ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆ ನಡೆಸಿರುವ ಬಿಜೆಪಿ ಹಿನ್ನಡೆಗೆ “ಪಂಚ’ ಕಾರಣಗಳನ್ನು ಅರಸಿದೆ. ಒಳಮೀಸಲು ಜಾರಿಯಿಂದ ಪಕ್ಷದ ಪರಂಪರಾಗತ ಮತಬ್ಯಾಂಕ್ ಕೈ ಜಾರಿದೆ ಎಂಬ ಸತ್ಯ ಫಲಿತಾಂಶದ ಬಳಿಕ ಬಿಜೆಪಿ ನಾಯಕರಿಗೆ ಅರಿವಾಗಿದೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರವಿವಾರ ನಡೆದ ಪ್ರಮುಖರ ಸಭೆಯಲ್ಲಿ ರಾಜ್ಯದ ಚುನಾವಣ ಫಲಿತಾಂಶದ ಕುರಿತು ವಿಶ್ಲೇಷಣೆ ನಡೆಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಟಿಕೆಟ್ ಹಂಚಿಕೆಯಲ್ಲಿ ಆದ ಕೆಲವು ವ್ಯತ್ಯಾಸಗಳೂ ಸೇರಿದಂತೆ ಒಟ್ಟು ಐದು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಸೋತ ಅಭ್ಯರ್ಥಿಗಳನ್ನು ಈ ಸಭೆಗೆ ಆಹ್ವಾನಿಸಿದರೆ “ಬ್ಲೇಮ್ ಗೇಮ್’ ಪ್ರಾರಂಭವಾಗಬಹುದೆಂಬ ಕಾರಣಕ್ಕೆ ಪಕ್ಷದ ವಿವಿಧ ಮೋರ್ಚಾಗಳ ಮುಖ್ಯಸ್ಥರು ಹಾಗೂ ಪ್ರಮುಖ ನಾಯಕರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಒಳಮೀಸಲಾತಿ ಹೊಡೆತದಿಂದ ಬೋವಿ ಹಾಗೂ ಲಂಬಾಣಿ ಸಮುದಾಯದ ಮತ ಪಕ್ಷದಿಂದ ದೂರವಾಗುವ ಜತೆಗೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜತೆಗೆ ಗಟ್ಟಿಯಾಗಿ ಧ್ರುವೀಕರಣಗೊಂಡಿದ್ದು ಸೋಲಿಗೆ ಪ್ರಧಾನ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಾರಣಗಳೇನು?
ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳು, ಒಳಮೀಸಲು, ಜಾತಿ ಹಾಗೂ ಸಮುದಾಯದ ವಿಚಾರದಲ್ಲಿ ಒಡಮೂಡಿದ ತಪ್ಪು ಕಲ್ಪನೆ, ಸಮನ್ವಯದ ಕೊರತೆ, ಹಾಗೂ ಸಾಮಾಜಿಕ ಸಮೀಕರಣದಲ್ಲಿ ಆದ ಬದಲಾವಣೆ ಪ್ರಧಾನ ಕಾರಣ ಎಂದು ಬಿಜೆಪಿ ನಾಯಕರು ಈ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಲಿಂಗಾಯತ ಸಮುದಾಯದ ನಾಯಕರು ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಪಟ್ಟಂತೆ ಹಬ್ಬಿಸಿದ ಸುಳ್ಳು ಸುದ್ದಿಗಳು ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಲಾಡ್ಯ ಲಿಂಗಾಯತ ಸಮುದಾಯದ ಮತಬ್ಯಾಂಕ್ ವ್ಯತ್ಯಾಸಗೊಳ್ಳುವುದಕ್ಕೆ ಕಾರಣವಾಯಿತು. ಸಾಮಾಜಿಕ ಸಮೀಕರಣದಲ್ಲಿ ಆದ ಈ ವ್ಯತ್ಯಾಸದಿಂದ ನೆಲೆಯಿಲ್ಲದ ಜಿಲ್ಲೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತಾಯಿತು ಎಂದು ಅಭಿಪ್ರಾಯಪಡಲಾಗಿದೆ.
ಯಾರು ಏನೇ ಹೇಳಿದರೂ ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಮ್‌ಗಳು ಚುನಾವಣೆ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಮತದಾರರು ನಗರ ಪ್ರದೇಶದಲ್ಲೂ ಇದರಿಂದ ಕಾಂಗ್ರೆಸ್ ಕಡೆ ವಾಲುವುದಕ್ಕೆ ಕಾರಣವಾಯಿತು. ಅದೇ ರೀತಿ ಕೆಲ ವಿಚಾರಗಳಲ್ಲಿ ಮೂಡಿದ ತಪ್ಪು ಕಲ್ಪನೆಯನ್ನು ನಿವಾರಿಸುವಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ವಿಫಲವಾಯಿತು. ಚುನಾವಣ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಅನ್ನು ಸರಿಗಟ್ಟುವುದಕ್ಕೆ ಹಾಗೂ ತಿರುಗೇಟು ನೀಡುವುದಕ್ಕೆ ಎರಡರಲ್ಲೂ ನಾವು ವಿಫಲವಾಗಬೇಕಾಯಿತು ಎಂದು ವಿಶ್ಲೇಷಿಸಲಾಗಿದೆ.
Related Articles
ಅದೇ ರೀತಿ ಬೆಂಗಳೂರು ನಗರದಲ್ಲಿ ಇನ್ನೂ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಇದ್ದ ಅವಕಾಶ ಕೈ ಚೆಲ್ಲಬೇಕಾಯಿತು. ಗೋವಿಂದರಾಜನಗರ, ಶಾಂತಿನಗರ, ಗಾಂಧಿನಗರ ಹಾಗೂ ಬಿಟಿಎಂ ಲೇಔಟ್‌ನಲ್ಲಿ ಇನ್ನಷ್ಟು ಶ್ರಮ ಹಾಕಿದರೆ ಪಕ್ಷ ಗೆಲ್ಲುವ ಸಾಧ್ಯತೆ ಇತ್ತು. ಸಚಿವರು ಹಾಗೂ ಪ್ರಮುಖ ನಾಯಕರು ಈ ಪ್ರಮಾಣದಲ್ಲಿ ಜನ ವಿರೋಧಕ್ಕೆ ಪಾತ್ರವಾಗಿದ್ದಾರೆಂಬ ಅಂಡರ್ ಕರೆಂಟ್ ಸಂದೇಶವನ್ನು ಗ್ರಹಿಸುವಲ್ಲಿ ಪಕ್ಷ ವಿಫಲವಾಯಿತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಬುಧವಾರ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ
ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ವಿಪಕ್ಷ ನಾಯಕ ಯಾರಾಗಬೇಕೆಂಬ ನಿರ್ಧಾರ ತೆಗೆದುಕೊಳ್ಳಲು ಬುಧವಾರ ಬಿಜೆಪಿಯ ಸಭೆ ನಡೆಯುವ ಸಾಧ್ಯತೆ ಇದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಅನಂತರ ಶಾಸಕಾಂಗ ಪಕ್ಷದ ಸಭೆ ನಡೆಸಿ ಎರಡು ಸದನದ ವಿಪಕ್ಷ ನಾಯಕ, ಉಪನಾಯಕ ಹಾಗೂ ಮುಖ್ಯ ಸಚೇತಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.