ಧಾರವಾಡ: ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿದಿದ್ದು, ಶೈಕ್ಷಣಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ 25ನೇ ರ್‍ಯಾಂಕ್ ಪಡೆದಿದ್ದೇ ಕನಿಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಇನ್ನೂ ಮೂರು ಮೆಟ್ಟಿಲು ಕೆಳಗಿಳಿದು 28ನೇ ಸ್ಥಾನ ಪಡೆದಿದೆ.
2014-15ರಲ್ಲಿ 25ನೇ ರ್‍ಯಾಂಕ್ ಪಡೆದಿದ್ದ ಜಿಲ್ಲೆ ಆನಂತರ 2015-16ರಲ್ಲಿ 10ನೇ ಹಾಗೂ 2016-17ರಲ್ಲಿ 8ನೇ ರ್‍ಯಾಂಕ್ ಗಳಿಸಿತ್ತು. 2017-2018ರಲ್ಲಿ 13ನೇ ರ್‍ಯಾಂಕ್ ಪಡೆದಿತ್ತು. ಆದರೆ ಈ ಸಲ ಫಲಿತಾಂಶ ಶೇ.75.41 ಆಗಿದ್ದು, ಕಳೆದ ಸಾಲಿನ ಶೇ. 82.21ಕ್ಕಿಂತ 6.8 ಪ್ರತಿಶತ ಕಡಿಮೆ ಸಾಧಿಸಿ 13ರಿಂದ 28ನೇ ಸ್ಥಾನಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಒಟ್ಟು 25,096 ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 18, 924 ಮಂದಿ ಪಾಸಾಗಿ ಶೇ.75.41 ಫಲಿತಾಂಶ ದಾಖಲಾಗಿದೆ. 119 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತ 6587 ವಿದ್ಯಾರ್ಥಿಗಳಲ್ಲಿ 5107 ಮಂದಿ ಪಾಸಾಗಿ ಶೇ.77.53 ಫಲಿತಾಂಶ ಸಾಧಿಸಿದ್ದಾರೆ. 137 ಅನುದಾನಿತ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತ 10,634 ವಿದ್ಯಾರ್ಥಿಗಳಲ್ಲಿ 7,759 ಮಂದಿ ಪಾಸಾಗಿ ಶೇ.72.96 ಫಲಿತಾಂಶ ದಾಖಲಾಗಿದೆ. 143 ಅನುದಾನರಹಿತ ಶಾಲೆಗಳಿಂದ ಪರೀಕ್ಷೆಗೆ ಕುಳಿತ 7,875 ವಿದ್ಯಾರ್ಥಿಗಳಲ್ಲಿ 6058 ಮಂದಿ ಪಾಸಾಗಿ ಶೇ.76.93 ಫಲಿತಾಂಶ ದಾಖಲಾಗಿದೆ.
ಜಾತಿವಾರು ಲೆಕ್ಕಾಚಾರ: ಜಿಲ್ಲೆಯಲ್ಲಿ ಜಾತಿವಾರು ಪರಿಶೀಲಿಸಿದಾಗ ಕೆಟಗರಿ 3ಎ, 3ಬಿ ಹಾಗೂ ಇತರೇ ವರ್ಗಗಳಲ್ಲಿ ಕ್ರಮವಾಗಿ ಶೇ.87.89, 81.38, 81.14ಫಲಿತಾಂಶ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕ್ರಮವಾಗಿ 70.16 ಹಾಗೂ 70.13 ಫಲಿತಾಂಶ ಸಾಧಿಸಿದ್ದಾರೆ. ಕೆಟಗರಿ 3ಎ, 3ಬಿ ಮತ್ತು ಇತರೇ ವರ್ಗದ ಬಾಲಕಿಯರು ಕ್ರಮವಾಗಿ 90.97, 87.10, 87.13 ಫಲಿತಾಂಶ ಸಾಧಿಸಿದ್ದಾರೆ. ಕೆಟಗರಿ 3ಎ, 3ಬಿ ಮತ್ತು ಇತರೇ ವರ್ಗದ ಬಾಲಕರು ಕ್ರಮವಾಗಿ 84.83, 75.52, 75.98 ಫಲಿತಾಂಶ ದಾಖಲಿಸಿದ್ದಾರೆ.
23 ಶಾಲೆ 100ಕ್ಕೆ ನೂರು:
ಜಿಲ್ಲೆಯಲ್ಲಿ ಸರ್ಕಾರಿ 10, ಅನುದಾನಿತ 4 ಮತ್ತು ಅನುದಾನರಹಿತ 7 ಸೇರಿ ಒಟ್ಟು 21 ಶಾಲೆಗಳು 100ಕ್ಕೆ 100 ಫಲಿತಾಂಶ ಪಡೆದಿದೆ. ಅನುದಾನಿತ ಪ್ರೌಢಶಾಲೆ ಆಗಿರುವ ವಿಎಂಎಂಎಂ ಎಸ್‌ಎಸ್‌ಎಸ್ ಪಿ.ಎಚ್. ಬಾಲಕರ ಹಾಗೂ ಬಾಲಕಿಯರ ಪ್ರೌಢ ಶಾಲೆ, ಅನುದಾನರಹಿತ ಪ್ರೌಢಶಾಲೆಯಾದ ಅಣ್ಣಿಗೇರಿಯ ಬಿ.ಸಿ.ದೇಶಪಾಂಡೆ ಹಾಗೂ ಹುಬ್ಬಳ್ಳಿಯ ಎ.ಪಿ. ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.