Advertisement

ಗೋರಕ್ಷಕರ ಮಟ್ಟ ಹಾಕುವ ಷಡ್ಯಂತ್ರಕ್ಕೆ ತಕ್ಕ ಪ್ರತ್ಯುತ್ತರ

11:48 PM Jul 03, 2019 | Team Udayavani |

ಪುತ್ತೂರು: ಹಿಂಜಾವೇ, ಬಜರಂಗದಳ ಹಾಗೂ ವಿಹಿಂಪ ವತಿಯಿಂದ ಬೃಹತ್‌ ಗೋವು ಉಳಿಸಿ ಆಂದೋಲನ ಬುಧವಾರ ಮಿನಿ ವಿಧಾನಸೌಧದ ಎದುರು ನಡೆಯಿತು.

Advertisement

ಬಜರಂಗಳ ದಕ್ಷಿಣ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಗೋ ಅಕ್ರಮ ಸಾಗಾಟ ಮತ್ತು ವಧೆಯು ಹಿಂದೂಗಳ ಭಾವನೆ, ನಂಬಿಕೆ, ಮನಸ್ಸುಗಳನ್ನು ಘಾಸಿಗೊಳಿಸುವಂತದ್ದು. ಗೋರಕ್ಷಣೆಯಲ್ಲಿ ತೊಡಗಿಕೊಂಡಿರುವ ಗೋರಕ್ಷಕರನ್ನೇ ಗುರಿಯಾಗಿಸಿ ಕೇಸು ದಾಖಲಿಸುವ ಮೂಲಕ ಹಿಂದೂಗಳನ್ನು ಮಟ್ಟ ಹಾಕುವ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಹೋರಾಟಕ್ಕೆ ಸಿದ್ಧ
ಮುಸಲ್ಮಾನರ ತುಷ್ಟೀಕರಣಕ್ಕಾಗಿ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಸವರುವ ನೀತಿಯನ್ನು ಬಿಟ್ಟು ಬಿಡಬೇಕು. ಒಂದೊಮ್ಮೆ ಹಿಂದೂ ಸಮಾಜವೇ ಆಯುಧಗಳನ್ನು ಹಿಡಿದು ಗೋರಕ್ಷಣೆಗೆ ಹೊರಟರೆ ಪರಿಸ್ಥಿತಿ ಏನಾದೀತು ಎನ್ನುವುದನ್ನು ಸರಕಾರ, ಪೊಲೀಸ್‌ ಇಲಾಖೆ ತಿಳಿದುಕೊಳ್ಳಬೇಕು. ವಿಟ್ಲ ದಲ್ಲಿ ನಡೆದ ಪ್ರಕರಣ ಎಲ್ಲಿಯೂ ನಡೆಯಬಾರದು ಎಂದಿದ್ದರೆ ಗೋರಕ್ಷಕರ ಮೇಲಿನ ಕೇಸನ್ನು ಹಿಂತೆಗೆದುಕೊಳ್ಳಬೇಕು.

ಗೋವುಗಳನ್ನು ಕಳೆದುಕೊಳ್ಳುತ್ತಿರುವ ರೈತಾಪಿ ವರ್ಗಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಸಂಘಟನೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್‌ ಶಾಮೀಲು
ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮಾತನಾಡಿ, ನಿರಂತರವಾಗಿ ಗೋವಧೆ, ಅಕ್ರಮ ಸಾಗಾಟದ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇದರಲ್ಲಿ ಪೊಲೀಸ್‌ ಇಲಾಖೆಯೂ ಶಾಮೀಲಾಗಿ ಹಿಂದೂ ಯುವಕರ ದಮನ ಮಾಡುವಲ್ಲಿ ಕೈಜೋಡಿಸುತ್ತಿದ್ದಾರೆ. ಆದ್ದರಿಂದ ಗೋ ಸಾಗಾಟ ತಡೆಯುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳ ಪತ್ರ ಇಲ್ಲದಿದ್ದಲ್ಲಿ ಪೊಲೀಸರು ಗೋ ಸಾಗಾಟಕ್ಕೆ ಅವಕಾಶ ನೀಡಬೇಡಿ. ಮುಂದಿನ ದಿನಗಳಲ್ಲಿ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ ಮರುಕಳಿಸಬಹುದು ಎಂದು ಎಚ್ಚರಿಕೆ ನೀಡಿದರು.

Advertisement

ದುಷ್ಟ ಪ್ರವೃತ್ತಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಸರಕಾರ, ಗೋರಕ್ಷಕರ ಮೇಲೆ ಕೇಸು ದಾಖಲಿಸುವ ದುಷ್ಟ ಪ್ರವೃತ್ತಿಯನ್ನು ಪೊಲೀಸ್‌ ಇಲಾಖೆ ನಡೆಸುತ್ತಿದ್ದು, ಸಂಘಟನೆಗಳಲ್ಲಿ ಕೆಲಸ ಮಾಡುವವರಿಗೆ ಭಯದ ವಾತಾವರಣ ಉಂಟು ಮಾಡಿದೆ. ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ಕುರಿತು ತತ್‌ಕ್ಷಣ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಲಿ. ಇಲ್ಲದಿದ್ದಲ್ಲಿ ಸಂಘಟನೆಯಿಂದ ತಕ್ಕ ಉತ್ತರ ನೀಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗೆ ಮನವಿ

ಗೋವಂಶದ ಮೇಲಿನ ಕ್ರೌರ್ಯ, ಕಳ್ಳತನ, ಗೋವಧೆ, ಅಕ್ರಮ ಸಾಗಾಟ ಮತ್ತು ಕಸಾಯಿಖಾನೆಗಳನ್ನು ಜಿಲ್ಲೆಯಲ್ಲಿ ಕೊನೆಗಾಣಿಸುವಂತೆ ತಹಶೀಲ್ದಾರ್‌ ಮೂಲಕ ದ. ಕ. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಜನಾರ್ದನ ಬೆಟ್ಟ, ಚಿನ್ಮಯ್‌ ಈಶ್ವರಮಂಗಲ, ಅಜಿತ್‌ ರೈ ಹೊಸಮನೆ, ಸಚಿನ್‌ ರೈ ಪಾಪೆಮಜಲು, ಶ್ರೀಧರ ತೆಂಕಿಲ, ಡಾ| ಕೃಷ್ಣ ಪ್ರಸನ್ನ, ಡಿ.ಎಸ್‌.ಸತೀಶ್‌, ಮುಖಂಡರಾದ ವಿಶ್ವನಾಥ ಗೌಡ, ಮನೋಹರ ಕಲ್ಲಾರೆ, ಮೋಹಿನಿ ದಿವಾಕರ, ಪ್ರೇಮಲತಾ ರಾವ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next