Advertisement

ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ಶಿಫಾರಸು ಮುಂದಕ್ಕೆ

12:29 AM May 29, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡುವುದರ ಜತೆಗೆ ಆಯ್ದ ಮಹನೀಯರ ಜಯಂತಿ ಹಾಗೂ ಧಾರ್ಮಿಕ ಹಬ್ಬಕ್ಕೆ ನೀಡುವ ರಜೆಯನ್ನು ರದ್ದುಪಡಿಸುವ ಕುರಿತು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ.

Advertisement

ಈ ಶಿಫಾರಸು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ವಿಷಯ ಪಟ್ಟಿಯಲ್ಲಿತ್ತಾದರೂ ಸಂಪುಟ ಸಭೆಯಲ್ಲಿ ಆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತಂತೆ ಆಯಾ ಸಮುದಾಯದ ಪ್ರಮುಖರು, ಸಂಘಟನೆಗಳು, ಆಡಳಿತ ವಲಯದ ತಜ್ಞರ ಜತೆ ಚರ್ಚಿಸಿ ಅಗತ್ಯ ಮಾರ್ಪಾಡಿನೊಂದಿಗೆ ಶಿಫಾರಸ್ಸನ್ನು ಮರು ಮಂಡಿಸುವಂತೆ ಸಚಿವ ಸಂಪುಟ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ರಾಜ್ಯದ 6ನೇ ವೇತನ ಆಯೋಗದ ವರದಿಯಲ್ಲಿ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಬೇಕು ಎಂಬ ಅಂಶವನ್ನು ಪರಾಮರ್ಶಿಸಿ ಸಂಪುಟ ಉಪ ಸಮಿತಿ ಸರ್ಕಾರದ ಸೂಚನೆಯಂತೆ ಸಚಿವ ಸಂಪುಟ ಸಭೆಗೆ ಶಿಫಾರಸು ಮಂಡಿಸಿತ್ತು.

ಇದರಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರರಿಗೆ ಸದ್ಯ ಜಾರಿಯಲ್ಲಿರುವ 15 ಸಾಂದರ್ಭಿಕ ರಜೆಯನ್ನು 12ಕ್ಕೆ ಕಡಿತಗೊಳಿಸುವುದು. ಮಹಾವೀರ ಜಯಂತಿ, ಬಸವ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆಯಂದು ನೀಡಲಾಗಿರುವ ಸಾರ್ವತ್ರಿಕ ರಜೆಯನ್ನು ರದ್ದುಪಡಿಸುವುದು. ಹಾಗೆಯೇ ಗುಡ್‌ ಫ್ರೈಡೆ, ಮಹಾಲಯ ಅಮಾವಾಸ್ಯೆ, ಈದ್‌- ಮಿಲಾದ್‌ ಹಬ್ಬದ ದಿನದಂದು ನೀಡಲಾಗಿರುವ ರಜೆಯನ್ನು ಕೆಲಸದ ದಿನವನ್ನಾಗಿ ಪರಿವರ್ತಿಸುವುದು. ಈ ಜಯಂತಿ ಹಾಗೂ ಧಾರ್ಮಿಕ ಹಬ್ಬಗಳನ್ನು ನಿರ್ಬಂಧಿತ ರಜೆ ಎಂದು ಘೋಷಿಸುವುದು ಹಾಗೂ ಈ ಮಹಾನುಭಾವರ ಜಯಂತಿ ಆಚರಣೆಯನ್ನು ಯಥಾವತ್ತಾಗಿ ಮುಂದುವರಿಸುವ ಶಿಫಾರಸುಗಳಿದ್ದವು.

ಹಾಗೆಯೇ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೀಡುವ ಎರಡು ರಜೆಯನ್ನು ಹಬ್ಬದ 1ನೇ ಮತ್ತು 3ನೇ ದಿನದ ಬದಲಿಗೆ 1ನೇ ಮತ್ತು 2ನೇ ದಿನ ನೀಡುವ ಶಿಫಾರಸು ಕೂಡ ಇತ್ತು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ತನ್ನ ಶಿಫಾರಸುಗಳನ್ನು ಸರ್ಕಾರದ ಒಪ್ಪಿಗೆಗೆಂದು ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು. ಆದರೆ, ಇದಕ್ಕೆ ಸಂಪುಟ ಒಪ್ಪಿಗೆ ನೀಡಿಲ್ಲ. ನಾನಾ ಸಮುದಾಯ, ಕಾರ್ಯಾಂಗದ ತಜ್ಞರೊಂದಿಗೆ ಚರ್ಚಿಸಿ ಸಲಹೆ ಪಡೆದು ಹೊಸ ಶಿಫಾರಸುಗಳನ್ನು ಮಾಡುವಂತೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next