ ಒಂದು ಅಡ್ಡದಾರಿಯಲ್ಲಿ ಕರೆದೊಯ್ಯುತ್ತಾನೆ. ಆದರೆ ಅನಿರೀಕ್ಷಿತವಾಗಿ ಕರಡಿಯೊಂದು ಅವನ ಮೇಲೆ ದಾಳಿ ನಡೆಸುತ್ತದೆ. ಒಂದು ಅಪಾಯದಿಂದ ಪಾರಾಗಲು ಹೋಗಿ ಅದಕ್ಕಿಂತಲೂ ದೊಡ್ಡ ಅಪಾಯಕ್ಕೆ ತುತ್ತಾಗುತ್ತಾನೆ. ಭೀಕರ ಕಾದಾಟವೇ ನಡೆದುಹೋಗುತ್ತದೆ ಗ್ಲಾಸ್ ಮತ್ತು ಕರಡಿಯ ಮಧ್ಯೆ. ಆತ ತೀವ್ರವಾಗಿ ಗಾಯಗೊಂಡು, ಸಾವು ಬದುಕಿನ ನಡುವೆ ನರಳಾಡುವ ಸ್ಥಿತಿ ತಲುಪುತ್ತಾನೆ. ಅರ್ಧ ದಾರಿಯವರೆಗೆ ಬಂದುಬಿಟ್ಟಿರುವ ಬೇಟೆಗಾರರ ತಂಡ ಅನಿವಾರ್ಯವಾಗಿ ಹ್ಯು ಗ್ಲಾಸ್ ಚೇತರಿಸಿಕೊಳ್ಳುವ ತನಕ ಕಾಯಬೇಕಾಗುತ್ತದೆ. ಏಕೆಂದರೆ ದಾರಿ ಗೊತ್ತಿರುವುದು ಅವನೊಬ್ಬನಿಗೆ ಮಾತ್ರ. ಎಲ್ಲರೂ ಅಲ್ಲೇ ಬಿಡಾರ ಹೂಡುತ್ತಾರೆ. ಒಂದೆರಡು ದಿನಗಳಲ್ಲಿಯೇ ಗುಂಪಿನಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ. ಅರಣ್ಯದಲ್ಲೇ ಕಾಯಬೇಕು ಎನ್ನುವವರದ್ದೊಂದು ಗುಂಪು. ಅಲ್ಲೇ ಇದ್ದರೆ ಆದಿವಾಸಿಗಳ ಬಾಯಿಗೆ ತುತ್ತಾಗಬೇಕಾಗುತ್ತದೆ ಎನ್ನುವವರದ್ದು ಇನ್ನೊಂದು ಗುಂಪು. ಗ್ಲಾಸ್‌ನನ್ನು ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ, ಆತನಿಗೆ ದಯಾಮರಣ ನೀಡುವ ಬಗ್ಗೆ ಮಾತಾಗುತ್ತದೆ. ಗ್ಲಾಸ್ ಸಾಯುವನೇ, ಚೇತರಿಸಿಕೊಳ್ಳುವನೇ, ಬೇಟೆಗಾರರ ಗುಂಪಿನ ಕತೆ ಏನಾಯ್ತು ಇವಿಷ್ಟೂ “ದಿ ರೆವೆನೆಂಟ್’ ಸಿನಿಮಾದ ಕಥಾಹಂದರ. ಸಿನಿಮಾ, ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ.