ಮೂಡುಬಿದಿರೆ: `ಕೊರತೆಗಳ ರೋಗ ಪೀಡಿತ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ’ ಶೀರ್ಷಿಕೆಯಡಿ ಉದಯವಾಣಿ ಸುದಿನದಲ್ಲಿ ಡಿ.22ರಂದು ಪ್ರಕಟವಾದ ಸಚಿತ್ರವರದಿಯ ಪ್ರತಿಯನ್ನಿರಿಸಿಕೊಂಡು ಓದುಗರೋರ್ವರು (ಪುತ್ತೂರಿನ ಡಾ. ಎಸ್.ಎನ್. ಅಮೃತ ಮಲ್ಲ) ಅವರು ರಾಜ್ಯ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಮಿಂಚಂಚೆ ಮೂಲಕ ಶುಕ್ರವಾರವೇ ರವಾನಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರು ` ಮುಂದಿನ ಅಗತ್ಯ ಕ್ರಮಕ್ಕಾಗಿ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ’ ಈ ವರದಿಯನ್ನು ಫಾರ್ವರ್ಡ್ ಮಾಡಿರುವುದಾಗಿ ಇದೀಗ ತಿಳಿದುಬಂದಿದೆ.
ಈ ವರದಿಯ ಪ್ರತಿ ಮಿಂಚಂಚೆ ಮೂಲಕ ದ.ಕ. ಜಿಲ್ಲಾಧಿಕಾರಿ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ರವಾನೆಯಾಗಿರುವುದಾಗಿ ಅಧಿಕೃತ ಮಾಹಿತಿ ಲಭಿಸಿದೆ. ಆಡಳಿತ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ ಸಹಿತ ಇರುವ 53 ಹುದ್ದೆಗಳಲ್ಲಿ 31 ಹುದ್ದೆಗಳು ಖಾಲಿ ಇರುವುದೂ ಸೇರಿದಂತೆ ಆಸ್ಪತ್ರೆಯ ದುಸ್ಥಿತಿಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೂಡುಬಿದಿರೆಗೆ ಬಂದರೂ ಸರಕಾರಿ ಆಸ್ಪತ್ರೆಗೆ ಭೇಟಿ ನೀಡದ ಆರೋಗ್ಯ ಸಚಿವರು: ವ್ಯಾಪಕ ಟೀಕೆ
ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವರಾಗಿ ಇದೇ ಮೊದಲ ಬಾರಿಗೆ ಮೂಡುಬಿದಿರೆಗೆ ಆಗಮಿಸಿದ್ದ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸಿಬಂದಿ ಕೊರತೆ, ಮೂಲಸೌಲಭ್ಯ, ಸೌಕರ್ಯಗಳ ಕೊರತೆಗಳ ಕುರಿತಾಗಿ ಉದಯವಾಣಿ ಸುದಿನದಲ್ಲಿ ಶುಕ್ರವಾರ ಪ್ರಕಟವಾಗಿದ್ದ ವಿಶೇಷ ವರದಿಯ ಪ್ರತಿಗಳು ಶಾಸಕರೂ ಸೇರಿದಂತೆ ಹಲವರಿಂದ ಸಲ್ಲಿಕೆಯಾಗಿದ್ದವು. ತಾಲೂಕು ಆಡಳಿತ ಸೌಧದಲ್ಲಿ ನಡೆದ ಹಕ್ಕುಪತ್ರ ವಿತರಣೆಯ ಕಾರ್ಯಕ್ರಮದ ಬಳಿಕ ಈ ವರದಿಯ ಬಗ್ಗೆ ಸಚಿವರ ಪ್ರತಿಕ್ರಿಯೆ ಏನು ಎಂದು ಪತ್ರಕರ್ತರು ವಿಚಾರಿಸಿದಾಗ, `ಸಮುದಾಯ ಆರೋಗ್ಯಕೇಂದ್ರಕ್ಕೆ ಬರುತ್ತೇನಲ್ಲ , ಅಲ್ಲಿ ಹೇಳುತ್ತೇನೆ’ ಎಂದು ಉತ್ತರಿಸಿದರು.
ಪತ್ರಕರ್ತರು ನೇರ ಆಸ್ಪತ್ರೆಗೆ ಹೋಗಿ ಅಲ್ಲಿ ಶಾಸಕರು, ಪೊಲೀಸರೊಂದಿಗೆ ಸಚಿವರ ಬರೋಣವನ್ನು ನಿರೀಕ್ಷಿಸುತ್ತ ಕಾಯುತ್ತಿದ್ದಾಗ, ಸಚಿವ ದಿನೇಶ್ ಗುಂಡೂರಾವ್ ಖಾಸಗಿ ಶಿಕ್ಷಣಾಲಯವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದು ಶಾಸಕ ಉಮಾನಾಥ ಕೋಟ್ಯಾನ್, ಪತ್ರಕರ್ತರು, ಪೊಲೀಸರು, ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳು, ಸಂದರ್ಶಕ ಸಮಿತಿಯವರು ಯಾರಿಗೂ ಗೊತ್ತೇ ಆಗಿರಲಿಲ್ಲ. ಸ.ಆ.ಕೇಂದ್ರದಲ್ಲಿ ಸಚಿವರಿಗೆ ಸ್ವಾಗತ ಕೋರುವ ಬ್ಯಾನರ್ ಹಾಕಿಕೊಂಡು, ಕುಂದು ಕೊರತೆಗಳ ಪಟ್ಟಿಯನ್ನು ಒಳಗೊಂಡ ಮನವಿ ಪತ್ರವನ್ನು ಹಿಡಿದುಕೊಂಡು ಸಿಬಂದಿಗಳು ಕಾದದ್ದೇ ಬಂದಿತು. ಮತ್ತೆ ವಿಷಯ ತಿಳಿದು ಪತ್ರಕರ್ತರು ನೇರ ಸಚಿವರು ಹೋದತ್ತ ಧಾವಿಸಿ, ವಿದ್ಯಾಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೆ ಒಳದಾರಿಯಾಗಿ ಶೀಘ್ರವಾಗಿ ಸಮುದಾಯ ಆರೋಗ್ಯ ಕೇಂದ್ರ ತಲುಪಿದರು. ಅಲ್ಲಿ ಪೊಲೀಸರು, ಕೇಂದ್ರದ ಸಿಬಂದಿಗಳು ಕಾದು ಕುಳಿತಿದ್ದಂತೆಯೇ ಸೈರನ್ ಮೊಳಗಿಸಿಕೊಂಡು ಸಚಿವರ ಬೆಂಗಾವಲು ವಾಹನ ಸಾಗಿದ್ದನ್ನು ಗಮನಿಸಲಾಯಿತು. ಅದಾಗಲೇ ಸಚಿವರು ಮಂಗಳೂರಿನತ್ತ ಧಾವಿಸಿಯಾಗಿತ್ತು.
ಅಂತೂ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ `ಆರೋಗ್ಯ’ವಿಚಾರಿಸಲು ಬರುವೆನೆಂದಿದ್ದ ಆರೋಗ್ಯ ಸಚಿವರು ಹಾಗೆ ಮಾಡದೆ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದು, ಮರಳಿ ಬರುವಾಗಲಾದರೂ ಆಸ್ಪತ್ರೆಗೆ ಬಂದು ಮನವಿ ಸ್ವೀಕರಿಸಿ ವಾಪಾಸು ಹೋಗಬಹುದಾಗಿತ್ತು, ಹಾಗೆ ಮಾಡದೆ, ಯಾರಿಗೂ ಮಾಹಿತಿ ಕೊಡದೆ ವಾಪಾಸು ಹೋಗಿರುವುದು ಊರಿಗೆ ಬಂದರೂ ಕೇರಿಗೆ ಬರಲಿಲ್ಲ ಎಂಬಂತಾಗಿದೆ ಎಂದು ವ್ಯಾಪಕ ಟೀಕೆಗೊಳಗಾಗಿದೆ.