Advertisement

ನಿರಾಶ್ರಿತ ಪಕ್ಷಿಗಳಿಗೆ ರಂಗನತಿಟ್ಟು, ಗೆಂಡೆಹೊಸಹಳ್ಳಿಯಲ್ಲಿ ಆಶ್ರಯ’

07:00 AM Jan 09, 2018 | Team Udayavani |

ಮಂಡ್ಯ: ಕೆ.ಆರ್‌.ಪೇಟೆ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಯೊಳಗಿದ್ದ ಮರಗಳ ಮಾರಣಹೋಮ
ನಡೆಸಿ ನಿರಾಶ್ರಿತಗೊಂಡಿದ್ದ ನೂರಾರು ಪಕ್ಷಿಗಳಿಗೆ ಶ್ರೀರಂಗಪಟ್ಟಣ ತಾಲೂಕು ರಂಗನತಿಟ್ಟು ಹಾಗೂ ಗೆಂಡೆಹೊಸಹಳ್ಳಿ ಪಕ್ಷಿಧಾಮದ ಹಲವು ಪ್ರದೇಶಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 

Advertisement

ನಿರ್ದಯವಾಗಿ ಮರಗಳನ್ನು ಕಡಿದುಹಾಕಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಕ್ರಮದಿಂದಾಗಿ ವಿವಿಧ ಜಾತಿಯ ಪಕ್ಷಿಗಳು, ಇನ್ನೂ ರೆಕ್ಕೆ ಬಲಿಯದ, ಹಾರಲು ಸಾಧ್ಯವಾಗದ ಮರಿಪಕ್ಷಿಗಳೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು.

ರೆಂಬೆ-ಕೊಂಬೆಗಳಡಿ ಸಿಲುಕಿ ಗಾಯಗೊಂಡಿದ್ದ ಪಕ್ಷಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗಿದೆ. ಹಾರಲಾಗದ
ಪಕ್ಷಿಗಳನ್ನು ಅರಣ್ಯಾಧಿಕಾರಿಗಳ ತಂಡ ಬೋನಿನೊಳಗೆ ಸುರಕ್ಷಿತವಾಗಿ ತಂದು ರಂಗನತಿಟ್ಟು ಪಕ್ಷಿಧಾಮ ವ್ಯಾಪ್ತಿಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿರುವ ಗೆಂಡೆಹೊಸಹಳ್ಳಿ ಪಕ್ಷಿಧಾಮದ ವಿವಿಧ ಸ್ಥಳಗಳಲ್ಲಿ ಆಶ್ರಯ ಒದಗಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ:  ಕೆ.ಆರ್‌.ಪೇಟೆ: ಕಾವೇರಿ ನೀ ರಾವರಿ ನಿಗಮದ ಕಚೇರಿ ಆವರಣದಲ್ಲಿ ಮರಗಳನ್ನು ಕಡಿದುಹಾಕಿ ಪಕ್ಷಿಗಳ ಸಾವಿಗೆ ಕಾರಣರಾದ ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ನಾರಾಯಣ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ. 

ಅಕ್ರಮ ಮರ ಕಡಿತ, ವನ್ಯ ಜೀವಿಗಳವಾಸ ಸ್ಥಾನಕ್ಕೆ ಹಾನಿ, ವನ್ಯ ಜೀವಿಗಳ ಪ್ರಾಣಹಾನಿ ಮತ್ತು ಗಾಯಗೊಳಿಸುವಿಕೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಪಟ್ಟಣದ ಜೆಎಂಎಫ್ ನ್ಯಾಯಾಲಯಕ್ಕೆ ಎಫ್ಐಆರ್‌ ಸಲ್ಲಿಸಲಾಗಿದೆ ಎಂದು ತಾಲೂಕು ಅರಣ್ಯಾಧಿಕಾರಿ ರಾಘವೇಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next