Advertisement

ಅಪಾಯಕಾರಿಯಾಗಿಯೇ ಉಳಿದ ಪಾಜೆಗುಡ್ಡೆ ರಸ್ತೆ ತಿರುವು

12:32 AM Mar 25, 2021 | Team Udayavani |

ಕಾರ್ಕಳ: ಬಜಗೋಳಿ-ಹೊಸ್ಮಾರು ರಾಜ್ಯ ಹೆದ್ದಾರಿಯ ಪಾಜೆಗುಡ್ಡೆ ಅಪಾಯಕಾರಿ ತಿರುವನ್ನು ವಿಸ್ತರಿಸುವ ಕೆಲಸ ನಡೆದರೂ ಈಗಲೂ ತಿರುವು ಅಪಾಯಕಾರಿಯಾಗಿಯೇ ಉಳಿದಿದೆ. ಇದನ್ನು ಪರಿಹರಿಸಲು ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗಳು ಸಮನ್ವಯ ಸಾಧಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

Advertisement

ಪಾಜೆಗುಡ್ಡೆ ತಿರುವು ಸರಿಪಡಿಸುವ ಕಾಮಗಾರಿ ಯನ್ನು ಮಳೆಹಾನಿ ಯೋಜನೆಯಡಿ ಪಿಬ್ಲ್ಯುಡಿ ಇಲಾಖೆ ಇತ್ತೀಚೆಗೆ ನಡೆಸಿತ್ತು. 22 ಲಕ್ಷ ರೂ. ವೆಚ್ಚದಲ್ಲಿ ವಿಸ್ತರಣೆ ಕೆಲಸ ನಡೆಸಲಾಗಿತ್ತು. ಜೆಸಿಬಿ ಯಂತ್ರಗಳ ಮೂಲಕ ರಸ್ತೆ ವಿಸ್ತರಣೆ ನಡೆಸಿದ್ದರೂ, ಅದರಿಂದ ಪ್ರಯೋಜನವಾಗಿಲ್ಲ. ಪ್ರಯಾಣದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದ್ದರೂ ತಿರುವು ಈಗಲೂ ಹಾಗೆಯೇ ಇದೆ. ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

ಇಲ್ಲಿ ಕಾಮಗಾರಿ ನಡೆಸಲು ಅರಣ್ಯ ಕಾನೂನು ತೊಡಕಿದೆ. ತಿರುವಿನ ಇಕ್ಕೆಲಗಳಲ್ಲಿ ಅರಣ್ಯ ಭೂಮಿ ಇದೆ, ಮರಗಳಿವೆ. ರಸ್ತೆಯೂ “ಯೂ’ ಮಾದರಿಯಲ್ಲಿದೆ. ರಸ್ತೆ ವಿಸ್ತರಣೆಗೊಳಿಸಲು ಮರಗಳ ತೆರವು ಆಗಬೇಕಿದ್ದು ಕಾನೂನು ಪ್ರಕಾರ ಆಗಬೇಕಿದೆ.

ಅಪಾಯ ಜೀವಂತ
ಇತ್ತೀಚೆಗೆ ನಡೆಸಿದ ಕಾಮಗಾರಿ ವೇಳೆ ತಿರುವು ಬದಿಯಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ. ರಸ್ತೆ ಸ್ವಲ್ಪ ತಗ್ಗಿಸಲಾಗಿದ್ದು, ರಸ್ತೆ ಹೊಂಡ ದುರಸ್ತಿ ಮಾಡಲಾಗಿದೆ. ಹೊರತು ಬೇರೇನೂ ಆಗಿಲ್ಲ. ಆದ್ದರಿಂದ ಅಪಾಯದ ಸನ್ನಿವೇಶ ಜೀವಂತವಾಗಿದೆ.

ಕೈತೊಳೆದುಕೊಳ್ಳೋ ಕೆಲಸ ಬೇಡ
ಸ್ಥಳದಲ್ಲಿ ಈಗ ಅಲ್ಪ ಕಾಮಗಾರಿ ನಡೆದಿದ್ದರೂ ಶಾಶ್ವತವಾಗಿ ಪರಿಹಾರವಾಗಿಲ್ಲ. ಅರಣ್ಯ ಇಲಾಖೆ ಅಡ್ಡಿ ನಿವಾರಿಸಿ, ಶಾಶ್ವತವಾಗಿ ಈ ತಿರುವನ್ನು ನೇರಗೊಳಿಸಿ ಅಭಿವೃದ್ಧಿ ಪಡಿಸಿದರಷ್ಟೇ ಪ್ರಯೋಜನವಾಗಬಹುದು. ಅಲ್ಪ ಸ್ವಲ್ಪ ಹಣವನ್ನು ಕಾಮಗಾರಿಗೆ ಬಳಸಿ ಕೈ ತೊಳೆದುಕೊಂಡರೆ ಏನೂ ಪ್ರಯೋಜನವಾಗದು ಎನ್ನುತ್ತಾರೆ ಸ್ಥಳಿಯರು.

Advertisement

ಕಾಮಗಾರಿಗೆ ಅವಕಾಶವಿದೆ
ರಸ್ತೆ ಅಭಿವೃದ್ಧಿಗೆ ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿದಲ್ಲಿ ಅನುಮತಿ ದೊರೆಯುತ್ತದೆ. ಇದರ ಪ್ರಕಾರ ಅರ್ಜಿ ಸಲ್ಲಿಸಿ ಅನುಮತಿ ಪಡೆದು ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಿದೆ.
-ಪ್ರಕಾಶ್‌, ಆರ್‌ಎಫ್ಓ, ಮೂಡಬಿದಿರೆ ಅರಣ್ಯ ವಿಭಾಗ

50 ಲ.ರೂ. ಅನುದಾನ ಅಗತ್ಯ
ಭೌಗೋಳಿಕವಾಗಿ ತಿರುವು ಅಪಾಯಕಾರಿಯಾಗಿದೆ. ತಿರುವನ್ನು ಸಾಧ್ಯವಾದಷ್ಟು ತಗ್ಗಿಸಿ, ನೇರಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ. ವಾಹನ ಸವಾರರೇ ಸಾಕಷ್ಟು ಎಚ್ಚರಿಕೆಯಿಂದ ಸುರಕ್ಷಿತ ವಾಹನ ಚಾಲನೆ ಮಾಡಬೇಕು. ಕನಿಷ್ಠ 50 ಲಕ್ಷ ರೂ ಅನುದಾನ ದೊರೆತಲ್ಲಿ ಉತ್ತಮವಾಗಿಸಲು ಸಾಧ್ಯ.
-ಸುಂದರ , ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಪಿಡಬ್ಲ್ಯುಡಿ

Advertisement

Udayavani is now on Telegram. Click here to join our channel and stay updated with the latest news.

Next