Advertisement

ಇತ್ತೀಚೆಗೆ ಸ್ವಿಮ್ಮಿಂಗ್ ಫೂಲ್‌ ಉದ್ಘಾಟನೆ ; ಎಮ್ಮೆಕೆರೆ ಈಜುಕೊಳಕ್ಕೆ‌ ತಾತ್ಕಾಲಿಕ ಬೀಗ !

01:29 PM Jan 04, 2024 | Team Udayavani |

ಮಹಾನಗರ: ಕೆಲವು ದಿನಗಳ ಹಿಂದೆ ಎಮ್ಮೆಕೆರೆಯಲ್ಲಿ ಉದ್ಘಾಟನೆಗೊಂಡ ಅಂತಾರಾಷ್ಟ್ರೀಯ ಈಜುಕೊಳವನ್ನು
ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈಜುಕೊಳದಲ್ಲಿ ಇನ್ನಷ್ಟು ಮೂಲ ಸೌಲಭ್ಯ ವ್ಯವಸ್ಥೆಯನ್ನು ಹೆಚ್ಚಿಸಲು ದೇಶದ ಇತರ ಈಜುಕೊಳದಲ್ಲಿ ಯಾವ ರೀತಿ ಅಳವಡಿಸಲಾಗಿದೆ ಎಂದು ಸಮೀಕ್ಷೆ ನಡೆಸಲು ಸ್ಮಾರ್ಟ್‌ಸಿಟಿ ನಿರ್ಧರಿಸಿದೆ.

Advertisement

ಸದ್ಯ ಸಮೀಕ್ಷೆ ಪ್ರಗತಿಯಲ್ಲಿದೆ. ಇನ್ನು ಈಗಾಗಲೇ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಕೆಲವು ವರ್ಷ ನಿರ್ವಹಣೆ ಮಾಡಬೇಕಿದ್ದು, ಅವರಲ್ಲಿಯೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮೂಲ ಸೌಲಭ್ಯ ವ್ಯವಸ್ಥೆಗೆಂದು ಪ್ರತ್ಯೇಕ ಟೆಂಡರ್‌ ಕರೆಯಲು ಸ್ಮಾರ್ಟ್‌ಸಿಟಿ ನಿರ್ಧರಿಸಿದೆ.

ಈ ಎಲ್ಲ ವ್ಯವಸ್ಥೆ ಅಂತಿಮಗೊಳ್ಳಲು ಇನ್ನೂ ತಿಂಗಳು ಬೇಕು. ಇದೇ ಕಾರಣಕ್ಕೆ ಅಲ್ಲಿಯವರೆಗೆ ಈಜುಕೊಳಕ್ಕೆ ಬೀಗ
ಹಾಕಲಾಗುತ್ತದೆ. ಆದರೆ ಸ್ಯಾನಿಟೈಸಿಂಗ್‌ ಉದ್ದೇಶಕ್ಕೆ ಸ್ಮಿಮ್ಮಿಂಗ್‌ ಫೂಲ್‌ ಮುಚ್ಚಲಾಗಿದೆ ಎಂದು ಹೊರಾಂಗಣದಲ್ಲಿ ಫಲಕ ಅಳವಡಿಸಲಾಗಿದೆ. ಈಜುಕೊಳ ಸಂಕೀರ್ಣವನ್ನು ಕಳೆದ ವರ್ಷ ನಗರಾಭಿವೃದ್ಧಿ ಸಚಿವ ಬಿ.ಎಸ್‌.
ಸುರೇಶ್‌ ಅವರು ಉದ್ಘಾಟಿಸಿದ್ದರು.

ಇದೇ ವೇಳೆ ಮೂರು ದಿನಗಳ ರಾಷ್ಟ್ರೀಯ ಮಾಸ್ಟರ್ ಈಜು ಸ್ಪರ್ಧೆಯೂ ಆಯೋಜನೆಗೊಂಡಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಂದ ಈಜುಕೊಳದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿತ್ತು. ಆದರೆ ಬಳಿಕ ಈಜುಕೊಳಕ್ಕೆ ಈವರೆಗೆ ಯಾರಿಗೂ ಪ್ರವೇಶ ಕಲ್ಪಿಸಿಲ್ಲ. ಯಾವುದೇ ಸ್ಪರ್ಧೆಗಳೂ ಆಯೋಜನೆಗೊಂಡಿಲ್ಲ.

24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸುಮಾರು ಎರಡು ಎಕ್ರೆ ಜಾಗದಲ್ಲಿ 24.94 ಕೋ.ರೂ. ವೆಚ್ಚದಲ್ಲಿ ಎಮ್ಮೆಕೆರೆ
ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣ ವಾಗಿದೆ. ಈಜುಕೊಳ ಸಂಕೀರ್ಣವು 50 ಮೀ. ಉದ್ದ, 25 ಮೀ. ಅಗಲ ಮತ್ತು 2.2 ಮೀ. ನಿಂದ 1.4ಮೀ. ವರೆಗಿನ ಆಳವನ್ನು ಹೊಂದಿದೆ. ಕ್ರೀಡಾಪಟುಗಳಿಗೆ ತರಬೇತಿಗಾಗಿ 25 ಮೀ. ಉದ್ದ, 10 ಮೀ. ಅಗಲ ಮತ್ತು 2.2 ಮೀ. ಆಳದ ಅಭ್ಯಾಸ ಪೂಲ್‌ ಅನ್ನು ನಿರ್ಮಿಸಲಾಗಿದೆ.

Advertisement

ಮಕ್ಕಳನ್ನು ತರಬೇತುಗೊಳಿಸಲು 13.8 ಮೀ. ಉದ್ದ, 10ಮೀ ಅಗಲ ಮತ್ತು 1.2 ಮೀ. ಆಳದ ಪುಟಾಣಿ ಈಜುಕೊಳ ವನ್ನೂ ನಿರ್ಮಿಸಲಾಗಿದೆ. ನೆಲದಿಂದ +7.0ಮೀ. ಡೆಕ್‌ ಮಟ್ಟದ ಎತ್ತರದಲ್ಲಿ ಈಜು ಕೊಳ ನಿರ್ಮಿಸಲಾಗಿದೆ. ಈಜು ಕೊಳ ಸಂಕೀರ್ಣದಲ್ಲಿ ಸ್ಪರ್ಧಾಳು ಈಜುಪಟುಗಳಿಗೆ ವಸತಿ ನಿಲಯಗಳು, ಜಿಮ್ನಾಶಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‌ ಗಳು, ಆಡಳಿತ ಕಚೇರಿ, ಕ್ರೀಡಾ ಔಷಧ, ಚಿಕಿತ್ಸಾ ಕೊಠಡಿಗಳು, ಫಿಸಿಯೋಥೆರಪಿ ಕೇಂದ್ರ ಸಹಿತ ಅಗತ್ಯ ಸೌಲಭ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next