ಬೆಂಗಳೂರು: ಐಎಎಸ್ ಪರೀಕ್ಷೆಯಲ್ಲಿ ಈ ಬಾರಿ 265ನೇ ರ್‍ಯಾಂಕ್ ಪಡೆದಿರುವ ಬೆಂಗಳೂರಿನ ಗೋವಿಂದರಾಜನಗರದ ಡಾ. ಗೋಪಾಲ್ ಕೃಷ್ಣ ಬಿ. ನಿರಂತರ ಓದು ಹಾಗೂ ಧೃಡ ನಿರ್ಧಾರ ತಮ್ಮ ಯಶಸ್ಸಿನ ಗುಟ್ಟು ಎಂದು ಹೇಳಿದರು.
“ಉದಯವಾಣಿ ‘ ಜತೆ ಮಾತನಾಡಿದ ಅವರು, ವೈದ್ಯನಾಗಿ ಗ್ರಾಮೀಣ ಜನರ ಸಂಕಷ್ಟ ಬಹಳ ಹತ್ತಿರದಿಂದ ನೋಡಿರುವ ನನಗೆ, ಜನರಿಗೆ ಬರುವ ದೈಹಿಕ ಕಾಯಿಲೆಗಳಿಗಿಂತ, ಮೂಲ ಸೌಕರ್ಯ ಕೊರತೆಗಳಿಂದ ಬರುವ ಆರೋಗ್ಯ ಸಮಸ್ಯೆಗಳೇ ಹೆಚ್ಚು. ಇದನ್ನು ನಿವಾರಿಸುವ ಹೆಬ್ಬಯಕೆಯಿಂದ ನೀತಿ-ನಿಯಮ ರೂಪಿಸುವ ಸ್ಥಾನದಲ್ಲಿರಬೇಕು ಎಂದು ಸಿವಿಲ್ ಸರ್ವೀಸ್ ಆಯ್ಕೆಮಾಡಿಕೊಂಡೆ ಎಂದು ತಿಳಿಸಿದರು.
ಗ್ರಾಮೀಣ ಭಾಗವೂ ಸೇರಿದಂತೆ ಜನರಿಗೆ ಅಗತ್ಯವಾದ ಮೂಲಸೌಕರ್ಯಗಳು, ಯೋಜನೆಗಳು ನೇರವಾಗಿ ತಲುಪಿಸುವಲ್ಲಿ ಆಡಳಿತಾಧಿಕಾರಿಗಳ ಕೈಯಲ್ಲಿಯೇ ಇರುತ್ತದೆ. ಹೀಗಾಗಿ ಸಾರ್ವಜನಿಕ ಸೇವಾ ಮನೋಭಾವವೇ ಐಎಎಸ್ ಮಾಡಲು ಮೂಲ ಪ್ರೇರಣೆ ಎಂದರು. ಪದವಿ ಮುಗಿದ ಬಳಿಕ ಐಎಎಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಕಠಿಣ ಪರಿಶ್ರಮ,ತಾಳ್ಮೆ, ನಿರಂತರ, ಓದುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ 2013ರಲ್ಲಿ ಎಂಬಿಬಿಎಸ್ ಪೂರ್ಣಗೊಂಡ ಬಳಿಕ ವೈದ್ಯಾಧಿಕಾರಿಯಾಗಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ವಗಳಗೆರೆ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ಕೆ.ಆರ್ ಪುರಂ ಆವಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದೆ.
ಬಳಿಕ ಇಎಸ್‌ಐ ಆಸ್ಪತ್ರೆಯಲ್ಲಿ ಸೇವೆ. ಇದೀಗ ಶಿಮ್ಲಾದಲ್ಲಿರುವ ಇಂಡಿಯನ್ ಅಡಿಟ್ ಅಂಡ್ ಅಸೆಸ್‌ಮೆಂಟ್‌ನಲ್ಲಿ (ಐಎಎಎಸ್)ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಐಎಎಸ್ ಪರೀಕ್ಷೆ ಪಾಸಾಗುವ ಗುರಿಯಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೆ. ವೃತ್ತಿ ಹಾಗೂ ಐಎಎಸ್ ಪರೀಕ್ಷೆ ತಯಾರಿಗೆ ಸಮಾನ ಆದ್ಯತೆ ನೀಡಿ ರ್‍ಯಾಂಕ್ ಪಡೆದಿದ್ದಕ್ಕೆ ಹೆಮ್ಮೆಯಿದೆ ಎಂದು ಡಾ. ಗೋಪಾಲ್ ಕೃಷ್ಣ ಹೇಳಿದರು.
ಟ್ಯೂಷನ್‌ಗೆ ಹೋಗದೆ ಶುಭ ಮಂಗಳ ಸಾಧನೆ
ಬೆಂಗಳೂರು: ಎರಡನೇ ಪ್ರಯತ್ನದಲ್ಲಿಯೇ 147ನೇ ರ್‍ಯಾಂಕ್ ಪಡೆದಿರುವ ಡಾ.ಟಿ .ಶುಭಮಂಗಳ, ಸಾರ್ವಜನಿಕ ಸೇವೆಯ ಬಯಕೆಯಿಂದ ಐಎಎಸ್ ಗುರಿ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸೂತಿ ತಜ್ಞೆಯಾಗಿ ಕೆಲಸ ಮಾಡುತ್ತಿದ್ದು ಅದು ನನ್ನ ನೆಚ್ಚಿನ ವೃತ್ತಿ. ಆದರೆ, ಸಾಮಾಜಿಕ ಬದಲಾವಣೆ, ಸಾರ್ವಜನಿಕ ಸೇವೆಯ ದೃಢ ನಿರ್ಧಾರದಿಂದ ಐಎಎಸ್ ಆಯ್ಕೆ ಮಾಡಿಕೊಂಡೆ.
ಪರೀಕ್ಷೆ ತಯಾರಿಗೆ ಎಲ್ಲಿಯೂ ಕೋಚಿಂಗ್‌ಗೆ ಹೋಗಿಲ್ಲ. ಪತಿ ಡಾ.ಟಿ.ವೆಂಕಟೇಶ್ ಅವರು ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಅವರೇ ನನಗೆ ಐಎಎಸ್ ಬರೆಯಲು ಮಾರ್ಗದರ್ಶಕರು. ನಿರಂತರ ಓದಿನಿಂದ ಯಶಸ್ಸು ದಕ್ಕಿದೆ. ಕರ್ನಾಟಕ ಕೇಡರ್‌ನಲ್ಲಿಯೇ ಐಎಎಸ್ ಹುದ್ದೆ ದೊರೆಯುವ ನಿರೀಕ್ಷೆಯಿದೆ ಎಂದರು.