Advertisement

ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಸಚಿವ ಚವ್ಹಾಣ

06:18 PM Apr 05, 2022 | Team Udayavani |

ಔರಾದ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ, ಹಲವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.

Advertisement

ಚಿಂತಾಕಿ, ನಾಗನಪಲ್ಲಿ, ಬಾದಲಗಾಂವ್‌, ಸುಂದಾಳ, ವಡಗಾಂವ, ಜೋಜನಾ, ಉಜನಿ, ಬರ್ದಾಪೂರ, ಠಾಣಾ ಕುಶನೂರ, ಕೌಠಾ (ಕೆ), ಸೋರಳ್ಳಿ, ಲಾದಾ, ಖೇಡ, ಮುರ್ಕಿ, ಬೆಂಬ್ರಾ, ಜಮಗಿ, ಬೋರ್ಗಿ (ಜೆ), ಸಂತಪೂರ, ಚಿಕ್ಲಿ (ಜೆ), ಕೊಳ್ಳೂರ, ಹೆಡಗಾಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನತೆ ಒಬ್ಬೊಬ್ಬರಾಗಿ ತಮ್ಮ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ಸೂಚಿಸಲಾಯಿತು. ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಸುದೀರ್ಘ‌ ಚರ್ಚೆ ನಡೆಯಿತು. ಸಾರ್ವಜನಿಕರು ಹಾಗೂ ಪಿಡಿಒಗಳಿಂದ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದೆ ಎನ್ನುವ ಬಗ್ಗೆ ಸಚಿವರು ಮಾಹಿತಿ ಪಡೆದರು.

ಅಲ್ಲದೇ ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಮೂಲಗಳಿಂದ ನೀರನ್ನು ಪಡೆದು ಗ್ರಾಮಗಳಿಗೆ ತುರ್ತಾಗಿ ಪೂರೈಕೆ ಮಾಡಬೇಕು. ಮೋಟಾರ್‌ ಕೆಟ್ಟು ಹೋಗುವುದು, ವಿದ್ಯುತ್‌ ತಂತಿಯ ಸಮಸ್ಯೆ ಇಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಿಕೊಂಡು ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ರೈತ ಮುಖಂಡರು ಮಾತನಾಡಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ವೇಳೆ ರೈತರ ಪೈಪ್‌ಗ್ಳು ಹಾಳಾಗುತ್ತವೆ. ಅಂಥ ಪೈಪ್‌ಗ್ಳನ್ನು ಸರಿಪಡಿಸಬೇಕೆಂಬ ನಿಯಮವಿರುತ್ತದೆ. ಆದರೂ ಇದರ ಪಾಲನೆಯಾಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಗಳಾದ ಅರುಣಕುಮಾರ ಕುಲಕರ್ಣಿ, ರಮೇಶ ಪೆದ್ದೆ, ತಾಪಂ ಇಒಗಳಾದ ಮಾಣಿಕರಾವ ಪಾಟೀಲ, ಸೈಯ್ಯದ ಫೆ„ಜಲ್‌ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಸ್ಥಳದಲ್ಲೇ ಮದನೂರ ಗ್ರಾಮಕ್ಕೆ ಬಸ್‌ ವ್ಯವಸ್ಥೆ

ಮದನೂರು ಗ್ರಾಮಕ್ಕೆ ಸುಮಾರು ಒಂದು ವರ್ಷದಿಂದ ಬಸ್‌ ಬರದೇ ಇರುವುದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದಾಗ ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಯೊಂದಿಗೆ ಮಾತನಾಡಿದರು. ತಕ್ಷಣ ಮದನೂರ ಗ್ರಾಮಕ್ಕೆ ಬಸ್‌ ಸೇವೆ ಒದಗಿಸಬೇಕು ಎಂದು ಸೂಚಿಸಿದರು. ಸಭೆಯ ನಂತರ ಔರಾದನಿಂದ ಮದನೂರ ಗ್ರಾಮಕ್ಕೆ ಸಂಚರಿಸುವ ಬಸ್‌ಗೆ ಹಸಿರು ನಿಶಾನೆ ತೋರಿದರು.

Advertisement

Udayavani is now on Telegram. Click here to join our channel and stay updated with the latest news.

Next