Advertisement

ಸ್ವಾಮಿನಾಥನ್‌ ವರದಿ ಜಾರಿ ಮಾಡಿ

12:11 PM Jan 13, 2017 | |

ಕಲಬುರಗಿ: ಡಾ| ಸ್ವಾಮಿನಾಥನ್‌ ಆಯೋಗದ ವರದಿ ಶಿಫಾರಸು ಮಾಡಿದಂತೆ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 7500 ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಕೆ.ಕಾಂತಾ, ರೈತರ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಕೂಡಲೇ ತೊಗರಿ ಬೆಂಬಲ ಬೆಲೆಯನ್ನು 7500 ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. 

Advertisement

ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಕರ್ನಾಟಕ ರಾಜ್ಯ ಬೆಲೆ ಆಯೋಗವೇ ತೊಗರಿ ಬೆಲೆಯನ್ನು 6500 ರೂ.ಗೆ ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಸಹ ರಾಜ್ಯ ಸರ್ಕಾರ ಕೇಂದ್ರದ 5050ರೂ.ಗೆ ಕೇವಲ 500 ರೂ.ಗಳ ಪ್ರೋತ್ಸಾಹ ಧನ ಸೇರಿಸಿ 5500 ರೂ. ಬೆಲೆಯಲ್ಲಿ ತೊಗರಿ ಖರೀದಿಗೆ ಮುಂದಾಗಿರುವುದು ರೈತರನ್ನು ಸಂಕಷ್ಟದಿಂದ ಪಾರು ಮಾಡಲು ವಿಫಲವಾಗಿದೆ ಎಂದರು. 

ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತಗೊಂಡಿದೆ. ರಾಜ್ಯ ಸರ್ಕಾರದ ಕ್ರಮ ಅತ್ಯಲ್ಪವಾಗಿದೆ. ಕೂಡಲೇ ಸರ್ಕಾರ 1500 ರೂ.ಗಳ ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು. ತಾಲೂಕು ಮಟ್ಟದಲ್ಲಿನ ಖರೀದಿ ಕೇಂದ್ರಗಳನ್ನು ಪ್ರತಿ ಗ್ರಾ.ಪಂ. ಮಟ್ಟಕ್ಕೆ ವಿಸ್ತರಿಸಬೇಕು ಎಂದರು. 

ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದಾಗ ಅವರು ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮಾತನಾಡಿ, 1000 ರೂ.ಗಳ ಪ್ರೋತ್ಸಾಹ ಧನ ನೀಡುವ ಕುರಿತು ಸಲಹೆ ನೀಡಿದ್ದಾರೆ.

ಆ ಸಲಹೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿತು. ಕೂಡಲೇ ಆ ಕ್ರಮವಾದರೂ ಕೈಗೊಳ್ಳಬೇಕೆಂದು ಆಗ್ರಹಿಸಿದರು.ದೇಶಕ್ಕೆ ಸುಮಾರು 222 ಲಕ್ಷ ಟನ್‌ ತೊಗರಿ ಅಗತ್ಯವಿದ್ದು, ಈಗಾಗಲೇ 175 ಲಕ್ಷ ಟನ್‌ ಉತ್ಪಾದನೆ ಮಾಡಲಾಗುತ್ತಿದೆ. 55 ಲಕ್ಷ ಟನ್‌ ಕೊರತೆಯಿದ್ದು, ಆ ಕೊರತೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಈ ಸಂಬಂಧ ಶೇ.30 ರಷ್ಟು ಆಮದು ಸುಂಕ ವಿಧಿಸಬೇಕೆಂದರು. 

Advertisement

ತೊಗರಿ ಮಂಡಳಿಯನ್ನು ರೈತರ ಹಿತದೃಷ್ಟಿಯಿಂದ ಹೆಸರು ಹಾಗೂ ಉದ್ದು ಸೇರಿಸಿ ಕೆಎಂಎಫ್‌ ಮಾದರಿಯಲ್ಲಿ ಮಂಡಳಿ ಬಲಪಡಿಸಲು ಒತ್ತಾಯಿಸಿದ ಅವರು, ಸರ್ಕಾರ ಕೂಡಲೇ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಿ ಗ್ರಾ.ಪಂ.ಮಟ್ಟದಲ್ಲಿ ಖರೀದಿಸಬೇಕು. ರೈತರ ಬೆಳೆಗೆ 15 ಸಾ.ರೂ.ಗಳ ಪರಿಹಾರ ಧನ ನೀಡಬೇಕು ಹಾಗೂ ರೈತರ ಬ್ಯಾಂಕ್‌ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲರು ಜನವರಿ ಕೊನೆ ವಾರದಲ್ಲಿ ಮುಖಂಡರೊಂದಿಗೆ ಸೇರಿ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಲು ಒಪ್ಪಿದ್ದು, ಕೂಡಲೇ ರಾಜ್ಯ ಸರ್ಕಾರ ನಿಯೋಗದ ಮೂಲಕ ದೆಹಲಿಯಲ್ಲಿ ಆಹಾರ ಖಾತೆಯ ಸಚಿವ ರಾಮವಿಲಾಸ ಪಾಸ್ವಾನ, ಕೇಂದ್ರ ಕೃಷಿ ಸಚಿವ ರಾಧಾ ಮೋಹನಸಿಂಗ್‌ ಹಾಗೂ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ರಿಗೆ ಭೇಟಿ ಮಾಡಬೇಕು.

ರೈತ ಮುಖಂಡರನ್ನು ಸಹ ಸೇರಿಸಬೇಕು ಎಂದು ಒತ್ತಾಯಿಸಿ, ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ರಸ್ತೆ ತಡೆಯಲ್ಲಿ ಅಂಬರೀಶಗೌಡ ಪಾಟೀಲ, ಮೌಲಾ ಮುಲ್ಲಾ, ಮಂಜುನಾಥಗೌಡ, ಭೀಮಾಶಂಕರ ಮಾಡಿಯಾಳ, ಶರಣಬಸಪ್ಪ ಮಮಶೆಟ್ಟಿ, ಸುಭಾಷ ಹೊಸ್ಮನಿ, ಅಶೋಕ ಮ್ಯಾಗೇರಿ, ಗೌಡಪ್ಪಗೌಡ ಹಾಗೂ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next