ಬೆಂಗಳೂರು: ನಾನು ಸಿದ್ಧಪಡಿಸಿದ್ದ ವರದಿ ನೈಜ ಮತ್ತು ವೈಜ್ಞಾನಿಕವಾಗಿದೆ. ವರದಿಯನ್ನು ನೋಡದೆ ಅದು ಅವೈಜ್ಞಾನಿಕವಾಗಿದೆ ಎನ್ನುವುದು ಸರಿಯಲ್ಲ. ವರದಿಯ ಮೂಲ ಪ್ರತಿ ಆಯೋಗದ ಕಚೇರಿಯಿಂದ ಕಣ್ಮರೆ ಆಗಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಜಾತಿ ಗಣತಿ ಎಂದೇ ಕರೆಯಲ್ಪಡುತ್ತಿರುವ ಎಲ್ಲ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ವಕೀಲ ಎಚ್. ಕಾಂತರಾಜು ಹೇಳಿದ್ದಾರೆ.
ಕಾಂತರಾಜು ಅವರ ಈ ಹೇಳಿಕೆಯಿಂದ “ಜಾತಿ ಗಣತಿ’ ವರದಿಯ ನೈಜತೆ ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ವರದಿಯ ಮೂಲ ಪ್ರತಿ ಕಣ್ಮರೆಯಾಗಿದೆ ಎಂಬ ಆರೋಪಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಗುರುವಾರ ಹೈಕೋರ್ಟ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂತರಾಜು, ಅಸಲಿಗೆ ನಾನು ತಯಾರಿಸಿ ಸರಕಾರಕ್ಕೆ ಕೊಟ್ಟಿದ್ದು ಎಲ್ಲ ವರ್ಗಗಳ ಮತ್ತು ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ವರದಿಯೇ ಹೊರತು ಅದು ಜಾತಿ ಗಣತಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ಆಧರಿಸಿ 2015ರಲ್ಲಿ ಸಿದ್ಧಪಡಿಸಲಾಗಿದ್ದ ವರದಿಯ ಮೂಲಪ್ರತಿ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019ರಲ್ಲಿ. ನಾನು ಇದ್ದಾಗ ಮೂಲಪ್ರತಿ ಇತ್ತು. ಈಗ ನಾನು ಹೊರಗೆ ಇರುವುದರಿಂದ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಕ್ಷೆ ವೇಳೆ 40 ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಜಾತಿ, ಲಿಂಗ, ಧರ್ಮ, ಅಸ್ತಿಪಾಸ್ತಿ ಸಹಿತ 55 ಬಗೆಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗಿದೆ. ಅನಂತರ ಕೂಲಂಕಷವಾಗಿ ಅಂಕಿ ಅಂಶಗಳ ಸಮೇತ ವರದಿ ಸಿದ್ಧಪಡಿಸಲಾಗಿದೆ ಎಂದರು.
ವರದಿಗೆ ಕಾರ್ಯದರ್ಶಿಯ ಸಹಿ ಇಲ್ಲ ಎನ್ನುವುದೂ ಸರಿಯಲ್ಲ. ಅದರಲ್ಲಿ ಅನೇಕ ಸಂಪುಟಗಳಿವೆ. ಇವುಗಳಲ್ಲಿ ಒಂದು ಸಂಪುಟಕ್ಕೆ ಮಾತ್ರವೇ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದು ಕಾಂತರಾಜು ಸ್ಪಷ್ಟಪಡಿಸಿದರು. ಒಕ್ಕಲಿಗರು-ಲಿಂಗಾಯತರು ವರದಿಯನ್ನು ವಿರೋಧ ಮಾಡಬಹುದು. ಆದರೆ, ಮೊದಲು ವರದಿ ನೋಡಲಿ ಆಮೇಲೆ ತಮ್ಮ ನಿಲುವು ಹೇಳಲಿ ಎಂದರು.