Advertisement
ಸಿಡಬ್ಲ್ಯುಸಿ ವರದಿಯಲ್ಲಿರುವ ದತ್ತಾಂಶದ ಪ್ರಕಾರ, ಹತ್ತು ವರ್ಷಗಳಲ್ಲಿ ದೇಶಾದ್ಯಂತ ಬೀಸುತ್ತಿರುವ ಉಷ್ಣ ಹವೆ ಹೆಚ್ಚಾಗಿದ್ದು, ಅದರ ಪರಿಣಾಮವಾಗಿ ದೇಶದ ನದಿ, ಅಣೆಕಟ್ಟು ಮತ್ತು ಇನ್ನಿತರ ಜಲಮೂಲಗಳ ನೀರಿನ ಪ್ರಮಾಣ ಶೇ. 21ರಷ್ಟು ಕಡಿಮೆಯಾಗಿದೆ. ಉತ್ತರ ಭಾರತದಲ್ಲಿ ಸಿಂಧೂ ಮತ್ತು ನರ್ಮದಾ, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳನ್ನು ಆಶ್ರಯಿಸಿರುವ ಕೆಲವು ನದಿಗಳನ್ನು ಬಿಟ್ಟರೆ ಮಿಕ್ಕೆಲ್ಲವುಗಳಲ್ಲಿ ನೀರಿನ ಕೊರತೆ ಈಗಾಗಲೇ ಸೃಷ್ಟಿಯಾಗಿದೆ. ಗುಜರಾತ್‌ನ ಕಛ್, ತಾಪಿ, ಸಬರ್ಮತಿ ನದಿ, ಕರ್ನಾಟಕದ ಕಾವೇರಿ, ಗೋದಾವರಿ, ಕೃಷ್ಣಾ, ಛತ್ತೀಸ್‌ಗಢದ ಮಹಾನದಿ ಸೇರಿದಂತೆ ಒಟ್ಟು 12 ನದಿಗಳು ಮುಂದೊಂದು ದಿನ ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿವೆ. ಆಂಧ್ರ, ಮಹಾರಾಷ್ಟ್ರ, ಗುಜರಾತ್‌ನ ಹಲವಾರು ಸಣ್ಣ ಅಣೆಕಟ್ಟುಗಳು ಈಗಾಗಲೇ ಬರಿದಾಗಿವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಈ ವರ್ಷ, ಮಾರ್ಚ್‌ನಿಂದ ಎಪ್ರಿಲ್ ವರೆಗೆ ಬರಬೇಕಿದ್ದ ಮುಂಗಾರು ಪೂರ್ವ ಮಳೆ ಶೇ.27ರಷ್ಟು ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ದೇಶದ ಅರ್ಧಕ್ಕೂ ಹೆಚ್ಚು ಭಾಗ ಬರಗಾಲಕ್ಕೆ ತುತ್ತಾಗಿದೆ ಎಂದಿದೆ. ಜತೆಗೆ, 2019 ಎಲ್ನಿನೋ ವರ್ಷ ಎಂದು ಪರಿಗಣಿತವಾಗಿದೆ ಎಂದೂ ಇಲಾಖೆ ತಿಳಿಸಿದೆ.