Advertisement

ಹಳ್ಳಿಯಲ್ಲಿ  ಓದಿದವ ದಿಲ್ಲಿಯಲ್ಲಿ  ಮಿಂಚಿದವ

08:25 AM Aug 29, 2017 | Team Udayavani |

ಉಡುಪಿ: ಹಿರಿಯಡಕ ಬೊಮ್ಮರಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಿಕ್ಷಣ, ಹಿರಿಯಡಕ ಸರಕಾರಿ ಪ.ಪೂ.ಕಾಲೇಜಿನಲ್ಲಿ ಕನ್ನಡ ಮಾಧ್ಯಮದ ಪ್ರೌಢಶಿಕ್ಷಣ ಪಡೆದ ಹಿರಿಯಡಕ ರಾಜೇಶ್‌ಪ್ರಸಾದ್‌ ಈಗ “ಒಂದು ದೇಶ- ಒಂದು ತೆರಿಗೆ’ ನೀತಿಯ ಜಿಎಸ್‌ಟಿ ಕಮಿಷನರ್‌. 

Advertisement

1986-89ರಲ್ಲಿ ಎಂಜಿಎಂ ಕಾಲೇಜಿನಲ್ಲಿ ಬಿಕಾಂ ಪದವೀಧರರಾದ ರಾಜೇಶ್‌ಪ್ರಸಾದ್‌ ಅವರು ದಿಲ್ಲಿ ವಿ.ವಿ.ಯಲ್ಲಿ ಎಂಬಿಎ, ಪಾಂಡಿಚೇರಿ ವಿ.ವಿ.ಯಲ್ಲಿ ಪಬ್ಲಿಕ್‌ ಮೆನೇಜೆ¾ಂಟ್‌ನಲ್ಲಿ ಸ್ನಾತಕೋತ್ತರ ಪದವಿ, ದಿಲ್ಲಿ ವಿ.ವಿ.ಯಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಆರಂಭದಲ್ಲಿ ರೈಲ್ವೆ, ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡದಲ್ಲಿ ಸೇವೆ ಸಲ್ಲಿಸಿದ ರಾಜೇಶ್‌ ಸತತ ಪ್ರಯತ್ನದಿಂದ 1995ರಲ್ಲಿ ಐಎಎಸ್‌ ಉತ್ತೀರ್ಣರಾದರು. ದಕ್ಷಿಣ ಗೋವ, ಅರುಣಾಚಲಪ್ರದೇಶ, ಪೂರ್ವ ದಿಲ್ಲಿ, ದಕ್ಷಿಣ ದಿಲ್ಲಿಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಜೇಶ್‌ ಬಳಿಕ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಯಾಗಿಯೂ ಇದ್ದರು. ಈಗ ಇಡೀ ದೇಶದ ಗಮನ ಸೆಳೆದಿರುವ ಜಿಎಸ್‌ಟಿ ಆಯುಕ್ತರು. ಜಿಎಸ್‌ಟಿ ಆಯುಕ್ತರಾಗಿ ದೇಶದ ಪ್ರಧಾನಿಯವರನ್ನೂ ಹತ್ತಿರದಿಂದ ಚರ್ಚಿಸಿದವರು.

ಜಿಎಸ್‌ಟಿ ಆಯುಕ್ತರಾಗಿ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳು ಸದಸ್ಯರಾಗಿರುವ ಸಮಿತಿಯಲ್ಲಿದ್ದ ವಿಶಾಲ ಅನುಭವ ಅವರದು. ಹಳ್ಳಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬ ಪ್ರಧಾನಮಂತ್ರಿಯವರೆಗೂ ಸಂಪರ್ಕ ಸಾಧಿಸಿದ್ದರೂ… ಅವರ ನಡೆನುಡಿ ಕೆಳಗಿನಂತಿದೆ… 

ಹುದ್ದೆ  ಬೇಡ, ನಡತೆ ನೋಡಿ
ಅವರನ್ನು ವೇದಿಕೆಯಲ್ಲಿ ಹೊಗಳಿದರೆ “ಮನುಷ್ಯನನ್ನು ಹುದ್ದೆಯಿಂದ ಅಳೆಯಬೇಡಿ, ನಡತೆಯಿಂದ ಅಳೆಯಿರಿ. ಹುದ್ದೆ ಬರುತ್ತದೆ ಹೋಗುತ್ತದೆ, ನಡತೆ ನಮ್ಮೊಂದಿಗೇ ಇರುತ್ತದೆ’ ಎನ್ನುತ್ತಾರೆ. ಆರಂಭಿಕ ಹಂತದಲ್ಲಿ ಕಲಿಸಿದ ಗುರು ಮಂಜುನಾಥ ಶೇರಿಗಾರರಿಂದ ಹಿಡಿದು ಪದವಿಯಲ್ಲಿ ಕಲಿಸಿದ ಪ್ರೊ| ಎಂ.ಎಲ್‌.ಸಾಮಗ, ಶ್ರೀನಿವಾಸ ಉಪಾಧ್ಯಾಯ, ದಯಾನಂದ ಶೆಟ್ಟಿಯವರಂತಹ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. 

ಅವರೇ ಬುದ್ಧಿವಂತರು!
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಲಾ ಮತ್ತು ವಾಣಿಜ್ಯ ಸಂಘ, ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಸೋಮವಾರ “ಏಕರಾಷ್ಟ್ರ-ಏಕ ತೆರಿಗೆ’ ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿದ ರಾಜೇಶ್‌ಪ್ರಸಾದ್‌, ಜಗತ್ತಿನ 160 ದೇಶಗಳು ಜಿಎಸ್‌ಟಿಯನ್ನು ಜಾರಿಗೆ ತಂದಿವೆ. 1956ರಲ್ಲಿ ಫ್ರಾನ್ಸ್‌ ಜಾರಿಗೆ ತಂದಿತ್ತು. ಇವರೇ ಬುದ್ಧಿವಂತರು. ನಾವು ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಜಾರಿಗೆ ತಂದೆವು ಎಂದರು. 

Advertisement

ವೇತನ ಪಡೆಯುವಾಗ ಕಡಿತವಾಗುವ ತೆರಿಗೆ ನೇರ ತೆರಿಗೆಯಾದರೆ, ವಸ್ತುಗಳ ಮಾರಾಟದಲ್ಲಿ ವಿವಿಧ ಹಂತಗಳಲ್ಲಿದ್ದುದು ಪರೋಕ್ಷ ತೆರಿಗೆ. ಇವು ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿ ಇದ್ದರೆ ಈಗ ಏಕರೂಪಿಯಾಗಿ ಮಾಡಲಾಗಿದೆ. ಇದರ ಮುಖ್ಯ ಸಂದೇಶವೇ “ಡೆಸ್ಟಿನೇಶನ್‌ ಬೇಸ್ಡ್ ಕನ್ಸಂಪ್ಷನ್‌’. ಕೊನೆಯ ಹಂತದಲ್ಲಿ ಗ್ರಾಹಕನಿಗೆ ವಸ್ತು ತಲುಪುವಾಗ ತೆರಿಗೆ ಜಾರಿಯಾಗುತ್ತದೆ. ಯಾವುದೇ ತಪಾಸಣೆ, ವಿವಿಧ ಬಗೆಯ ಅರ್ಜಿ ನಮೂನೆಗಳು ಇಲ್ಲ ಎಂದರು. 

ತೆರಿಗೆ ವಂಚನೆ ಅಸಾಧ್ಯ
ಪಾನ್‌ ನಂಬರ್‌ಗಳನ್ನು ಎಲ್ಲ ವ್ಯಾಪಾರ ವಹಿವಾಟುಗಳಿಗೆ, ವಾರ್ಷಿಕ ವಹಿವಾಟು ಸಲ್ಲಿಕೆಗೆ, ಬ್ಯಾಂಕಿಂಗ್‌ ವ್ಯವಸ್ಥೆಗೆ ಅಳವಡಿಸಲಾಗಿದೆ. ಹೀಗಾಗಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು ರಾಜೇಶ್‌ ಪ್ರಸಾದ್‌.
ನಿವೃತ್ತ ಪ್ರಾಂಶುಪಾಲ ಎಂ.ಎಲ್‌.ಸಾಮಗ, ನಿವೃತ್ತ ಪ್ರಾಧ್ಯಾ ಪಕರಾದ ದಯಾನಂದ ಶೆಟ್ಟಿ, ಶ್ರೀನಿವಾಸ ಉಪಾಧ್ಯಾಯ, ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ|ಸುರೇಶ ರಮಣ ಮಯ್ಯ ಉಪಸ್ಥಿತ ರಿದ್ದರು. 

ಪ್ರಾಂಶುಪಾಲೆ ಕುಸುಮಾ ಕಾಮತ್‌ ಅವರು ಸ್ವಾಗತಿಸಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪರಿಚಯಿಸಿದರು. ವಿದ್ಯಾರ್ಥಿನಿ ರಕ್ಷಾ ಕಾರ್ಯ ಕ್ರಮ ನಿರ್ವಹಿಸಿದರು. ಉಪನ್ಯಾಸಕ ರಾಮಚಂದ್ರ ಭಟ್‌ ವಂದಿಸಿದರು. 

ಬಗೆಬಗೆ ಪ್ರಾಣಿಗಳಿಗೆ ಬಗೆಬಗೆ ಕೌಶಲ
ಹಕ್ಕಿಗಳಿಗೆ ಹಾರಲು, ಮಂಗಗಳಿಗೆ ಮರದಿಂದ ಮರಕ್ಕೆ ಹಾರಲು, ಮೀನುಗಳಿಗೆ ನೀರೊಳಗೆ ಈಜಲು ಶಕ್ತಿ ಕೊಟ್ಟಿರುವಂತೆ ಮನುಷ್ಯರಿಗೆ ಚಿಂತನೆ ನಡೆ ಸುವ ಶಕ್ತಿಯನ್ನು ಪ್ರಕೃತಿ ಕೊಟ್ಟಿದೆ. ನಾವು ಸಕಾ ರಾತ್ಮಕವಾಗಿಯೂ ಚಿಂತನೆ ನಡೆಸ ಬಹುದು, ನಕಾ ರಾತ್ಮಕವಾಗಿಯೂ ಚಿಂತನೆ ನಡೆಸಬಹುದು. ಏನು ಯೋಚಿಸುತ್ತೇವೆಯೋ ಅದಕ್ಕೆ ತಕ್ಕು ದಾಗಿಯೇ ಫ‌ಲಿತಾಂಶ ಬರುತ್ತದೆ. ಗಾಂಧೀಜಿ ಕಲಿಯುವಾಗ ಸಾಮಾನ್ಯ ವಿದ್ಯಾರ್ಥಿ ಯಾಗಿದ್ದರು. ಕೇವಲ ಸಕಾರಾತ್ಮಕ ಚಿಂತನೆ, ನಿಸ್ವಾರ್ಥತೆಯಿಂದ ಮಹಾತ್ಮರಾದರು. ಇದೇ ರೀತಿ ಪ್ರತಿ ಯೊಬ್ಬರಲ್ಲಿಯೂ ಯಶಸ್ಸು ಸಾಧಿಸಲು ಬೇಕಾದ ಸಂಪನ್ಮೂಲವಿದೆ. ಜೀವನದಲ್ಲಿ ಸೋತಾಗ ಕೈಬಿಡ ಬಾರದು. ಸೋಲು ಬಲು ದೊಡ್ಡ ಅನುಭವವನ್ನು ಕೊಡುತ್ತದೆ. ಬಹಳ ಶಕ್ತಿ ಮೀರಿ ಪ್ರಯತ್ನಿಸಬೇಕು. ಯಶಸ್ಸಿಗೆ ಅಡ್ಡದಾರಿ ಇಲ್ಲ. 21ನೆಯ ವಯಸ್ಸಿನಿಂದ 52ನೆಯ ವಯಸ್ಸಿನ ವರೆಗೆ ವ್ಯಾಪಾರ, ಚುನಾವಣೆಗಳಲ್ಲಿ ಸೋತು ಸುಣ್ಣ ವಾಗಿದ್ದ ಅಬ್ರಹಾಂ ಲಿಂಕನ್‌ 52ರಲ್ಲಿ ಅಮೆರಿಕದ ಅಧ್ಯಕ್ಷರಾದರು. ಇದನ್ನು ಎಲ್ಲ ವಿದ್ಯಾರ್ಥಿಗಳೂ ತಿಳಿದುಕೊಂಡು ಜೀವನ ದಲ್ಲಿ ಯಶಸ್ಸು ಕಾಣಬೇಕು ಎಂದು ರಾಜೇಶ್‌ಪ್ರಸಾದ್‌ ಕರೆ ನೀಡುತ್ತಾರೆ. 

ರಾಜಿಯಲ್ಲಿ  ಜಿಎಸ್‌ಟಿ
ರಾಜ್ಯಗಳು ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಬಿಟ್ಟುಕೊಡಲು ತಯಾರಿರದ ಕಾರಣ ಸೌಹಾರ್ದ ನೀತಿಯಡಿ ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ, ಸಮನ್ವಯದ ಸಮಗ್ರ ಜಿಎಸ್‌ಟಿ 3 ರೀತಿಗಳನ್ನು ಅಳವಡಿಸಲಾಗಿದೆ. ಹಿಂದೆ ವಿವಿಧ ರೂಪಗಳಲ್ಲಿದ್ದ ತೆರಿಗೆಗಿಂತ ಹೆಚ್ಚಿಗೆ ಮಾಡಿಲ್ಲ. ಸರಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕಾದ ಕಾರಣ ತೆರಿಗೆ ಇಲ್ಲದೆ ಏನನ್ನೂ ಮಾಡುವಂತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next