Advertisement
ನಾವು ನಮ್ಮ ಶಿಕ್ಷಣ ಕ್ರಮದಲ್ಲಿ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಕೇವಲ ಪರೀಕ್ಷೆಯೊಂದನ್ನೇ ನೆಚ್ಚಿಕೊಂಡಿದ್ದೇವೆ (ಇತ್ತೀಚಿಗೆ ಸಿಸಿಇ ಪದ್ಧತಿ ಅಳವಡಿಸಿ ಕೊಂಡಿರುವ ನಾವು ಅಲ್ಲೂ ಕೂಡ ಪರೀಕ್ಷೆಗಳ ಮೇಲೆಯೇ ಅವಲಂಬಿತರಾಗಿದ್ದೇವೆ). ಕೇವಲ ಪರೀಕ್ಷೆ ಯೊಂದೇ ಮಗುವಿನ ಸಮಗ್ರ ಕಲಿಕೆಯನ್ನು ಅಳೆದು ಬಿಡುತ್ತದೆಯೇ? ಅದು ಸಂಪೂರ್ಣ ವಿಶ್ವಸನೀಯ ತೆಯಿಂದ ಕೂಡಿದೆಯೇ? ವಸ್ತುನಿಷ್ಠವಾಗಿದೆಯೇ? ಖಂಡಿತ ಇಲ್ಲ. ನಮ್ಮ ಪರೀಕ್ಷಾ ಕ್ರಮಗಳಾದರೂ ಹೇಗಿವೆಯೋ ಯೋಚಿಸಿ. ಮೊದಲೇ ಒಂದು ನೀಲನಕ್ಷೆ ನೀಡಲಾಗುತ್ತದೆ. ಒಂದಷ್ಟು ಪಾಠಗಳಿಗೆ ಅಂಕಗಳ ಹಂಚಿ ಕೆ ಯಾಗಿರುತ್ತದೆ. ಅದನ್ನು ಆಧರಿಸಿಯೇ ಪ್ರಶ್ನೆ ಪತ್ರಿಕೆ ತಯಾರಿಸಬೇಕು. ಮಗು ಕಂಠಪಾಠ ಮಾಡಿಯೋ, ಪಕ್ಕದಲ್ಲಿ ಕದ್ದುನೋಡಿಯೋ ಅಥವಾ ಇನ್ನಾವುದೋ ಮಾರ್ಗವನ್ನು ಬಳಸಿ ಉತ್ತರವನ್ನು ಬರೆದುಬಿಡಬಹುದು. ನಾವು ಒಂದಷ್ಟು ಅಂಕಗಳನ್ನು ಪರಿಗಣಿಸಿ ಅವನನ್ನು/ಅವಳನ್ನು ಉತ್ತೀರ್ಣ ಎಂದು ಘೋಷಿಸಿಬಿಡುತ್ತೇವೆ.
Related Articles
Advertisement
ಒಂದೇ ತೆರನಾದ ಪ್ರಶ್ನೆ ಪತ್ರಿಕೆಯನ್ನು ನೀಡಿ ಇಡೀ ರಾಜ್ಯದ ಮಕ್ಕಳನ್ನು ಹೇಗೆ ಅಳತೆ ಮಾಡುತ್ತೀರಿ? ಕಲಿಕೆಯಲ್ಲಿ ಪ್ರತಿ ಮಗುವೂ ಭಿನ್ನ ಭಿನ್ನ. ಹೀಗೆ ಭಿನ್ನ ಭಿನ್ನ ಮಕ್ಕಳಿಗೆ, ಭಿನ್ನ ಭಿನ್ನ ಪರಿಸರದಿಂದ ಬಂದವರಿಗೆ ಹೇಗೆ ಒಂದೇ ಪ್ರಶ್ನೆಪತ್ರಿಕೆ ಸೂಕ್ತವಾಗುತ್ತದೆ? ಹೋಗಲಿ, ಬೇರೆಬೇರೆ ಪ್ರಶ್ನೆಪತ್ರಿಕೆ ಕೊಡುವುದಾದರೆ ಅದಕ್ಕೆ ಮಾನದಂಡಗಳೇನು? ನಮ್ಮ ಬಳಿ ಉತ್ತರವಿಲ್ಲ.
ಯಾವುದೋ ಒಂದು ಮಗು ಹತ್ತನೇ ತರಗತಿಯ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದೆ ಎಂದು ಭಾವಿಸೋಣ. ಅದರ ಅರ್ಥವೇನು? ಹತ್ತನೆ ತರಗತಿಯ ಭಾಷೆಯ ವಿಷಯದಲ್ಲಿ ಅವನು ಪರಿಪೂರ್ಣ ಎಂದು ಅರ್ಥ ತಾನೆ? ಹಾಗಾದರೆ ಅವನಿಗೆ ಇಡೀ ಪುಸ್ತಕದಲ್ಲಿ ಇರುವುದೆಲ್ಲಾ ಗೊತ್ತಾ? ಇಲ್ಲ. ಪರೀಕ್ಷೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಮಾತ್ರ ಅವನಿಗೆ ಚೆನ್ನಾಗಿ ಉತ್ತರ ಗೊತ್ತಿತ್ತು. ಅದರಿಂದ ಅವನು ನೂರಕ್ಕೆ ನೂರು ಅಂಕ ತೆಗೆದ. ಹಾಗಾದರೆ ಪರೀಕ್ಷೆಯು ಅವನ ಸಂಪೂರ್ಣ ಕಲಿಕೆಯನ್ನು ಅಳೆಯುವಲ್ಲಿ ಸೋತಿತು ಅಂತ ಅರ್ಥ ತಾನೆ? ಹಾಗಾದರೆ ನಾವೇಕೆ ಇಂಥ ಪರೀಕ್ಷೆಗಳನ್ನಿಟ್ಟುಕೊಂಡು ಮಕ್ಕಳ ಕಲಿಕೆಯನ್ನು ಅಳೆಯಲು ಕೂತಿದ್ದೇವೆ.
ಮೊನ್ನೆ ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಅಂದಾಗ ತುಂಬಾ ಪರ-ವಿರೋಧದ ಚರ್ಚೆಗಳಾದವು. ಮಗು ಏಳನೇ ತರಗತಿ ದಾಟಿದರೂ ಓದೋಕೆ, ಬರೆಯೋಕೆ ಬರ್ತಿಲ್ಲ ಅನ್ನುವುದೇ ಬಹುತೇಕರ ದೂರು. ಪರೀಕ್ಷೆ ಇಟ್ಟ ಮಾತ್ರಕ್ಕೆ ಕಲಿಕೆ ದೃಢಗೊಳ್ಳುತ್ತದೆ ಅನ್ನುವುದು ಸುಳ್ಳು. ಹಾಗೇನಾದರೂ ಆಗುವುದಿದ್ದರೆ ಹತ್ತನೆ ತರಗತಿ, ಪಿಯುಸಿ ದಾಟಿ ಬಂದ ಮಕ್ಕಳು ತಮ್ಮ ಪಾಂಡಿತ್ಯದಿಂದ ತುಂಬಿ ತುಳುಕಬೇಕಾಗಿತ್ತು. ಪರೀಕ್ಷೆ ಇಡುವುದರಿಂದ ಸ್ವಲ್ಪ ಮಟ್ಟಿನ ಬದಲಾವಣೆ ಕಾಣಬಹುದಾದರೂ ಶಿಕ್ಷಣದ ಉದ್ದೇಶವನ್ನು ಪರೀಕ್ಷೆ ಈಡೇರಿಸಲಾರದು. ಏಳು ವರ್ಷ ಕಲಿತ ಮಗುವಿಗೆ ಬರೆಯಲು ಬರುವುದಿಲ್ಲವೆಂದರೆ ಕಲಿಸುವಿಕೆ, ಕಲಿಯುವಿಕೆ ಮತ್ತು ಅದನ್ನು ಮೌಲ್ಯಮಾಪನ ಮಾಡುವಲ್ಲಿ ಎಲ್ಲೋ ಐಬಿದೆ ಅಂತ ಅರ್ಥ. ಅದನ್ನು ಪರೀಕ್ಷೆ ಇಡುವುದರ ಮೂಲಕ ಪೂರ್ಣ ಪ್ರಮಾಣದಲ್ಲಿ ಸರಿ ಮಾಡಲಾಗುವುದಿಲ್ಲ. ಒಂದು ವ್ಯವಸ್ಥಿತವಾದ, ವಿಶ್ವಸನೀಯವಾದ ಹಾಗೂ ವಸ್ತುನಿಷ್ಠವಾದ ಮೌಲ್ಯಮಾಪನ ಕ್ರಮವೊಂದು ಇದ್ದಾಗ ಕಲಿಸುವಿಕೆ ಮತ್ತು ಕಲಿಯುವಿಕೆ ತಾನಾಗಿಯೇ ದಾರಿ ಹಿಡಿಯುತ್ತದೆ. ಶಿಕ್ಷಕರು ಗಂಭೀರವಾಗಿ ಕಲಿಸುವಿಕೆಯಲ್ಲಿ ತೊಡಗುವಂತಹ ಸೂಕ್ತ ಮೌಲ್ಯಮಾಪನ ಕ್ರಮವೊಂದನ್ನು ನಾವು ಕಂಡುಕೊಳ್ಳಬೇಕಿದೆ. ಪರೀಕ್ಷೆ ಯಾವತ್ತೂ ಕೂಡ ಮಗುವಿನ ಸಮಗ್ರ ಕಲಿಕೆಯನ್ನು ಅಳೆಯುವ ಮಾಪನವಾಗಲಾರದು. ತುರ್ತಾಗಿ ನಾವು ಪರೀಕ್ಷೆಯ ಬದಲಿಗೆ ಒಂದೊಳ್ಳೆ ಮೌಲ್ಯಮಾಪನ ಕ್ರಮವನ್ನು ಹುಡುಕಿಕೊಳ್ಳಬೇಕಿದೆ.
ಸದಾಶಿವ ಸೊರಟೂರು