ರಾಯಚೂರು: ಕೋವಿಡ್ ವೈರಸ್ ಭೀತಿಯಿಂದ ತಮ್ಮ ಊರುಗಳಿಗೆ ಬಂದಿದ್ದ ಕಾರ್ಮಿಕರು ಈಗ ಮಹಾ ನಗರಗಳತ್ತ ಮರುವಲಸೆ ಶುರು ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಹೋಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ರಾಯಚೂರು ಜಿಲ್ಲೆಯೊಂದರಿಂದಲೇ ಕಳೆದ 20 ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಮಿಕರು ಮರಳಿ ಬೆಂಗಳೂರಿಗೆ ಹೋಗಿದ್ದಾರೆ. ಮೇ 20ರಿಂದ ಈವರೆಗೆ 474 ಬಸ್‌ಗಳು ಬೆಂಗಳೂರಿಗೆ ಹೋಗಿದ್ದು, ಜೂ. 8ರಂದು 40 ಬಸ್‌ಗಳಲ್ಲಿ ಕಾರ್ಮಿಕರು ಹೋಗಿದ್ದಾರೆ. ರಾಯಚೂರು ಮಾತ್ರವಲ್ಲದೇ ಯಾದಗಿರಿ, ಕಲಬುರಗಿ, ಕೊಪ್ಪಳ, ಬಳ್ಳಾರಿಯಿಂದಲೂ ಜನ ಬೆಂಗಳೂರಿಗೆ ಹೋಗುತ್ತಿದ್ದಾರೆ.
ಮಾ.22ರಿಂದ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಿತ್ತು. ಆರಂಭದಲ್ಲಿ ವಲಸೆಗಾರರು ಮರಳಿ ತಮ್ಮ ಊರಿಗೆ ಬರಲು ಮೀನಮೇಷ ಎಣಿಸಿದರು. ಆದರೆ, ಲಾಕ್‌ಡೌನ್ ಮತ್ತಷ್ಟು ವಿಸ್ತರಿಸುವ ಮುನ್ಸೂಚನೆ ಸಿಗುತ್ತಿದ್ದಂತೆ ರಾಜಧಾನಿ ತೊರೆಯಲು ಶುರು ಮಾಡಿದರು. ಸಾರಿಗೆ ಸೌಲಭ್ಯ ಇಲ್ಲದಿದ್ದರೂ ಕೆಲವರು ಬೈಕ್‌ಗಳಲ್ಲಿ ಬಂದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲೇ ಊರು ಸೇರಿಕೊಂಡಿದ್ದರು. ಆದರೆ, ಬೆಂಗಳೂರಿನಲ್ಲಿ ಬಿಡುವಿಲ್ಲದೇ ದುಡಿಯುತ್ತಿದ್ದ ಜನರಿಗೆ ಇಲ್ಲಿ ಕೆಲಸವೇ ಇಲ್ಲದಾಗಿದ್ದು, ಅನ್‌ಲಾಕ್ ಆಗುವುದನ್ನೇ ಕಾದು ಕುಳಿತಿದ್ದರು.
ಬೆಂಗಳೂರಿಂದ ಬುಲಾವ್: ರಾಜಧಾನಿಯ ಕಾಂಕ್ರಿಟ್ ಕಾಡಿನ ನಿರ್ಮಾಣಕ್ಕೆ ಈ ಭಾಗದ ಕೂಲಿ ಕಾರ್ಮಿಕರೇ ಬೇಕು. ಹೀಗಾಗಿ ಅಲ್ಲಿನ ಬ್ರೋಕರ್‌ಗಳು ಕರೆ ಮಾಡಿ ಕೆಲಸ ಶುರುವಾಗಿದೆ ಬನ್ನಿ ಎಂದು ಬುಲಾವ್ ನೀಡುತ್ತಿದ್ದಾರೆ. ದಿನಕ್ಕೆ 600-800 ರೂ. ಕೂಲಿ ಸಿಗುತ್ತದೆ. ಮಹಿಳೆಯರಿಗೂ 400- 500 ರೂ. ಸಿಗುತ್ತದೆ. ಆದರೆ, ಇಲ್ಲಿ ನಿರೀಕ್ಷೆಯಷ್ಟು ಕೂಲಿ ಸಿಗುವುದಿಲ್ಲ. ಉದ್ಯೋಗ ಖಾತ್ರಿ ಕೆಲಸ ನೀಡುವ ಭರವಸೆ ನೀಡಿದ್ದರೂ 275 ರೂ. ಮಾತ್ರ ಕೂಲಿ ಸಿಗುತ್ತದೆ. ಅಲ್ಲದೇ, ಕೂಲಿ ಹಣ ಕೈ ಸೇರಲು 15 ದಿನ ಕಾಯಬೇಕು. ಎಲ್ಲರಿಗೂ ಜಾಬ್‌ಕಾರ್ಡ್ ಇಲ್ಲ ಎನ್ನುವಂತ ಕಾರಣ ಹೇಳುತ್ತಾರೆ ಕಾರ್ಮಿಕರು.
ಉಳಿದವರ ಸಿದ್ಧತೆ: ಲಾಕ್‌ಡೌನ್ ಜಾರಿಯಾದ ಕೂಡಲೇ ಜಿಲ್ಲೆಗೆ 60 ಸಾವಿರಕ್ಕೂ ಅಧಿಕ ಜನ ವಲಸೆ ಕಾರ್ಮಿಕರು ಮರಳಿ ಬಂದಿದ್ದರು. ಅವರೆಲ್ಲ ಬೆಂಗಳೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗಗಳಿಗೆ ದುಡಿಯಲು ಹೋದವರಾಗಿದ್ದಾರೆ. ಕೆಲವರು ಅಲ್ಲಿಯೇ ನೆಲೆ ನಿಂತಿದ್ದರೆ, ಕೆಲವರು ತಾತ್ಕಾಲಿಕ ಗುಳೆ ಹೋಗುವ ಜನರಾಗಿದ್ದರು. ಈಗ ಮುಂಗಾರು ಶುರುವಾಗುತ್ತಿರುವ ಕಾರಣ ಅದರಲ್ಲಿ ಅರ್ಧ ಜನ ಗುಳೆ ಹೋಗುವ ಸಾಧ್ಯತೆ ಕಡಿಮೆ. ಆದರೆ, ಬಾಕಿ ಜನ ಮತ್ತೆ ಎಂದಿನಂತೆ ತಮ್ಮ ಮೂಲ ಕೆಲಸಗಳಿಗೆ ತೆರಳಲು ಸಿದ್ಧರಾಗುತ್ತಿದ್ದಾರೆ. ಬಹುತೇಕರು ಕಟ್ಟಡ ನಿರ್ಮಾಣ, ಕೈಗಾರಿಕೆ ಹಾಗೂ ಕಾಫಿ ಎಸ್ಟೇಟ್ ಸೇರಿದಂತೆ ವಿವಿಧೆಡೆ ಕೆಲಸ ಮಾಡುವ ಜನರಿದ್ದಾರೆ.
ನಷ್ಟದಲ್ಲೇ ಸೇವೆ
ಈಗ ಬೆಂಗಳೂರಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಕೋವಿಡ್-19 ನಿಯಮಗಳು ಪಾಲಿಸಬೇಕಿರುವ ಕಾರಣ ಒಂದು ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಒಂದು ಬಸ್‌ನಿಂದ 30 ಸಾವಿರ ರೂ. ಆದಾಯ ಬರುತ್ತಿತ್ತು. ಈಗ ಅರ್ಧ ಜನ ಮಾತ್ರ ಹೋಗುವುದರಿಂದ 16 ಸಾವಿರ ರೂ. ಬರುತ್ತಿದೆ. ಬಸ್‌ಗಳು ಬರುವಾಗ ಸಂಪೂರ್ಣ ಖಾಲಿ ಖಾಲಿ ಬರುತ್ತಿರುವುದರಿಂದ ನಿಗಮಕ್ಕೆ ನಷ್ಟವಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಬೆಂಗಳೂರಿಗೆ ಹೋಗಲು ಬಸ್‌ಗಳ ಬೇಡಿಕೆ ಹೆಚ್ಚಾಗಿದೆ. 20 ದಿನಗಳಲ್ಲಿ 470ಕ್ಕೂ ಅಧಿಕ ಬಸ್‌ಗಳನ್ನು ಓಡಿಸಲಾಗಿದೆ. ಅದರಲ್ಲೂ ಲಿಂಗಸುಗೂರು ಡಿಪೋದಿಂದ ಹೆಚ್ಚು ಜನ ಬೆಂಗಳೂರಿಗೆ ಹೋಗುತ್ತಿದ್ದಾರೆ. ನಾನ್ ಎಸಿ ಬಸ್‌ಗಳ ಸಂಚಾರಕ್ಕೂ ಅನುಮತಿ ಸಿಕ್ಕಿದ್ದು, ಶೀಘ್ರವೇ ಆರಂಭಿಸಲಾಗುವುದು.
● ರಾಜೇಂದ್ರ ಬಿ. ಜಾಧವ್, ವಿಭಾಗೀಯ ಸಾರಿಗೆ ಅಧಿಕಾರಿ, ರಾಯಚೂರು
ಸಿದ್ಧಯ್ಯಸ್ವಾಮಿ ಕುಕುನೂರು