Advertisement

ಈಡೇರದ ನಿರೀಕ್ಷೆ, ಕನಸಾಗೇ ಉಳಿದ ಅಭಿವೃದ್ಧಿ

07:08 AM Feb 08, 2019 | Team Udayavani |

ಮಂಡ್ಯ: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಭರವಸೆಗಳು ಈಡೇರಿಲ್ಲ. ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಷ್ಟು ಹೊಸ ಘೋಷಣೆಗಳನ್ನು ಮಾಡಿದ್ದಾರೆ.

Advertisement

ಮೈಷುಗರ್‌ ಸಕ್ಕರೆ ಕಾರ್ಖಾನೆಗೆ ಬದಲಾಗಿ ಹೊಸ ಸಕ್ಕರೆ ಕಾರ್ಖಾನೆಯನ್ನು ತೆರೆಯುವುದು. ಇದರ ಜೊತೆಗೆ ಎಥೆನಾಲ್‌ ಘಟಕವನ್ನು ನಿರ್ಮಾಣ ಮಾಡುವುದು, ವಿ.ಸಿ.ಫಾರಂನಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವುದು, ಕುಡಿಯುವ ನೀರಿನ ಯೋಜನೆಗಳಿಗೆೆ ವಿಶೇಷ ಆದ್ಯತೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.

ಹಳೆಯ ನಿರೀಕ್ಷೆಗಳೇ ಸಾಕಾರಗೊಳ್ಳದ ಹಿನ್ನೆಲೆಯಲ್ಲಿ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದಕ್ಕೆ ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಳೆದ ಬಜೆಟ್‌ನಲ್ಲಿ ಮಂಡ್ಯ ನಗರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ಘೋಷಣೆ ಮಾಡಲಾಗಿತ್ತು. ಇದುವರೆಗೂ ಒಂದೇ ಒಂದು ರಸ್ತೆಯೂ ಅಭಿವೃದ್ಧಿ ಕಾಣಲೇ ಇಲ್ಲ. ಹಳ್ಳ-ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ನಗರದ ಜನರು ಸರ್ಕಸ್‌ ಮಾಡಿ ಸಾಕಾಗಿ ಹೋಗಿದ್ದಾರೆ. ಹೊಸದಾಗಿ ರಸ್ತೆಗಳನ್ನು ನಿರ್ಮಾಣ ಮಾಡಿ ನಗರ ಸೌಂದರ್ಯ ಹೆಚ್ಚಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ.

ಹೊಸ ಕಾರ್ಖಾನೆ ಭರವಸೆ: ಮೈಷುಗರ್‌ ಕಾರ್ಖಾನೆಯ ಪುನಃಶ್ಚೇತನ ಸಾಧ್ಯವೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಳೇ ಕಾರ್ಖಾನೆಗೆ ಈಗಾಗಲೇ 400 ಕೋಟಿ ರೂ.ಗೂ ಅಧಿಕ ಹಣವನ್ನು ವಿವಿಧ ಸರ್ಕಾರಗಳು ನೀಡಿದ್ದರೂ ಪುನಶ್ಚೇತನ ಕಂಡಿಲ್ಲ. ಯಂತ್ರೋಪಕರ ಣಗಳ ದುರಸ್ತಿ ಹೆಸರಿನಲ್ಲಿ ಹಣ ಪೋಲಾಗುತ್ತಿ ದೆಯೇ ವಿನಃ ಕಾರ್ಖಾನೆ ಸುಸ್ಥಿತಿಗೆ ಬರುತ್ತಿಲ್ಲ.

ಆ ಹಿನ್ನೆಲೆಯಲ್ಲಿ ಹಳೆಯ ಕಾರ್ಖಾನೆಗೆ ಹಣ ನೀಡುವ ಬದಲು ಹೊಸ ಸಕ್ಕರೆ ಕಾರ್ಖಾನೆಯನ್ನು ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಸ್ಥಾಪಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಹೊಸ ಸಕ್ಕರೆ ಕಾರ್ಖಾನೆ ಲಾಭದಾಯಕವಲ್ಲ ಎಂದು ಆರ್ಥಿಕ ಇಲಾಖೆ ಹೇಳಿರುವುದನ್ನೂ ಸ್ವತಃ ಮುಖ್ಯ ಮಂತ್ರಿಗಳೇ ಪತ್ರಿಕೆಗಳಿಗೆ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗ ಲಿದೆಯೇ ಅಥವಾ ಇಲ್ಲವೇ ಎಂಬ ಜಿಜ್ಞಾಸೆಯೂ ಕಾಡುತ್ತಿದೆ. ಇದರೊಂದಿಗೆ ಎಥನಾಲ್‌ ಘಟಕದ ಭರವಸೆ ಏನಾಗುವುದೋ ಎಂಬ ಕುತೂಹಲವೂ ಮೂಡಿದೆ.

Advertisement

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ, ಬೆಳಗೊಳ ಸುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಂಬಂಧ ಈಗಾಗಲೇ ಸಚಿವ ಸಂಪುಟ ಅನುಮೋದನೆ ದೊರಕಿದ್ದು, ಚಾಲನೆ ನೀಡುವುದಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಮಿಮ್ಸ್‌ ಆಸ್ಪತ್ರೆಯ ಅಭಿವೃದ್ಧಿಗೆ 30 ಕೋಟಿ ರೂ. ಹಣ ನೀಡಲಾಗಿತ್ತು. ಅದು ಇನ್ನೂ ಬಿಡುಗಡೆ ಯಾಗಿಲ್ಲ. ಆದರೂ ಕ್ಯಾನ್ಸರ್‌ ಆಸ್ಪತ್ರೆ, ವಾರ್ಡ್‌ಗಳು ಹಾಗೂ ಆಡಳಿತಾತ್ಮಕ ಕಚೇರಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ.

ಇಸ್ರೇಲ್‌ ಕೃಷಿ ಆರಂಭವಾಗಿಲ್ಲ: ಇಸ್ರೇಲ್‌ ಮಾದರಿಯ ಕೃಷಿಯನ್ನು ವಿ.ಸಿ.ಫಾರಂನಲ್ಲಿ ಆರಂಭಿ ಸಲಾಗುವುದು ಎಂದು ಹೇಳಲಾಗುತ್ತಿ ತ್ತಾದರೂ ಅದು ಈವರೆಗೆ ಕಾರ್ಯಗತಗೊಂಡಿಲ್ಲ. ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಆರಂಭಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಅಣೆಕಟ್ಟೆಗೆ ಅಪಾಯಕಾರಿ ಎಂಬ ಭಾವನೆ ಮೂಡಿ ಸಾರ್ವಜನಿಕರಿಂದ ಪ್ರತಿರೋಧ ಎದುರಾಗಿದೆ. ಗ್ರಾಮಗಳನ್ನು ಸ್ಥಳಾಂತರ ಮಾಡುವ ಭೀತಿ, ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಆತಂಕದೊಂದಿಗೆ ಯೋಜನೆಗೆ ಚಾಲನೆ ಇನ್ನೂ ದೊರಕಿಲ್ಲ.

ಸಾಲ ಮನ್ನಾ ಚಿತ್ರಣ ಸಿಕ್ಕಿಲ್ಲ: ರೈತರ ಸಾಲ ಮನ್ನಾ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಯಾವುದೇ ರೈತರ ಸಾಲ ಮನ್ನಾ ಆಗಿಲ್ಲ. ಬಜೆಟ್‌ನಲ್ಲಿ ಸಾಲ ಮನ್ನಾ ಬಗ್ಗೆ ಅಧಿಕೃತ ಚಿತ್ರಣ ಹೊರಬೀಳುವ ಸಾಧ್ಯತೆಗಳಿವೆ ಎಂದು ನಂಬಲಾಗಿದೆ. ಅದು ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಾರೆ ಜಿಲ್ಲೆಯ ಜನರು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಗೆಲುವು ದೊರಕಿಸಿದ್ದಾರೆ. ಆ ಋಣ ತೀರಿಸುವ ಸಲುವಾಗಿ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಬಹುದೆಂಬ ಆಶಾಭಾವನೆಯಂತೂ ಜನರಲ್ಲಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next