Advertisement

ಅವಕಾಶ ತಪ್ಪಿದ್ದಕ್ಕೆ ಕಾರಣ ಗೊತ್ತಾಗಿಲ್ಲ: ತೇಜಸ್ವಿನಿ

12:27 AM Apr 16, 2019 | Lakshmi GovindaRaju |

ಬೆಂಗಳೂರು: “ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಅವಕಾಶ ನೀಡದಿರುವುದಕ್ಕೆ ಕಾರಣ ಹೇಳಬೇಕು ಎಂದು ಕೆಲವರು ಒತ್ತಾಯಿಸಿದ್ದು ನಿಜ. ಅದಕ್ಕೆ ಕಾರಣಗಳು ಗೊತ್ತಾಗಿಲ್ಲ. ಯುದ್ದ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀರಿಕ್ಷಿಸಲಾಗದು. ಮುಂದೆ ಕಾರಣ ತಿಳಿಸಬಹುದು. ನಾನು ಒತ್ತಾಯ ಮಾಡಿಲ್ಲ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್‌ ಖಡಕ್‌ ಆಗಿ ಹೇಳಿದರು.

Advertisement

ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಯುದ್ದ ಕಾಲ. ಈ ಸಂದರ್ಭದಲ್ಲಿ ಎಲ್ಲ ಪ್ರಶ್ನೆಗಳಿಗೆ ಈಗಲೇ ಉತ್ತರ ನಿರೀಕ್ಷಿಸುವುದು ಸರಿಯಲ್ಲ. ಪಕ್ಷದ ಹಿರಿಯ ನಾಯಕರು ನಾನಾ ಕಾರಣಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿರಬಹುದು.

ಈ ಬಗ್ಗೆ ಮುಂದೆ ಕಾರಣಗಳನ್ನು ಹೇಳಬಹುದು. ಸದ್ಯ ನಾವೆಲ್ಲ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಗುರಿಯತ್ತ ಗಮನ ಹರಿಸಿದ್ದೇವೆ ಎಂದು ಹೇಳಿದರು. ಜೀನ್ಸ್‌, ಡಿಎನ್‌ಎ ಆಧರಿಸಿ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ತೇಜಸ್ವಿನಿ, ಸಂತೋಷ್‌ ಅವರು ಏನು ಹೇಳಿದ್ದಾರೋ ಗೊತ್ತಿಲ್ಲ.

ಅವರು ಹೇಳಿಕೆ ನೀಡುವಾಗ ನಾನು ಇರಲಿಲ್ಲ. ಈ ಬಗ್ಗೆ ಚರ್ಚಿಸುತ್ತೇನೆ. ನಂತರ ಅವರೇ ಸ್ಪಷ್ಟನೆ ನೀಡಬಹುದು. ನಾನು ಯಾವುದನ್ನು ಹೇಳಬೇಕು ಎನಿಸುತ್ತದೇಯೋ ಅದನ್ನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ. ಅದಕ್ಕೆ ಯಾವುದೇ ಹಿಂಜರಿಕೆ ಇಲ್ಲ. ಯಾವ ದೃಷ್ಟಿಯಿಂದ ಈ ರೀತಿ ಹೇಳಿದ್ದಾರೆ ಎಂಬ ಬಗ್ಗೆ ಸಂತೋಷ್‌ ಅವರೊಂದಿಗೂ ಮಾತನಾಡುತ್ತೇನೆ.

ಅವರು ಹಿರಿಯರು. ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾಯದರ್ಶಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಪತ್ರಿಕೆಗಳಲ್ಲಿ ಹೇಳಿಕೆ ಓದಿ ಅದಕ್ಕೆ ಉತ್ತರ ನೀಡುವುದು ಸರಿ ಎನಿಸದು ಎಂದು ಹೇಳಿದರು. ಈ ಬಗ್ಗೆ ಹೆಚ್ಚು ಪ್ರಶ್ನೆಗಳು ಕೇಳಿ ಬಂದಾಗ, ನಾನು ಕಟಕಟೆಯಲ್ಲಿ ನಿಂತಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಕುಳಿತಿದ್ದೇನೆ ಎಂದು ನಗುತ್ತಾ ಹೇಳಿದರು.

Advertisement

ಈ ಬಾರಿ ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಉತ್ತರ ಕ್ಷೇತ್ರಗಳ ಜತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಗೆಲ್ಲುವುದು ಮೊದಲ ಆದ್ಯತೆ. ಮುಂದೆ ಉಪಾಧ್ಯಕ್ಷೆಯಾಗಿ ಪಕ್ಷ ಏನನ್ನು ಅಪೇಕ್ಷಿಸುತ್ತದೆ ಎಂಬ ಬಗ್ಗೆ ಹಿರಿಯರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಚಾರಿತ್ರ್ಯಕ್ಕೆ ಸಂಬಂಧಪಟ್ಟಂತೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿನಿ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು, ಪ್ರಮುಖರ ಬಗ್ಗೆ ಈ ರೀತಿಯ ಆರೋಪಗಳು ಕೇಳಿ ಬರುತ್ತವೆ.

ನೋಟಾಗೆ ಮತ ಹಾಕುವಂತೆ ನಾನೇ ಕರೆ ನೀಡಿದಂತೆ ಕರಪತ್ರ ಹರಡುತ್ತಿರುವುದು ನಡೆದಿದೆ. ಆರೋಪವಿದ್ದರೂ ತನಿಖೆಯಾಗಿ ಸತ್ಯಾಂಶ ಹೊರಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತ ಎಂದು ಹೇಳಿದರು. ರಾಜ್ಯ ಬಿಜೆಪಿ ಸಹ ವಕ್ತಾರರಾದ ಎ.ಎಚ್‌.ಆನಂದ್‌, ಎಸ್‌.ಪ್ರಕಾಶ್‌, ಮಾಜಿ ಉಪಮೇಯರ್‌ ಎಸ್‌. ಹರೀಶ್‌ ಉಪಸ್ಥಿತರಿದ್ದರು.

“ನೋಟಾ’ಗೆ ಮತ ಹಾಕಿ ಎಂದಿಲ್ಲ – ತೇಜಸ್ವಿನಿ: ಲೋಕಸಭಾ ಚುನಾವಣೆಗೆ ಮತದಾನ ಸಮೀಪಿಸುತ್ತಿದ್ದು, “ನೋಟಾ’ಗೆ ಮತ ಹಾಕಬೇಕು ಎಂಬುದಾಗಿ ನಾನು ಕರೆ ನೀಡಿರುವ ರೀತಿಯಲ್ಲಿ ಕರಪತ್ರವೊಂದು ವಾಟ್ಸಾಪ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು.

ನಾವು ಬಿಜೆಪಿ ಪರಿವಾರದಿಂದ ಬಂದವರು. ಅನಂತ ಕುಮಾರ್‌ ಅವರು ಆರು ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕೊನೆಯುಸಿರು ಇರುವವರೆಗೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದವರು. ನನ್ನನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಿರುವ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಕರೆ ನೀಡಿಲ್ಲ. ಮತದಾರರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಕರಪತ್ರ ಮಾಡಿದ್ದಾರೆ ಎಂದು ದೂರಿದರು.

ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ “ನೋಟಾ’ಗೆ ನಮ್ಮ ಬೆಂಬಲ ಇಲ್ಲ. ಪಕ್ಷದ ಹಿರಿಯರು ಸಹ ಯಾವುದೇ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ನೋಟಾ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ಕರಪತ್ರದ ಬಗ್ಗೆ ಪೊಲೀಸ್‌ ದೂರು ನೀಡಲಾಗಿದೆ. ಸೈಬರ್‌ ಅಪರಾಧ ವಿಭಾಗಕ್ಕೂ ತಿಳಿಸಲಾಗಿದೆ ಎಂದು ಹೇಳಿದರು.

ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಇಲ್ಲ ಸಲ್ಲದ ಆರೋಪ ಹೊರಿಸಲು ಈ ಕೃತ್ಯ ನಡೆಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಈ ಕೃತ್ಯ ನಡೆಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next