ಬೀದರ: ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಅನುಗುಣವಾಗಿ ರಾಜ್ಯ ಸರ್ಕಾರ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿದ್ದು, ನೌಕರರ ವಲಯದಲ್ಲಿ ಹರ್ಷವನ್ನುಂಟು ಮಾಡಿದೆ ಎಂದು ಸಂಘದ ಜಿಲ್ಲಾ ಘಟಕ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದೆ.
ಸಂಘವು ರಾಜ್ಯಾದ್ಯಂತ ಸಂಘಟಿತ ಹೋರಾಟ ಮಾಡಿದ ಹಿನ್ನೆಲೆಯ ಫಲವಾಗಿ 6ನೇ ವೇತನ ಆಯೋಗ ರಚನೆಯಾಯಿತು. ಆಯೋಗವು ಶೇ.30ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತು. ಆಯೋಗದ ಶಿಫಾರಸ್ಸುಗಳನ್ನು 1-4-2018ರಿಂದ ಜಾರಿಗೊಳಿಸಲು ಸರ್ಕಾರವು ಇಂದು ಆದೇಶ ಹೊರಡಿಸಿದೆ. ಇದು ಸಹಜವಾಗಿ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಸಂಘದಿಂದ ಮಾ.3ರಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಆಡಳಿತ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾರಂಭವನ್ನು ಸಿಎಂ ಉದ್ಘಾಟಿಸಲಿದ್ದಾರೆ. ಮಹಾ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ನೌಕರರು ತೆರಳಲಿದ್ದು, ಬಸ್ ಮತ್ತು ರೈಲು ಮೂಲಕ ಮಾ.2ರಂದು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ವೇತನ ಆಯೋಗದ ವರದಿಯಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಮತ್ತು ವೇತನ ಹೆಚ್ಚಳವನ್ನು ಶೇ.30ರಿಂದ 45ಕ್ಕೆ ಹೆಚ್ಚಿಸಲು ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಜೊತೆಗೆ ಹಲವು ವೃಂದಗಳ ವೇತನ ಶ್ರೇಣಿಗಳಲ್ಲಿ ಉಂಟಾಗಿರುವ ವೇತನ ತಾರತಮ್ಯ ಕುರಿತು ಅವರ ಗಮನಕ್ಕೆ ತರಲಾಗುವುದು. ಈ ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ನೌಕರರಿಗೆ ಮಾ.2 ಮತ್ತು 3ರಂದು ವಿಶೇಷ ಸಾಂದರ್ಭಿಕ ರಜೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಜಿಲ್ಲೆಯ ನೌಕರರು ಸದುಪಯೋಗ ಪಡಿಸಿಕೊಂಡು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.