Advertisement

ರಿಮೇಕ್‌ ಮಾಡೋಕೆ ಕಾರಣ ಕಥೆ

11:50 AM Aug 02, 2018 | Team Udayavani |

ಇದೇ ಮೊದಲ ಸಲ ಅಂಧ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಜಕುಮಾರ್‌ ಅಭಿನಯದ “ಕವಚ’ ಚಿತ್ರೀಕರಣ ಮುಗಿದಿದೆ. ನೂರು ಪ್ಲಸ್‌ ಚಿತ್ರಗಳ ಬಳಿಕ “ಕವಚ’ದ ಕಥೆ ಮತ್ತು ಪಾತ್ರ ಮೆಚ್ಚಿಕೊಂಡು ನಟಿಸಿರುವ ಶಿವರಾಜಕುಮಾರ್‌ ಅವರಿಗೆ ಅದೊಂದು ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ.

Advertisement

ತಮ್ಮ ಅಂಧ ಪಾತ್ರ ಕುರಿತು ಶಿವರಾಜಕುಮಾರ್‌ ಸಾಕಷ್ಟು ಮೆಚ್ಚಿಕೊಂಡಿದ್ದಾರೆ. “ಎಂಟು ತಿಂಗಳು ಹೇಗೆ ಕಳೆದೋಯ್ತು ಅನ್ನೋದು ಅವರಿಗೇ ಗೊತ್ತಾಗಿಲ್ಲವಂತೆ. ಅವರೊಂದಿಗೆ ದೊಡ್ಡ ತಂಡವೇ ಕಾಣಿಸಿಕೊಂಡಿದೆ. ಈ ಹಿಂದೆ ಶಿವರಾಜಕುಮಾರ್‌ ಅವರು ರೀಮೇಕ್‌ ಮಾಡೋದಿಲ್ಲ ಎಂದು ಹೇಳಿದ್ದರು.

ಆದರೆ, “ಕವಚ’ ಚಿತ್ರ ನೋಡಿದ ಮೇಲೆ ಮಾಡಲೇಬೇಕೆನಿಸಿ, ಮಾಡಿದ್ದಾರೆ. ಅದರಲ್ಲೂ ಕಾಡಿದ ಕಥೆ, ಮೋಹನ್‌ಲಾಲ್‌ ಅವರು ನಿರ್ವಹಿಸಿದ ಪಾತ್ರ ಕಂಡು ಮಾಡಲು ನಿರ್ಧರಿಸಿ, “ಕವಚ’ದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಹೇಳುವಂತೆ, “ಮೊದಲು ಭಯವಿತ್ತು. ಯಾಕೆಂದರೆ, ಅಂಧನ ಪಾತ್ರ ಅದುವರೆಗೂ ಮಾಡಿಯೇ ಇಲ್ಲ.

ಅದಕ್ಕಾಗಿ ಯಾವುದೇ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಬ್ಲೆ„ಂಡ್‌ ಆಗಿಯೇ ಸೆಟ್‌ಗೆ ಹೋದೆ. ಅದಕ್ಕೂ ಮುನ್ನ ಚಿತ್ರ ನೋಡಿದ್ದೆ. ಸೆಟ್‌ನಲ್ಲಿ ಒಬ್ಬರು ಒಂದಷ್ಟು ಹೇಳಿಕೊಟ್ಟರು. ಅದನ್ನೇ ಮಾಡುತ್ತಾ ಹೋದೆ. ಅಂಧರು ಅಂದಾಕ್ಷಣ, ಎಲ್ಲರೂ ಒಂದೇ ರೀತಿ ಇರಲ್ಲ. ಇಲ್ಲಿ ಸಾಗರ ಎಂಬ ಊರಿನ ಬಗ್ಗೆ ಅವನಿಗೆ ಎಲ್ಲವೂ ಗೊತ್ತಿರುತ್ತೆ.

ಹಾಗಾಗಿ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವೇಗವಾಗಿ ಅವನ ಪಾಡಿಗೆ ಅವನು ನಡೆದಾಡುತ್ತಿರುತ್ತಾನೆ. ಇನ್ನು, ಆ ಪಾತ್ರ ನಗುವುದು, ಅಳುವುದು ಓವರ್‌ ಆಗುತ್ತಾ ಎಂಬ ಪ್ರಶ್ನೆ ಇತ್ತು. ಮಾನಿಟರ್‌ ನೋಡಿ, ನೋಡಿ ನೈಜತೆ ಕಟ್ಟಿಕೊಡುವ ಉದ್ದೇಶದಿಂದ ಪಾತ್ರ ನಿರ್ವಹಿಸುತ್ತಿದ್ದೆ. ಇನ್ನು, ಕಣ್ಣುಗಳನ್ನು ಒಂದೇ ಸಮನೆ ಮೇಲೆ ಮಾಡಿಕೊಳ್ಳಬೇಕಿತ್ತು. ಅದರಿಂದ ತುಂಬಾ ತಲೆನೋವಾಗುತ್ತಿತ್ತು.

Advertisement

ಎಷ್ಟೋ ಸಲ, ಕಿರಿಕಿರಿಯಾಗಿ, ಜಗಳ ಆಡಿದ್ದುಂಟು. ಆ ಸಮಯದಲ್ಲಿ ಎಲ್ಲರೂ ನನ್ನನ್ನು ಬೈದುಕೊಂಡಿರಬಹುದೇನೋ? ಆದರೆ, ಅದು ಸಿಟ್ಟಿನಿಂದ ಆಡಿದ್ದಲ್ಲ, ಪ್ರೀತಿಯಿಂದ ಮಾಡಿದ ಜಗಳ’ ಎಂಬುದು ಶಿವರಾಜಕುಮಾರ್‌ ಮಾತು. ಹೊಸ ವರ್ಷ ಬಂದಾಗ ಎಲ್ಲರೂ ಒಂದೊಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಸಿಗರೇಟ್‌, ಕುಡಿತ ಹೀಗೆ ಒಂದೊಂದು ಅಭ್ಯಾಸ ಬಿಡುವ ನಿರ್ಣಯಗಳು.

ನಾನೂ ಕೂಡ ಹೊಸ ವರ್ಷದಲ್ಲೊಂದು ನಿರ್ಣಯ ತೆಗೆದುಕೊಳ್ತೀನಿ. ಅದು ಕೋಪ ಕಮ್ಮಿ ಮಾಡಿಕೊಳ್ಳುವ ನಿರ್ಣಯ. ಸೆಟ್‌ನಲ್ಲಿ ಕೋಪಿಸಿಕೊಂಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ’ ಅಂತ ಹೇಳುವ ಅವರು, ಇಲ್ಲಿ ಸಾಕಷ್ಟು ಎಮೋಷನ್ಸ್‌ ಇದೆ. ಆ್ಯಕ್ಷನ್‌ ಇದೆಯಾದರೂ, ಆ ಪಾತ್ರ ಶಬ್ಧ ಮತ್ತು ವಾಸನೆ ಗ್ರಹಿಸಿ ಹೊಡೆದಾಡುತ್ತೆ’ ಎಂದು ತಮ್ಮ ಪಾತ್ರ ಕುರಿತು ವಿವರ ಕೊಡುತ್ತಾರೆ ಶಿವರಾಜಕುಮಾರ್‌.

ಅಂದಹಾಗೆ, ಸಾಗರ ಬೆಂಗಳೂರು, ಮೈಸೂರು, ಮಡಿಕೇರಿ, ಊಟಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಇಷಾ ಕೊಪ್ಪೀಕರ್‌, ವಸಿಷ್ಠ ಸಿಂಹ, ರಾಜೇಶ್‌ ನಟರಂಗ, ತಬಲಾನಾಣಿ, ಮೀನಾಕ್ಷಿ, ಕೃತಿಕಾ ಇತರರು ನಟಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತವಿದೆ.

ಶೇಷಾದ್ರಿ ಜೊತೆ ಸಿನಿಮಾ ಸಾಧ್ಯತೆ
ಶಿವರಾಜಕುಮಾರ್‌ ಅವರೀಗ “ಕವಚ’ ಮುಗಿಸಿದ್ದಾರೆ. ಅವರ ಕೈಯಲ್ಲೀಗ “ರುಸ್ತುಂ’ ಮತ್ತು “ದ್ರೋಣ’ ಚಿತ್ರಗಳಿವೆ. ಈ ಮಧ್ಯೆ ಮೂರು ಕತೆಗಳನ್ನು ಕೇಳಿದ್ದಾರೆ. ಆ ಪೈಕಿ ಪಿ.ಶೇಷಾದ್ರಿ ಅವರ ಕಥೆಯೂ ಸೇರಿದೆ. ಶೇಷಾದ್ರಿ ಅವರು ಹೇಳಿದ ಒನ್‌ಲೈನ್‌ ಚೆನ್ನಾಗಿದ್ದು, ಆ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶಿವರಾಜಕುಮಾರ್‌ ಮುಂದಿನ ಚಿತ್ರ ಪಿ.ಶೇಷಾದ್ರಿ ಅವರ ಜೊತೆ ಮಾಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next