Advertisement

64.25 ಕೋಟಿ ಅನುಮೋದನೆಗೆ ಸದಸ್ಯರ ತಿರಸ್ಕಾರ

01:13 PM Aug 18, 2017 | Team Udayavani |

ಹಗರಿಬೊಮ್ಮನಹಳ್ಳಿ: ಏತ ನೀರಾವರಿಯ 1ಕೋಟಿಗೂ ಅಧಿಕ ಅನುದಾನದ ಮೊತ್ತವನ್ನು ಕೆಲಸ ಮಾಡದೇ ಸಣ್ಣ ನೀರಾವರಿ ಇಲಾಖೆ ದುರ್ಬಳಕೆ ಮಾಡಿಕೊಂಡಿದೆ ಎಂದು ಇಲಾಖೆ ವಿರುದ್ಧ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಗುಡುಗಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ 16 ಏತ ನೀರಾವರಿಗಳ ವಿವಿಧ ಕಾಮಗಾರಿಗಳಿಗೆ ನೀಡಿರುವ ಅನುದಾನವನ್ನು ಇಲಾಖೆಯವರು ಹಾಗೂ ಗುತ್ತಿಗೆದಾರರು ಸೇರಿ ಗುಳುಂ ಅನಿಸಿದ್ದಾರೆ. ತುಂಗಾಭದ್ರಾ ಹಿನ್ನೀರು ಬರುವ ಮುಂಚೆ ಎಲ್ಲಾ ಏತ ನೀರಾವರಿ ಯೋಜನೆ ಸುಸಜ್ಜಿತವಾಗಿಡಲು ಕಾಲುವೆಯ ಜಂಗಲ್‌ ಕಟಿಂಗ್‌, ಹೂಳು ಎತ್ತುವುದು, ಮೋಟಾರ್‌ ರಿಪೇರಿ ಸೇರಿ ವಿವಿಧ ಕೆಲಸಗಳಿಗೆ ಅನುದಾನ ದೊರೆತಿದ್ದು, ಅರ್ಧಂಬರ್ಧ ಕೆಲಸ ಮಾಡಿ ಬಿಲ್‌ ಎತ್ತುತ್ತಿದ್ದಾರೆ ಎಂದು ಏರು ದ್ವನಿಯಲ್ಲಿ ಆರೋಪಿಸಿದ ಅವರು, ರೈತರ ಕೆಲಸ ಮಾಡೋದು ಬಿಟ್ಟು ಅವರಿಗಾಗಿ ಬಂದ ಹಣವನ್ನು ನೀವು ತಿಂದರೆ ಉದ್ಧಾರವಾಗುವುದಿಲ್ಲ ಎಂದು ಸಭೆಗೆ ಆಗಮಿಸಿದ್ದ ಇಲಾಖೆಯ ಜೆಇ ಗೋಪಾಲಕೃಷ್ಣ ಅವರಿಗೆ ಚಾಟಿ ಬೀಸಿದರು.

ಇಲಾಖೆಯ ಅನುದಾನದಲ್ಲಿ ಯಾವ ಯಾವ ಕಾಮಗಾರಿ ಮಾಡಿದ್ದೀರಿ ಎಂಬುದನ್ನು ತೋರಿಸಿ ಎಂದು ತಾಪಂ ಸದಸ್ಯ ಅನಿಲ್‌ ಜಾಣ, ಮಾಳಿಗಿ ಗಿರೀಶ್‌ ಕೇಳಿದಾಗ, ಪೈಲ್‌ ಆಫಿಸ್‌ನಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಜೆಇ ಹೇಳಿದಾಗ ಗರಂ ಆದ ತಾಪಂ ಸದಸ್ಯರು ಒಕ್ಕೋರಲಿನಿಂದ ಪೈಲ್‌
ಈಗಲೇ ತನ್ನಿ ಎಂದು ಒತ್ತಾಯಿಸಿದರು. ಬನ್ನಿಕಲ್ಲು ಕೆರೆ ಬೊಂಗಾ ನಿಯಂತ್ರಿಸಲಾಗದೆ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಲು, ರೈತರ ಪಂಪ್‌ಸೆಟ್‌ಗಳ ಅಂತರ್ಜಲ ಕುಸಿತ ಮತ್ತು ಸುತ್ತಲಿನ ಹಲವು ಗ್ರಾಮಗಳ ಕುಡಿವ ನೀರಿನ ಸಮಸ್ಯೆಗೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸದಸ್ಯ ಕೆ.ಪ್ರಹ್ಲಾದ ಅಧಿ ಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅನುಮೋದನೆ ಬೇಡ: ಈ ಸಾಲಿನ ವಿವಿಧ ಇಲಾಖೆಗಳ 64.25 ಕೋಟಿ ರೂ.ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ತಾಪಂ ಇಒ ಮಲ್ಲನಾಯ್ಕ ಸದಸ್ಯರನ್ನು ಕೋರಿದರು. ಲಿಂಗ್‌ ಡಾಕುಮೆಂಟ್‌ ಅನ್ವಯ ಆರೋಗ್ಯ ಇಲಾಖೆಯ 50.95 ಕೋಟಿ ರೂ., ಪಶುಸಂಗೋಪನೆ 1.17 ಕೋಟಿ ರೂ., ರೇಷ್ಮೆ ಇಲಾಖೆ 94.5 ಲಕ್ಷರೂ., ಶಿಕ್ಷಣ ಇಲಾಖೆಯ 10.56 ಕೋಟಿ ರೂ. ಸೇರಿ ವಿವಿಧ ಇಲಾಖೆಗಳ ಕ್ರಿಯಾ ಯೋಜನೆ ವರದಿ ಸಲ್ಲಿಸಿದರು. ಆದರೆ, ಅ ಧಿಕಾರಿಗಳು ಕನಿಷ್ಠ ಮಾಹಿತಿ ನೀಡದೆ ಕ್ರಿಯಾ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಅನುಮೋದನೆ ಬೇಡ ಎಂದು ಸದಸ್ಯ ಮಾಳಿಗಿ ಗಿರೀಶ್‌ ಸೂಚನೆ ನೀಡಿದರು. ಸದಸ್ಯರಾದ ತಿಪ್ಪೇರುದ್ರಮುನಿ, ಅನಿಲ್‌, ಪ್ರಭಾಕರ, ಪಾಂಡುನಾಯ್ಕ ಧ್ವನಿಗೂಡಿಸಿದರು.

ಚೆಕ್‌ ಪಾವತಿಸಿ: ದಶಮಾಪುರ, ಗದ್ದಿಕೇರಿ, ಬನ್ನಿಕಲ್ಲು ಗ್ರಾಮಗಳಲ್ಲಿ ಬಾಡಿಗೆ ಆಧಾರಿತ ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ಮೊತ್ತದ ಚೆಕ್‌ ಪಾವತಿ ವಿಳಂಬ ಕುರಿತು ಸದಸ್ಯ ಗಿರೀಶ್‌ ತಿಳಿಸಿದಾಗ, ಚೆಕ್‌ ವಿತರಣೆ ಕುರಿತು ಪಿಡಿಒಗಳಾದ ಜ್ಞಾನೇಶ್ವರಯ್ಯ, ಶಾಂತನಗೌಡ, ಮಂಜುನಾಥ ಸಭೆಗೆ ಮಾಹಿತಿ ನೀಡಿದರು. ಖಾಸಗಿ ಫಲಾನುಭವಿಗಳ ಕೊಳವೆ ಬಾವಿಗಳ ಬಾಡಿಗೆ ಮೊತ್ತ ನೀಡಲು ಕುಡಿವ ನೀರು ಸರಬರಾಜು ಇಲಾಖೆಗೆ ವರದಿ ಸಲ್ಲಿಸದ ಬನ್ನಿಕಲ್ಲು ಪಿಡಿಒ ವಿಜಯ್‌ಕುಮಾರ್‌, ಪಿಡಿಒ ವೀರೇಶ್‌ನನ್ನು ಇಒ ತರಾಟೆಗೆ ತೆಗೆದುಕೊಂಡರು. 

Advertisement

ಉಪಾಧ್ಯಕ್ಷೆ ಕೊಚಾಲಿ ಸುಶೀಲ ಮಂಜುನಾಥ, ಸದಸ್ಯರಾದ ಪಿ.ಕೊಟ್ರೇಶ, ನಾಗಾನಾಯ್ಕ, ಶ್ಯಾಮಲಾ ಮಾಲತೇಶ, ನೇತ್ರಾವತಿ ಮಲ್ಲಿಕಾರ್ಜುನ, ಬಿಕ್ಯಾಮುನಿಬಾಯಿ, ಅಧಿಕಾರಿಗಳು ಇದ್ದರು.

ಡೆಂಘೀ ಸಿಡಿಮಿಡಿ
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಇತ್ತೀಚೆಗೆ ಬಾಲಕಿಯೊಬ್ಬರು ಡೆಂಘೀಗೆ ಮೃತಪಟ್ಟಿದ್ದರೂ ಆರೋಗ್ಯ ಇಲಾಖೆ ಕ್ರಮ ವಹಿಸಿಲ್ಲ ಎಂದು ಸದಸ್ಯ ಅನಿಲ್‌ ಜಾಣ ಸಿಡಿಮಿಡಿಗೊಂಡರು. ಅಲ್ಲದೆ ಹೊಸದಾಗಿ 3 ಡೆಂಘೀ ಶಂಕಿತ ಪ್ರಕರಣಗಳು ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ಸಭೆಯ ಗಮನ ಸೆಳೆದರು. ತಾಲೂಕು ವೈದ್ಯಾಧಿಕಾರಿ  ಡಾ| ಸುಲೋಚನಾ ಪ್ರತಿಕ್ರಿಯಿಸಿ, ಗ್ರಾಮದ ಬಾಲಕಿ ಕೀರ್ತನಾ ಸಾವು ಶಂಕಿತ ಡೆಂಘೀ ಜತೆಗೆ ಹಲವು ಕಾರಣದಿಂದ ಕೂಡಿದೆ ಎಂದರು. 

ಹೊಸದಾಗಿ ಡೆಂಘೀ ಪತ್ತೆಯಾಗಿರುವ ಕುರಿತಂತೆ ಕೆಲ ವೈದ್ಯಕೀಯ ಪ್ರಮಾಣ ಪತ್ರವನ್ನು ಮೊಬೈಲ್‌ನಲ್ಲೆ ತೋರಿಸಿ ಸದಸ್ಯ ಅನಿಲ್‌ ಸಭೆಯ ಗಮನ ಸೆಳೆದರು. ಪ್ಲೇಟ್‌ಲೆಟ್ಸ್‌ ಕಡಿಮೆಯಾಗುವುದನ್ನು ಡೆಂಘೀ ಎನ್ನಲಾಗದು. ಎಲಿಸಾ ಪರೀಕ್ಷೆ ಬಳಿಕವಷ್ಟೆ ಖಚಿತವಾಗಲಿದೆ. ರೋಗ ವ್ಯಾಪವಾಗಿ ಕಂಡುಬರುವ ಕಡೆಗಳಲ್ಲಿ ಒಳ ಮತ್ತು ಹೊರ ಧೂಮೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಡಾ| ಸುಲೋಚನಾ ತಿಳಿಸಿದರು. ಈಗಾಗಲೇ ಬಳ್ಳಾರಿಯಿಂದ ವಿಶೇಷ ತಂಡ ಗ್ರಾಮಕ್ಕೆ ಭೇಟಿ ನೀಡಿ, ಸೊಳ್ಳೆಗಳ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next