Advertisement

ಮತದಾನಕ್ಕೆ ರೇಷನ್‌ ಕಾರ್ಡ್‌ ಕೂಡ ದಾಖಲೆಯಲ್ಲ

01:24 AM Apr 09, 2019 | Sriram |

ಮಂಗಳೂರು: ಭಾವ ಚಿತ್ರ ಇರುವ ಮತದಾರರ ಗುರುತು ಚೀಟಿ (ಎಪಿಕ್‌ ಕಾರ್ಡ್‌) ಇಲ್ಲದಿದ್ದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಚೀಟಿ (ವೋಟರ್‌ ಸ್ಲಿಪ್‌) ಹಾಗೂ ಪಡಿತರ ಚೀಟಿ (ರೇಷನ್‌ ಕಾರ್ಡ್‌) ಈ ಬಾರಿ ಅರ್ಹ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಎಪಿಕ್‌ ಕಾರ್ಡ್‌ ಇಲ್ಲದಿದ್ದಲ್ಲಿ ಪರಿಗಣಿಸಲಾಗುವ ನಿಗದಿತ ದಾಖಲೆಗಳಿಂದ ರೇಷನ್‌ ಕಾರ್ಡ್‌ ಹಾಗೂ ವೋಟರ್‌ ಸ್ಲಿಪ್‌ ಕೈಬಿಡಲಾಗಿದೆ. ಮತದಾರರು ಎಪಿಕ್‌ ಕಾರ್ಡ್‌ ಇಲ್ಲದಿದ್ದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದ 11 ಗುರುತು ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ನೀಡಿ ಮತ ಚಲಾಯಿಸಬಹುದು ಎಂದರು.

ಇವಿಎಂ ಸಿದ್ಧತೆ ಪ್ರಕ್ರಿಯೆ
ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದ ರ್‍ಯಾಂಡಮೈಷೇಶನ್‌ ಅನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ನಡೆಸಿ 8 ವಿಧಾನಸಭಾ ವ್ಯಾಪ್ತಿಗಳ ಒಟ್ಟು 1,861 ಮತಗಟ್ಟೆಗಳಿಗೆ 2,236 ಕಂಟ್ರೋಲ್‌ ಯೂನಿಟ್‌ (ಸಿಯು), 2,236 ಬ್ಯಾಲೆಟ್‌ ಯೂನಿಟ್‌ಗಳು ಹಾಗೂ 2,495 ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಮತಗಟ್ಟೆವಾರು ಹಂಚಿಕೆ ಪ್ರಕ್ರಿಯೆಯನ್ನು ಅಭ್ಯರ್ಥಿಗಳ ಸಮಕ್ಷಮ ಎ. 3ರಂದು ನಡೆಸಲಾಗಿದೆ. ಇವಿಎಂಗಳನ್ನು ಸಿದ್ಧಪಡಿಸುವ ಕಾರ್ಯ ಎ. 10ರಂದು 9.30ಕ್ಕೆ ನಡೆಯಲಿದೆ. ನಿಯೋಜಿತ ಬಿಇಎಲ್‌ನ ತಾಂತ್ರಿಕ ಸಿಬಂದಿ ಹಾಗೂ ಅಭ್ಯರ್ಥಿಗಳ ಸಮಕ್ಷಮದಲ್ಲಿ ಚಿಹ್ನೆಗಳ ಲೋಡಿಂಗ್‌ ಆಗಲಿದೆ ಎಂದರು.

ಸಹಾಯವಾಣಿಗೆ 2,598 ಕರೆ
ಉಚಿತ ಸಹಾಯವಾಣಿಗೆ 2,598 ಕರೆಗಳು ಬಂದಿದ್ದು, 2,595ನ್ನು ಇತ್ಯರ್ಥ ಮಾಡಲಾಗಿದೆ. ಸಿ-ವಿಜಿಲ್‌ಗೆ 32 ದೂರು ಬಂದಿದ್ದು 24ರ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

23 ಚೆಕ್‌ಪೋಸ್ಟ್‌
ಸ್ಥಾಪಿಸಲಾಗಿದೆ. ಪರವಾನಿಗೆ ಪಡೆದ 11,631 ಆಯುಧಗಳ ಪೈಕಿ 11,545ನ್ನು ಮಾಲಕರು ಠಾಣೆಗಳಲ್ಲಿ ಠೇವಣಿ ಇಟ್ಟಿದ್ದಾರೆ. 86 ಆಯುಧಗಳಿಗೆ ವಿನಾಯತಿ ನೀಡಲಾಗಿದೆ ಎಂದರು.

Advertisement

ಜಿ.ಪಂ.ಸಿಇಒ ಡಾ| ಆರ್‌. ಸೆಲ್ವಮಣಿ, ಆಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಉಪಸ್ಥಿತರಿದ್ದರು.

ಪ್ರಥಮ ಬಾರಿಗೆ ಅಭ್ಯರ್ಥಿಗಳ ಭಾವಚಿತ್ರ
ಚುನಾವಣೆಯಲ್ಲಿ ಪ್ರಥಮ ಬಾರಿಗೆ ಇವಿಎಂ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಅಳವಡಿಸಲಾಗುತ್ತಿದೆ. ಒಂದೇ ಹೆಸರಿನ ಅನೇಕ ಅಭ್ಯರ್ಥಿಗಳು ಇದ್ದರೂ ಮತದಾರ ಗೊಂದಲಕ್ಕೀಡಾಗುವ ಸಾಧ್ಯತೆ ಇಲ್ಲ.

93.92 ಲಕ್ಷ ರೂ. ಮೌಲ್ಯದ ಮದ್ಯ ವಶ
ದ.ಕ. ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಗೆ ಬಂದ ಬಳಿಕ 93,92,437 ರೂ. ಮೌಲ್ಯದ 84,181,02 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. 3 ಬೈಕ್‌, 3 ಲಾರಿ, 3 ಕಾರು, 1 ಟ್ರಕ್‌, 1 ಟ್ಯಾಂಕರ್‌ ವಶವಾಗಿದ್ದು, ಮೌಲ್ಯ 1.07 ಕೋ.ರೂ. ಆಗಿದೆ. ತಪಾಸಣೆ ವೇಳೆ ವಶವಾಗಿದ್ದ 28,10,500 ರೂ. ನಗದನ್ನು ದಾಖಲಾತಿ ಪರಿಶೀಲಿಸಿ ಮರಳಿಸಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next