Advertisement
ಆದರೆ ಮುಂದಿನ ಹಾದಿ ಖಂಡಿತ ಸುಗಮವಲ್ಲ, ಸುಲಲಿತವೂ ಅಲ್ಲ. ಇದು ಸೆಮಿಫೈನಲ್ ಪ್ರವೇಶಿಸಿದ ನಾಲ್ಕೂ ತಂಡಗಳಿಗೆ ಅನ್ವಯಿಸುವ ಮಾತು. ಸತತ 9 ಪಂದ್ಯಗಳನ್ನು ಗೆದ್ದರೇ ನಂತೆ, ಮುಂದಿನೆರಡೂ ಪಂದ್ಯಗಳನ್ನು ವಶಪಡಿಸಿಕೊಳ್ಳುವುದು ಈ 9 ವಿಜಯಗಳಿಗಿಂತ ಕಠಿನ ಎಂಬ ಅರಿವು ಖಂಡಿತವಾಗಿಯೂ ಭಾರತಕ್ಕಿದೆ.ಲೀಗ್‌ನಲ್ಲಿ ಸೋತರೆ ಚೇತರಿಕೆಗೆ ಮಾರ್ಗವೊಂದು ತೆರೆದಿರುತ್ತಿತ್ತು. ಆದರ ನಾಕೌಟ್ ಹಾಗಲ್ಲ, ಇಲ್ಲಿ ಒಂದು ಹೆಜ್ಜೆ ಎಡವಿದರೂ “ಕಪ್’ ಕನಸು ಛಿದ್ರಗೊಳ್ಳುತ್ತದೆ. ಹೀಗಾಗದಿರಲಿ ಎಂಬ ಕೋಟ್ಯಂತರ ಮಂದಿಯ ಹಾರೈಕೆಯೊಂದಿಗೆ ಭಾರತ ತಂಡ ಬುಧವಾರ ಪ್ರಬಲ ನ್ಯೂಜಿಲ್ಯಾಂಡ್ ವಿರುದ್ಧ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಸೆಮಿಫೈನಲ್ ಸೆಣ ಸಾಟಕ್ಕೆ ಇಳಿಯಲಿದೆ.
ಇದು ಭಾರತ-ನ್ಯೂಜಿಲ್ಯಾಂಡ್ ನಡುವಿನ ಸತತ 2ನೇ ವಿಶ್ವಕಪ್ ಸೆಮಿಫೈನಲ್. ನ್ಯೂಜಿಲ್ಯಾಂಡಿಗೆ ಸತತ 5ನೇ ಉಪಾಂತ್ಯ. 2019ರ ಮ್ಯಾಂಚೆಸ್ಟರ್ ಮೇಲಾಟದಲ್ಲಿ ಕಿವೀಸ್ ಪಡೆ ಕೊಹ್ಲಿ ಬಳಗವನ್ನು 18 ರನ್ನುಗಳಿಂದ ಕೆಡವಿ ಕೂಟದಿಂದ ಹೊರದಬ್ಬಿತ್ತು. ಭಾರತದ ಪಾಳೆಯದಲ್ಲಿ ಆ ಸೇಡು ಇನ್ನೂ ಕೊತ ಕೊತ ಕುದಿಯುತ್ತಿದೆ. ಈ ಬಾರಿ ಕೇನ್ ವಿಲಿಯಮ್ಸನ್ ಪಡೆಯನ್ನು ಹೊರದಬ್ಬಿದರೆ ಅಲ್ಲಿಗೆ ಲೆಕ್ಕ ಚುಕ್ತಾ ಆದಂತಾಗುತ್ತದೆ. ಅನುಮಾನವೇ ಇಲ್ಲ, ಭಾರತ ಈ ಕೂಟದ ಅತ್ಯಂತ ಬಲಿಷ್ಠ ಹಾಗೂ ಅತ್ಯಂತ ಅಪಾಯಕಾರಿ ತಂಡ. ಯಾವ ಎದುರಾಳಿಯನ್ನೂ ಬಿಡುವುದಿಲ್ಲ ಎಂದು ಪಣತೊಟ್ಟಂತೆ ಆಡುತ್ತಿದೆ. ಇದಕ್ಕೆ ನಮ್ಮವರು ದಾಖಲಿಸಿದ ಒಂದೊಂದು ಫಲಿತಾಂಶವೇ ಸಾಕ್ಷಿ. ಯಾವಾಗ ಆಸ್ಟ್ರೇಲಿಯ ಎದುರಿನ ಆರಂಭಿಕ ಪಂದ್ಯದಲ್ಲಿ 2 ರನ್ನಿಗೆ 3 ವಿಕೆಟ್ ಉದುರಿಸಿಕೊಂಡೂ ಗೆದ್ದು ಬಂದಿತೋ, ಆಗಲೇ ಇಡೀ ಕೂಟಕ್ಕಾಗುವಷ್ಟು ಆತ್ಮವಿಶ್ವಾಸವನ್ನು ಗಳಿಸಿಕೊಂಡಿತು.
ಸದ್ಯ ಭಾರತ ತಂಡದಲ್ಲಿ ಯಾವುದೇ ಕೊರತೆ ಇಲ್ಲ. ಫಾರ್ಮ್ ಚಿಂತೆ ಇಲ್ಲ. ಬಲಾಡ್ಯ ಬ್ಯಾಟಿಂಗ್ ಸರದಿ, ಡೇಂಜರಸ್ ಬೌಲಿಂಗ್ ಯೂನಿಟ್ ನಮ್ಮದಾಗಿದೆ. ಇಲ್ಲಿಯ ತನಕ “ಫ್ಯಾಬ್ ಫೋರ್, ಫ್ಯಾಬ್ ಫೈವ್’ ಎಂದೆಲ್ಲ ಭಾರತದ ಬ್ಯಾಟಿಂಗ್ ಸರದಿಯನ್ನು ಹೊಗಳುತ್ತಿದ್ದರು. ಇದೀಗ “ಫ್ಯಾಬ್ ಫೈವ್’ ಎಂಬುದು ನಮ್ಮವರ ಬೌಲಿಂಗ್ ಪಡೆಯ ಟ್ಯಾಗ್‌ಲೈನ್ ಆಗಿದೆ. ಬುಮ್ರಾ, ಶಮಿ, ಸಿರಾಜ್, ಜಡೇಜ ಮತ್ತು ಕುಲದೀಪ್ ಅವರ ಎಸೆತಗಳನ್ನು ನಿಭಾಯಿಸಿ ನಿಲ್ಲುವುದು ಪ್ರತಿಯೊಂದು ತಂಡಕ್ಕೂ ಭಾರೀ ಸವಾಲಾಗಿ ಪರಿಣಮಿಸಿದೆ.
Related Articles
Advertisement
ಲೀಗ್‌ನಲ್ಲಿ ನ್ಯೂಜಿಲ್ಯಾಂಡನ್ನು 4 ವಿಕೆಟ್‌ಗಳಿಂದ ಮಣಿಸಿದ ಖುಷಿ ನಮ್ಮ ಪಾಲಿಗಿದೆ. ಇಲ್ಲಿ ಎಡವಿದ ಬಳಿಕವೇ ಕಿವೀಸ್‌ಗೆ ಕಂಟಕ ಎದುರಾದದ್ದು. ಸತತ 4 ಪಂದ್ಯಗಳನ್ನು ಗೆದ್ದು ಇನ್ನೇನು ಸೆಮಿಫೈನಲ್ ಖಾತ್ರಿಗೊಂಡಿತು ಎನ್ನುವಷ್ಟರಲ್ಲಿ ನಿರಂತರ 4 ಸೋಲಿನ ಆಘಾತಕ್ಕೆ ಸಿಲುಕಿತು. ಸೆಮಿ ರೇಸ್‌ನಿಂದ ಹೊರಬೀಳುವ ಅಪಾಯಕ್ಕೂ ಸಿಲುಕಿತು. ಆದರೆ ಈ ಕಂಟಕದಿಂದ ಪಾರಾದದ್ದು ನ್ಯೂಜಿಲ್ಯಾಂಡ್‌ನ ಅದೃಷ್ಟಕ್ಕೆ ಸಾಕ್ಷಿ.
ಕಿವೀಸ್ ಅಪಾಯಕಾರಿಅನುಮಾನ ಬೇಡ, ನ್ಯೂಜಿ ಲ್ಯಾಂಡ್ ಅತ್ಯಂತ ಅಪಾಯಕಾರಿ ತಂಡ. ಆಲ್‌ರೌಂಡರ್‌ಗಳನ್ನು ಒಳಗೊಂಡ ಅವರ ಬ್ಯಾಟಿಂಗ್ ಸರದಿ ವೈವಿಧ್ಯಮಯ. ಕಾನ್ವೇ, ರಚಿನ್, ವಿಲಿಯಮ್ಸನ್, ಮಿಚೆಲ್, ಫಿಲಿಪ್ಸ್, ಚಾಪ್‌ಮನ್, ಲ್ಯಾಥಂ, ಸ್ಯಾಂಟ್ನರ್ ತನಕ ಬ್ಯಾಟಿಂಗ್ ಲೈನ್‌ಅಪ್ ವಿಸ್ತಾರವಾಗಿದೆ. ಬೌಲ್ಟ್, ಸೌಥಿ, ಫರ್ಗ್ಯುಸನ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ನ್ಯೂಜಿಲ್ಯಾಂಡ್ ಪಾಲಿನ ಧನಾತ್ಮಕ ಸಂಗತಿಯೆಂದರೆ, ಭಾರತದೆದುರಿನ ಮೂರೂ ಐಸಿಸಿ ನಾಕೌಟ್ ಪಂದ್ಯ ಗಳನ್ನು ಗೆದ್ದಿರುವುದು. 2000ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ವಿಶ್ವಕಪ್ ಸೆಮಿಫೈನಲ್ ಹಾಗೂ 2021ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ಭಾರತವನ್ನು ಪರಾ ಭವಗೊಳಿಸಿದೆ. ಈ ಬಾರಿ ತಿರುಗಿ ಬೀಳುವ ಸರದಿ ನಮ್ಮದಾಗಲಿ! ವಾಂಖೇಡೆಯಲ್ಲಿ ಭಾರತವನ್ನು ಸೋಲಿಸಿದೆ ನ್ಯೂಜಿಲ್ಯಾಂಡ್!
ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಭಾರತ-ನ್ಯೂಜಿ ಲ್ಯಾಂಡ್ ನಡುವೆ ಈವರೆಗೆ ಏರ್ಪ ಟ್ಟಿದ್ದು ಒಂದು ಏಕದಿನ ಪಂದ್ಯ ಮಾತ್ರ. ಇದು 2017ರ ಸರಣಿಯ ಮೊದಲ ಮುಖಾಮುಖೀ ಆಗಿತ್ತು. ನ್ಯೂಜಿ ಲ್ಯಾಂಡ್ ಇದನ್ನು 6 ವಿಕೆಟ್‌ಗಳಿಂದ ಗೆದ್ದು ಸರಣಿ ಮುನ್ನಡೆ ಸಾಧಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ವಿರಾಟ್ ಕೊಹ್ಲಿ ಅವರ ಅಮೋಘ ಶತಕ ಸಾಹಸ ದಿಂದ (121) 8 ವಿಕೆಟಿಗೆ 280 ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಟಾಮ್ ಲ್ಯಾಥಂ (ಅಜೇಯ 103) ಮತ್ತು ರಾಸ್ ಟೇಲರ್ (95) ಬ್ಯಾಟಿಂಗ್ ಪರಾಕ್ರಮದಿಂದ ಕಿವೀಸ್ 49 ಓವರ್‌ಗಳಲ್ಲಿ 4 ವಿಕೆಟಿಗೆ 284 ರನ್ ಬಾರಿಸಿತು. ಟ್ರೆಂಟ್ ಬೌಲ್ಟ್ 4, ಟಿಮ್ ಸೌಥಿ 3 ವಿಕೆಟ್ ಉಡಾಯಿಸಿದರು. ಇದನ್ನು ಹೊರತುಪಡಿಸಿ 2011ರ ವಿಶ್ವಕಪ್ ವೇಳೆ ವಾಂಖೇಡೆಯಲ್ಲಿ ನ್ಯೂಜಿಲ್ಯಾಂಡ್ 2 ಪಂದ್ಯಗಳನ್ನಾಡಿದೆ. ಒಂದನ್ನು ಗೆದ್ದಿದೆ, ಇನ್ನೊಂದನ್ನು ಸೋತಿದೆ. ಗೆಲುವು ದಾಖಲಾದದ್ದು ಕೆನಡಾ ವಿರುದ್ಧ. ಅಂತರ 97 ರನ್. “ಎ’ ವಿಭಾಗದ ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿ ಲ್ಯಾಂಡ್ 6ಕ್ಕೆ 358 ರನ್ ಪೇರಿಸಿದರೆ, ಕೆನಡಾ 9ಕ್ಕೆ 261 ರನ್ ಮಾಡಿ ಶರಣಾಯಿತು. ಬ್ರೆಂಡನ್ ಮೆಕಲಮ್ 101 ರನ್ ಬಾರಿಸಿ ಮಿಂಚಿದರು.
ಮುಂದೆ ಇದೇ ಅಂಗಳದಲ್ಲಿ ಶ್ರೀಲಂಕಾವನ್ನು ಎದುರಿಸಿದ ನ್ಯೂಜಿ ಲ್ಯಾಂಡ್ 112 ರನ್ನುಗಳ ಸೋಲಿಗೆ ತುತ್ತಾಯಿತು. ಲಂಕಾ 9ಕ್ಕೆ 265 ರನ್ ಮಾಡಿದರೆ, ಮುರಳೀಧರನ್ ದಾಳಿಗೆ (25ಕ್ಕೆ 4) ತತ್ತರಿಸಿದ ರಾಸ್ ಟೇಲರ್ ಪಡೆ 153ಕ್ಕೆ ಆಲೌಟ್ ಆಗಿತ್ತು. ಸಂಭಾವ್ಯ ತಂಡಗಳು
ಭಾರತ:
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ. ನ್ಯೂಜಿಲ್ಯಾಂಡ್:
ಡೇವನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಂ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗ್ಯುಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್. ಸೆಮಿಫೈನಲ್ ಅಂಪಾಯರ್ ಭಾರತ- ನ್ಯೂಜಿಲ್ಯಾಂಡ್
ಅಂಪಾಯರ್: ರಿಚರ್ಡ್
ಇಲ್ಲಿಂಗ್‌ವರ್ತ್, ರಾಡ್ ಟ್ಯುಕರ್
ಥರ್ಡ್ ಅಂಪಾಯರ್: ಜೋಯೆಲ್ ವಿಲ್ಸನ್
ಫೋರ್ತ್ ಅಂಪಾಯರ್: ಅಡ್ರಿಯನ್ ಹೋಲ್ಡ್‌ಸ್ಟಾಕ್
ಮ್ಯಾಚ್ ರೆಫ್ರಿ: ಆ್ಯಂಡಿ ಪೈಕ್ರಾಫ್ಟ್
ದ.ಆಫ್ರಿಕಾ-ಆಸ್ಟ್ರೇಲಿಯ
ಅಂಪಾಯರ್: ರಿಚರ್ಡ್
ಕೆಟಲ್‌ಬರೋ, ನಿತಿನ್ ಮೆನನ್
ಥರ್ಡ್ ಅಂಪಾಯರ್:
ಕ್ರಿಸ್ ಗಫಾನಿ
ಫೋರ್ತ್ ಅಂಪಾಯರ್: ಮೈಕಲ್ ಗಾಫ್
ಮ್ಯಾಚ್ ರೆಫ್ರಿ:
ಜಾವಗಲ್ ಶ್ರೀನಾಥ್ ಆರಂಭ: ಅ. 2.00
ವಿಶ್ವಕಪ್ ಮುಖಾಮುಖಿ
ಪಂದ್ಯ: 10
ಭಾರತ ಜಯ: 04
ನ್ಯೂಜಿಲ್ಯಾಂಡ್ ಜಯ: 05
ರದ್ದು: 01
ಲೀಗ್ ಫಲಿತಾಂಶ
ಭಾರತಕ್ಕೆ 4 ವಿಕೆಟ್ ಜಯ