Advertisement
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಹಲವು ಪ್ರಯತ್ನಗಳನ್ನು ನಡೆಸಿದರು ಇಂದಿಗೂ ಅನೇಕ ಮಹಿಳೆಯರು ಶೋಷಣೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂತಹ ಮಹಿಳೆಯರಿಗೆ ರಕ್ಷಣೆ ಒದಗಿಸಿ, ಸಾಂತ್ವನ ನೀಡಿ, ನ್ಯಾಯ ಒದಗಿಸುವ ಉದ್ದೇಶದಿಂದ ರಕ್ಷಾ ತಂಡವನ್ನು ಆರಂಭಿಸಲಾಗುತ್ತಿದೆ.
Related Articles
Advertisement
ರಕ್ಷಾ ಆರಂಭಕ್ಕೆ ಕಾರಣ: ಬಹುತೇಕ ಸಂದರ್ಭಗಳಲ್ಲಿ ಶೋಷಣೆ ಅಥವಾ ದೌರ್ಜನ್ಯಕ್ಕೆ ಸಿಲುಕುವ ಮಹಿಳೆಯರು ನ್ಯಾಯಕ್ಕಾಗಿ ಹೋರಾಟ ನಡೆಸುವುದು ತೀರಾ ಕಡಿಮೆ. ಇದಕ್ಕೆ ಸಾಕ್ಷಿಯೆಂಬಂತೆ ಮೈಸೂರಿನ ಮೇಟಗಳ್ಳಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತಂದೆಯೇ ತನ್ನ ಎರಡು ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಆದರೆ, ಮೃತ ಬಾಲಕಿಯ ತಾಯಿಗೆ ನ್ಯಾಯಕ್ಕಾಗಿ ಏನು ಮಾಡಬೇಕೆಂಬುದು ತಿಳುವಳಿಕೆ ಇಲ್ಲದೆ ಆಕೆ ಸುಮ್ಮನಾಗುತ್ತಿದ್ದಳು.
ಅಷ್ಟರಲ್ಲೇ ಆಕೆಯ ನೆರವಿಗೆ ಧಾವಿಸಿದ ಅಂಗನವಾಡಿ ಕಾರ್ಯಕರ್ತೆ, ಕೆಲವು ಸಂಘಟನೆಯ ಬೆಂಬಲದೊಂದಿಗೆ ಪ್ರಕರಣ ದಾಖಲಿಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣವನ್ನು ಮುಖ್ಯವಾಗಿಸಿಕೊಂಡು ಶೋಷಿತ ಮಹಿಳೆಯರ ದನಿಯಾಗಿ ಹೋರಾಡಲು ರಕ್ಷಾ ತಂಡವನ್ನು ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧ ಮಾಹಿತಿ ನೀಡಿದರು.
ಗುಲಾಬಿ ಗ್ಯಾಂಗ್ ಸ್ಫೂರ್ತಿ: ಮೈಸೂರಿನಲ್ಲಿ ರಕ್ಷಾ ತಂಡ ಆರಂಭಕ್ಕೆ ಉತ್ತರ ಪ್ರದೇಶದಲ್ಲಿನ ಗುಲಾಬಿ ಗ್ಯಾಂಗ್ ಸ್ಫೂರ್ತಿಯಾಗಿದೆ. ಉತ್ತರ ಪ್ರದೇಶದ ಬಾಂಡ ಜಿಲ್ಲೆಯಲ್ಲಿ ಸಂಪತ್ ಪಾಲ್ ಎಂಬ ಮಹಿಳೆ 2006ರಲ್ಲಿ ಪ್ರಾರಂಭಿಸಿರುವ ಗುಲಾಬಿ ಗ್ಯಾಂಗ್ ಮಹಿಳೆಯರ ಮೇಲಿನ ಅನ್ಯಾಯ, ಅತ್ಯಾಚಾರ, ಕೌಟುಂಬಿಕ ಕಲಹಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಪ್ರಸ್ತುತ ಅತ್ಯಧಿಕ ಸದಸ್ಯರನ್ನು ಹೊಂದಿರುವ ಗುಲಾಬಿ ಗ್ಯಾಂಗ್, ಮಹಿಳಾ ಸಬಲೀಕರಣ, ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳು, ಸ್ವ ಉದೋಗಕ್ಕೆ ಪ್ರೇರಣೆ ಮತ್ತು ತರಬೇತಿಯನ್ನು ನೀಡುತ್ತಿದೆ. ಈ ತಂಡದಿಂದ ಪ್ರೇರಣೆಗೊಳಗಾಗಿರುವ ಕೆ.ರಾಧ, ಮೈಸೂರಿನಲ್ಲೂ ಮಹಿಳೆಯರಿಗಾಗಿ ವಿಶಿಷ್ಠವಾದ ತಂಡವನ್ನು ರಚನೆ ಮಾಡುವ ಚಿಂತನೆ ನಡೆಸಿ, ರಕ್ಷಾ ಹೆಸರಿನ ತಂಡವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕಾರ್ಯಾರಂಭ ಮಾಡಿರುವುದು ವಿಶೇಷ.
ಶೋಷಿತ ಮಹಿಳೆಯರ ದನಿಯಾಗಿ ಹೋರಾಡಲು ತಂಡವನ್ನು ಪ್ರಾರಂಭಿಸುವ ಸ್ವಂತ ಆಲೋಚನೆಯಿಂದ ರಕ್ಷಾ ತಂಡವನ್ನು ಆರಂಭಿಸಲಾಗಿದೆ. ಈ ತಂಡದ ಸದಸ್ಯರು ಮಹಿಳೆಯರ ರಕ್ಷಣೆ ಮತ್ತು ಅರಿವು ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ರಕ್ಷಾ ತಂಡವನ್ನು ಸಂಘಟಿಸಲಿದ್ದು, ಪ್ರಸ್ತುತ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ.-ಕೆ.ರಾಧ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. * ಸಿ. ದಿನೇಶ್