ಹೊಸದಿಲ್ಲಿ: ಕಡಿಮೆ ಮೊತ್ತಕ್ಕೆ ಇನ್ನು ಚೀನ ಮೊಬೈಲ್ ಖರೀದಿಸುವಂತೆ ಇಲ್ಲ. ಏಕೆಂದರೆ ಶೀಘ್ರದಲ್ಲಿಯೇ ಕೇಂದ್ರ ಸರಕಾರ ಚೀನದ ಮೊಬೈಲ್ ಕಂಪೆನಿಗಳು 12 ಸಾವಿರ ರೂ.ಗಳಿಗಿಂತ ಕಡಿಮೆ ಫೋನ್‌ಗಳನ್ನು ಮಾರಾಟ ಮಾಡುವಂತೆ ಇಲ್ಲ ಎಂದು ಶೀಘ್ರದಲ್ಲಿಯೇ ನಿಯಮ ಜಾರಿಗೊಳಿಸಲಿದೆ ಎಂದು “ಬ್ಲೂಮ್‌ಬರ್ಗ್ ನ್ಯೂಸ್’ ವರದಿ ಮಾಡಿದೆ.
ದೇಶೀಯ ಮೊಬೈಲ್ ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಒಪ್ಪೋ, ವಿವೋ, ಶಿಯೋಮಿ ಕಂಪೆನಿಗಳು ಕೇಂದ್ರ ಸರಕಾರಕ್ಕೆ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡಿ ತನಿಖೆ ಎದುರಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
“ಆತ್ಮನಿರ್ಭರ ಭಾರತ’ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವು ದೇಶೀಯ ಕಂಪೆನಿಗಳಿಗೆ ಆದ್ಯತೆ ನೀಡಿದೆ. ಅದೇ ನಿಲುವನ್ನು ಮೊಬೈಲ್ ಉತ್ಪಾದನ ಕ್ಷೇತ್ರಕ್ಕೂ ವಿಸ್ತರಿಸಲು ಮೋದಿ ಸರಕಾರ ಮುಂದಾಗಿದೆ.
ಚೀನದ ಹಲವು ಮೊಬೈಲ್ ಕಂಪೆನಿಗಳು 11,932 ರೂ.ಗಳಿಂತ ಕಡಿಮೆ ವೆಚ್ಚದಲ್ಲಿ ಫೋನ್ ಅನ್ನು ಉತ್ಪಾದಿಸಿ ಬಿಡುಗಡೆ ಮಾಡುತ್ತಿದ್ದವು. ಜೂನ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ಚೀನ ಕಂಪೆನಿಗಳ ಮೊಬೈಲ್ ಮಾರಾಟವೇ ಶೇ.80ರಷ್ಟು ಆಗಿತ್ತು .
ಆ್ಯಪ್ ಗಳಿಗೆ ನಿಷೇಧ: ಗಾಲ್ವನ್‌ನಲ್ಲಿ ಚೀನ ಜತೆಗೆ ಸಂಘರ್ಷ ಉಂಟಾದ ಬಳಿಕ ಕೇಂದ್ರ ಸರಕಾರ ಚೀನದ ನೂರಾರು ಆ್ಯಪ್‌ಗಳನ್ನು ನಿಷೇಧಿಸಿತ್ತು. ಜತೆಗೆ ದೇಶದ ಉದ್ದಿಮೆ ವಲಯದಲ್ಲಿ ಚೀನದ ಕಂಪೆನಿಗಳ ಹೂಡಿಕೆಗಳನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು.