ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದು ಮೊದಲ ಸ್ಥಾನದಲ್ಲಿದ್ದು, ಚುನಾವಣೆಯ ಫಲಿತಾಂಶ ಸಮಾಧಾನ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿದ್ದರಿಂದ ಕಾಂಗ್ರೆಸ್ ಅಸ್ತಿತ್ವವೇ ಕಳೆದು ಹೋಯಿತೆಂದು ಆಡಿಕೊಂಡಿದ್ದರು. ಆದರೆ, ಈ ಫಲಿತಾಂಶದಿಂದ ನಗರ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದಿಟಛಿ ಕೆಲಸ ಮಾಡಲು ಪ್ರೇರಣೆ ನೀಡಿದೆ. ಇನ್ನಾದರೂ ಪ್ರತಿಪಕ್ಷಗಳು ಕಾಂಗ್ರೆಸ್ ಕತೆ ಮುಗಿದೇ ಹೋಯಿತು ಎಂದು ಹೇಳುವುದನ್ನು ಬಿಡಬೇಕೆಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಯಾಗಿ ಸ್ಪರ್ಧಿಸಿದ್ದರೆ, ನಗರ ಪ್ರದೇಶಗಳಲ್ಲಿ ಬಿಜೆಪಿ ಧೂಳಿಪಟವಾಗುತ್ತಿತ್ತು. ಆದರೆ, ಇದು ಕಾರ್ಯಕರ್ತರ ಚುನಾವಣೆಯಾಗಿರುವುದರಿಂದ ನಾವು ಸ್ನೇಹಭಾವದಿಂದ ಸ್ಪರ್ಧೆ ಮಾಡಿದ್ದೆವು. ಎಲ್ಲಿಯೂ ಮೈತ್ರಿ ಧರ್ಮಕ್ಕೆ ಚ್ಯುತಿ ಬಾರದಂತೆ ಎರಡೂ ಪಕ್ಷಗಳ ನಾಯಕರು ನಡೆದುಕೊಂಡೆವು. ಪ್ರತಿಪಕ್ಷದ ನಾಯಕರು ಚುನಾವಣೆಯಲ್ಲಿ ಮಾತಿನ ದಾಳಿ ನಡೆದು ಸರ್ಕಾರಕ್ಕೆ ಸಂಕಷ್ಟ ಬರುತ್ತದೆ ಎಂದು ಕಾಯುತ್ತಿದ್ದರು. ಅಂತವರಿಗೆ ನಿರಾಸೆಯಾಗಿದೆ ಎಂದರು.
2013ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಶೇ.40ರಷ್ಟು ಸ್ಥಾನಗಳನ್ನು ಪಡೆದುಕೊಂಡಿದ್ದೆವು. ಈ ಬಾರಿ ಶೇ.38ರಷ್ಟು ಸ್ಥಾನಗಳನ್ನು ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದವರೂ ಕಾಂಗ್ರೆಸ್ ಜತೆ ಸೇರುತ್ತಾರೆ.
ದಕ್ಷಿಣ ಕನ್ನಡ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯಾಗಿಲ್ಲ.ಬೆಳಗಾವಿಯಲ್ಲಿ ಪಕ್ಷದ ಚಿಹ್ನೆ ಬಿಟ್ಟು ಸ್ಪರ್ಧೆ ಮಾಡುವ ಪರಿಪಾಠ ರೂಢಿಸಿಕೊಂಡು ಬಂದಿದ್ದಾರೆ. ಎಲ್ಲ ಪಕ್ಷಗಳೂ ಅದೇ ರೀತಿ ಮಾಡಿದ್ದಾರೆ. ಇದರಿಂದ ಯಾರೂ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಜಿಲ್ಲಾ ನಾಯಕರ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಈ ಚುನಾವಣಾ ಫಲಿತಾಂಶ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನವಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ. ಲೋಕಸಭೆ ಚುನಾವಣೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.