ಬೆಂಗಳೂರು: ಜನಸೇವೆ ಮಾಡಿ, ಜನಮೆಚ್ಚುಗೆ ಗಳಿಸಬೇಕಾಗಿದ್ದ ರಾಜಕಾರಣಿಗಳು ರೆಸಾರ್ಟ್ ಯಾತ್ರೆಯಲ್ಲಿ ತೊಡಗಿರುವುದು ಇಡೀ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನೇ ಅಣಿಕಿಸುವಂತಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.
ಪದ್ಮಭೂಷಣ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಂಸ್ಥೆ, ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರನ್ನು ಅಭಿನಂದಿಸಿ ಮಾತನಾಡಿದರು.
ನಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಹಣದಾಸೆಗೆ ಒಳಗಾಗಿ ರಾಜಕೀಯ ಬದ್ಧತೆಯನ್ನೇ ಮರೆತಿದ್ದಾರೆ. ರೆಸಾರ್ಟ್ ಯಾತ್ರೆ ಮಾಡಲು ನಾವು ಅವರನ್ನು ಆಯ್ಕೆ ಮಾಡಿಲ್ಲ ಎಂಬುದನ್ನು ಶಾಸಕರು ಮೊದಲು ಅರಿತುಕೊಳ್ಳಬೇಕು ಎಂದರು.
ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಜನಪ್ರತಿನಿಧಿಗಳಿಗೂ ಇದು ಬೇಕಾಗಿಲ್ಲ. ಈ ವಿಚಾರದಲ್ಲಿ ಗೋಕಾಕ್ ಚಳವಳಿಯಂತಹ ಹೋರಾಟ ಅನಿವಾರ್ಯವಾಗಿದೆ ಎಂದರು.
ಮತದಾರ ಮೂಕ ಪ್ರೇಕ್ಷಕ: ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಮುಖಂಡರು ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಅತ್ತ ವಿರೋಧ ಪಕ್ಷ ಬಿಜೆಪಿ ಅಧಿಕಾರ ಕಸಿದುಕೊಳ್ಳಲು ಹವಣಿಸುತ್ತಿದೆ. ಇವರಿಬ್ಬರ ನಡುವೆ ಮತದಾರ ಮೂಕ ಪ್ರೇಕ್ಷಕನಾಗಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿ ಯಾವುದೇ ಜನ ಪರ ಕೆಲಸಗಳು ನಡೆದಿಲ್ಲ. ಆಡಳಿತ ಪಕ್ಷಕ್ಕೆ ಸರಿಯಾಗಿ ಅಧಿಕಾರ ನಡೆಸಲು ಆಗುತ್ತಿಲ್ಲ. ಮತದಾರರು ಕುರಿಗಳಾದರೆ ಅಧಿಕಾರ ತೋಳಗಳ ಪಾಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಪದ್ಮಭೂಷಣ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಶಂಕರ್ ಹೂಗಾರ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಇದ್ದರು.