Advertisement

ಸಮಿತಿಯ ಧಾರ್ಮಿಕ-ಸಾಮಾಜಿಕ ಕಾರ್ಯಗಳು ಅನುಕರಣೀಯ

05:21 PM Nov 12, 2019 | Team Udayavani |

ಮುಂಬಯಿ, ನ. 11: ಆಧ್ಯಾತ್ಮಿಕ ಕಾರ್ಯಗಳೊಂದಿಗೆ ಸಮಾಜದ ಮೇಲಿನ ಕಾಳಜಿಯಿಂದ ಸಮಾಜ ಸೇವೆ ಮಾಡಬೇಕು. ಅದುವೇ ದೇವರ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಅಖೀಲ ಭಾರತ ಸೇವಾ ಸಂಘ ಮುಂಬಯಿ ನಿರ್ವಹಿಸುತ್ತಿದ್ದು, ಕಳೆದ 11 ವರ್ಷಗಳಿಂದ ಈ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ನೋಡುತ್ತಿದ್ದೇನೆ. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘದ ಪದಾಧಿಕಾರಿಗಳು ಶಬರಿಮಲೆ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ನಡೆಯುವ ಅನ್ನದಾನಕ್ಕೆ ಧನ ಸಹಾಯ ನೀಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಈ ಸಂಸ್ಥೆಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ನುಡಿದರು.

Advertisement

ನ. 9ರಂದು ಅಪರಾಹ್ನ 2ರಿಂದ ಘಾಟ್‌ಕೋಪರ್‌ ಪಶ್ಚಿಮದ ಕಾಮಾಲೇನ್‌ನ ಶ್ರೀಮತಿ ಭೂರಿಬೆನ್‌ ಎಲ್‌. ಗೋಲ್ವಾಲ ಸಭಾಗೃಹದಲ್ಲಿ ನಡೆದ ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮುಂಬಯಿ ಇದರ 11ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಬರಿಮಲೆ ಯಾತ್ರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಈ ಸಂಸ್ಥೆಯು ಮಾಡುತ್ತಾ ಬಂದಿದ್ದು, ಅಯ್ಯಪ್ಪ ಸ್ವಾಮಿಯ ಸೇವೆಯೊಂದಿಗೆ ಸದಾ ಸಮಾಜಪರ ಕಾರ್ಯವನ್ನು ಮಾಡುತ್ತಿರುವ ಈ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡಬೇಕು ಎಂದರು.

ಆಶೀರ್ವಚನ ನೀಡಿದ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜೆರಿಮರಿ ಇದರ ಪ್ರಧಾನ ಅರ್ಚಕ ಎಸ್‌. ಎನ್‌. ಉಡುಪ ಅವರು, ಸಮಾಜಕ್ಕಾಗಿ ನಾವು ಕೆಲಸ ಮಾಡಿದರೆ ಅದು ದೇವರ ಸೇವೆಯಾಗುತ್ತದೆ. ದೇವರು ನಮಗೆ ಸೌಭಾಗ್ಯವನ್ನೇ ನೀಡುತ್ತಾರೆ. ಕಠಿಣ ವೃತಾಚರಣೆಯೊಂದಿಗೆ ಶಬರಿಮಲೆ ಯಾತ್ರೆಯನ್ನು ಮಾಡಿ ಜೀವನವನ್ನು ಪಾವನಗೊಳಿಸುವುದರೊಂದಿಗೆ ಸಮಾಜಮುಖೀಯಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಬೇಕು. ಇದುವೇ ದೇವರ ಸೇವೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತ, ಮೀರಾರೋಡ್‌ ಪರಿಸರದ ಗುರುಸ್ವಾಮಿ, ಮೊಗವೀರ ಬ್ಯಾಂಕಿನ ನಿರ್ದೇಶಕ ಜಯಶೀಲ ತಿಂಗಳಾಯ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಅಭಿನಂದಿಸಿ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಗುರುಸ್ವಾಮಿ ಜಯಶೀಲ ತಿಂಗಳಾಯ ಅವರು ಮಾತನಾಡಿ, ಕಠಿಣ ವ್ರತಾಚರಣೆಯು ನಮ್ಮ ಜೀವನವನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಪಾಠವನ್ನು ಕಲಿಸುತ್ತದೆ. ಈ ಸಮ್ಮಾನವು ದೇವರ ಪ್ರಸಾದ ಎಂದು ಸ್ವೀಕರಿಸಿದ್ದೇನೆ. ಇದು ನನ್ನ ಸಮಾಜ ಸೇವೆಗೆ ಪ್ರೇರಣೆಯಾಗಿದೆ ಎಂದರು.

Advertisement

ಅತಿಥಿಯಾಗಿ ಆಗಮಿಸಿದ ಉದ್ಯಮಿ ಚಂದ್ರಶೇಖರ ಎಸ್‌. ಶೆಟ್ಟಿ ಅವರು ಮಾತನಾಡಿ, ನಾವು ಮುಂದಿನ ಪೀಳಿಗೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಬೇಕು. ಹಿಂದೂ ಸಂಸ್ಕೃತಿಯ ಅರಿವು ಅವರಲ್ಲಿ ಬೆಳೆಸಬೇಕು. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘದ ಸಾಮಾಜಿಕ, ಧಾರ್ಮಿಕ ಸೇವೆ ಅನನ್ಯವಾಗಿದೆ ಎಂದು ನುಡಿದರು.

ಇನ್ನೋರ್ವ ಅತಿಥಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ ಅವರು ಮಾತನಾಡಿ, ಧಾರ್ಮಿಕ ಸಂಸ್ಥೆಗಳು ಸಮಾಜಪರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಸಂದೇಶವನ್ನು ನೀಡುತ್ತದೆ. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘವು ಸದಾ ಇಂತಹ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಉದಯ್‌ ಶೆಟ್ಟಿ ಪೇಜಾವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಬಂಟರ ಸಂಘ ಶ್ರೀ ಮಹಾವಿಷ್ಣು ದೇವಸ್ಥಾನ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಬಂಟರ ಸಂಘ ಶ್ರೀ ಮಹಾವಿಷ್ಣು ದೇವಸ್ಥಾನ ಜ್ಞಾನ ಮಂದಿರದ ಮಾಜಿ ಕಾರ್ಯಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ್‌ ರೈ, ಅಂತಾರಾಷ್ಟ್ರೀಯ ವಾಸ್ತುತಜ್ಞ ವಾಸ್ತು ಮಾರ್ತಂಡ ಪಂಡಿತ್‌ ನವೀನ್‌ ಚಂದ್ರ ಆರ್‌. ಸನಿಲ್‌, ಕನ್ನಡ ವೆಲ್ಫೆರ್‌ ಸೊಸೈಟಿ ಘಾಟ್‌ಕೋಪರ್‌ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ, ಉದ್ಯಮಿ ರಮೇಶ್‌ ಎಂ. ಶೆಟ್ಟಿ ಸಿದ್ಧಕಟ್ಟೆ, ಭಾಂಡೂಪ್‌ ಭಟ್ಟಿಪಾಡಾದ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ದಯಾನಂದ ಶೆಟ್ಟಿ, ಆಹಾರ್‌ ವಲಯ ನಾಲ್ಕರ ಉಪಾಧ್ಯಕ್ಷ ಶಿಬರೂರುಗುತ್ತು ಸುರೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮುಂಬಯಿ ಇದರ ಗೌರವಾಧ್ಯಕ್ಷ ಆರ್‌. ಶ್ರೀನಿವಾಸನ್‌ ಗುರುಸ್ವಾಮಿ, ಉಪಾಧ್ಯಕ್ಷ ಪೂವಪ್ಪ ಎ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣ ಪೂಜಾರಿ ಮುನಿಯಾಲ್‌, ಜತೆ ಕಾರ್ಯದರ್ಶಿ ಸಂತೋಷ್‌ ಕೆ. ಪೂಜಾರಿ ವರಂಗ, ಕೋಶಾಧಿಕಾರಿ ರಾಜೇಶ್‌ಬಂಗೇರ, ಜತೆ ಕೋಶಾಧಿಕಾರಿ ಸುರೇಶ್‌ ಪಾಟ್ಕರ್‌ ಕಣಂಜಾರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಇವಿಪಿ ಅದಿತ್ಯ ಪ್ರಸಾದ್‌ ಅವರ ಅನುವಾದಿತ ಕೃತಿ 12ನೇ ಶತಮಾನದ ವಿಷವೈದ್ಯ ವಿಜ್ಞಾನ ಗ್ರಂಥವನ್ನು ಗಣ್ಯರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಗೀತಾ ಸತೀಶ್‌ ಶೆಟ್ಟಿ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ಕಲಾಸಾರಥಿ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಲಯನ್‌ ಕಿಶೋರ್‌ ಡಿ. ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದೆರ್‌ ಅಭಿನಯದಲ್ಲಿ, ಸುರೇಶ್‌ ಮಂಜೇಶ್ವರ ವಿರಚಿತ “ಮಂಗೆ ಮಲ್ಪೋಡ್ಚಿ’ ತುಳು ಹಾಸ್ಯಮ ಯ ನಾಟಕವು ಉಚಿತವಾಗಿ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಭಕ್ತಾದಿಗಳು, ತುಳು-ಕನ್ನಡಿಗರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 

-ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next