ತಿರುವನಂತಪುರ: ಭಾರತ- ನ್ಯೂಜಿಲ್ಯಾಂಡ್ ನಡುವೆ ಮಂಗಳವಾರ ತಿರುವನಂತಪುರದಲ್ಲಿ ನಡೆದ ಟಿ20 ಪಂದ್ಯದ ವೇಳೆ ದೊಡ್ಡದೊಂದು ಅಚಾತುರ್ಯ ಸಂಭವಿಸಿದೆ. ಅಂದಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನೇ ನುಡಿಸಿರಲಿಲ್ಲ!
ಇದಕ್ಕಾಗಿ ಕೇರಳ ಕ್ರಿಕೆಟ್ ಮಂಡಳಿ ಕ್ಷಮೆಯಾಚಿಸಿದೆ.ತಿರುವನಂತಪುರದ “ಗ್ರೀನ್‌ಫೀಲ್ಡ್ ಸ್ಟೇಡಿಯಂ’ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಸಂಭ್ರಮದಲ್ಲಿತ್ತು. ಆದರೆ ಮಳೆಯಿಂದ ಈ ಪಂದ್ಯಕ್ಕೆ ಭಾರೀ ಅಡಚಣೆ ಯಾಗಿತ್ತು. ಎರಡೂವರೆ ಗಂಟೆ ವಿಳಂಬ ವಾಗಿ ಮೊದಲ್ಗೊಂಡ ಮುಖಾಮುಖೀ ಯನ್ನು ತಲಾ 8 ಓವರ್ ಗಳಿಗೆ ಇಳಿಸ ಲಾಗಿತ್ತು. ಈ ಎಲ್ಲ ಗಡಿಬಿಡಿಯಿಂದಾಗಿ ಪಂದ್ಯಕ್ಕೂ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆಯನ್ನು ನುಡಿಸಲು ಮರೆತೇ ಹೋಗಿತ್ತು!
ಇದೀಗ ಕೇರಳ ಕ್ರಿಕೆಟ್ ಮಂಡಳಿ (ಕೆಸಿಎ) ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರು ಈ ಎಡವಟ್ಟಿಗಾಗಿ ವಿಷಾದಿಸಿದ್ದಾರೆ; ಇದು ತಮ್ಮಿಂದಾದ ಪ್ರಮಾದ ಎಂದು ಒಪ್ಪಿಕೊಂಡಿದ್ದಾರೆ.”ಹೌದು, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ನುಡಿಸುವ ಸಂಪ್ರದಾಯ ವನ್ನು ಪಾಲಿಸಬೇಕಿತ್ತು. ನಮ್ಮ ಕಡೆ ಯಿಂದ ಬಹು ದೊಡ್ಡ ತಪ್ಪೊಂದು ಸಂಭವಿಸಿದೆ. ನಾವೆಲ್ಲರೂ ಅಂದು ಸ್ಟೇಡಿಯಂನಲ್ಲಿದ್ದೆವು. ಯಾವಾಗ ಮಳೆ ನಿಲ್ಲುತ್ತದೆ, ಯಾವಾಗ ಪಂದ್ಯವನ್ನು ಆರಂಭಿಸುವುದೆಂಬ ತರಾತುರಿ ನಮ್ಮ ದಾಗಿತ್ತು. ಹೀಗಾಗಿ ರಾಷ್ಟ್ರಗೀತೆ ಹಾಡಿ ಸಲು ಮರೆತೆವು. ಇದೊಂದು ಗಂಭೀರ ಅಪರಾಧ. ಇದಕ್ಕಾಗಿ ಕ್ಷಮೆಯಾ ಚಿಸುತ್ತೇವೆ, ಮುಂದೆ ಇಂಥ ತಪ್ಪು ಸಂಭವಿಸದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದು ಜಾರ್ಜ್ ಹೇಳಿದ್ದಾರೆ.
ಶ್ರೀಶಾಂತ್ ಬರಲಿಲ್ಲ
ಇಲ್ಲಿ ನಡೆಯುವ ಮೊದಲ ಅಂತಾರಾಷ್ಟ್ರೀಯ ಪಂದ್ಯವಾದ್ದರಿಂದ ಎಸ್. ಶ್ರೀಶಾಂತ್ ಸಹಿತ ಕೇರಳದ ಕ್ರಿಕೆಟಿಗರನ್ನು ಆಹ್ವಾನಿಸಲಾಗಿತ್ತು. ಆದರೆ ಶ್ರೀಶಾಂತ್ ಈ ಆಹ್ವಾನವನ್ನು ನಿರಾಕರಿಸಿದರು ಎಂದೂ ಕಾರ್ಯದರ್ಶಿ ಜಾರ್ಜ್ ಹೇಳಿದರು. ಬಿಸಿಸಿಐನಿಂದ ನಿಷೇಧಕ್ಕೊಳಗಾಗಿರುವುದೇ ಶ್ರೀಶಾಂತ್ ಅವರ ಈ ನಿರ್ಧಾರಕ್ಕೆ ಕಾರಣ.