Advertisement

ಅತ್ಯಾಚಾರಿಗಳ ಮತದಾನದ ಹಕ್ಕು ಖಾಯಂ ನಿಷೇಧ

06:10 AM Mar 24, 2018 | Team Udayavani |

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು “ಸಮಗ್ರ ರಾಷ್ಟ್ರೀಯ ನೀತಿ’ ರೂಪಿಸುವುದರ ಜೊತೆಗೆ ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವ ಅಪರಾಧಿಗಳ “ಮತದಾನದ ಹಕ್ಕನ್ನು’ ಶಾಶ್ವತವಾಗಿ ಕಿತ್ತುಹಾಕಲು “ಜನತಾ ಪ್ರಾತಿನಿಧ್ಯ ಕಾಯ್ದೆ-1951’ಕ್ಕೆ ಸೂಕ್ತ ತಿದ್ದುಪಡಿ ತರಬೇಕು ಎಂದು ವಿ.ಎಸ್‌. ಉಗ್ರಪ್ಪ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

Advertisement

ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ “ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ,ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯು’ ವಿಧಾನಸೌಧದಲ್ಲಿ ಶುಕ್ರವಾರ ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತು. 11 ಸಂಪುಟಗಳ 6 ಸಾವಿರ ಪುಟಗಳ ಈ ವರದಿ 135 ಪ್ರಮುಖ ಶಿಫಾರಸುಗಳನ್ನೊಳಗೊಂಡಿದೆ.

ಪ್ರಮುಖ ಶಿಫಾರಸುಗಳು
– ಶಿಕ್ಷೆಗೊಳಪಡುವ ವ್ಯಕ್ತಿಗಳ ಹೆಸರಲ್ಲಿ ಇರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಸರ್ಕಾರದಿಂದ ಸಿಗುವ ಎಲ್ಲ  ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.
– ಆರೋಪಿಗಳ ವಿರುದ್ಧ ವಿಚಾರಣೆ ನಡೆಯತ್ತಿದ್ದರೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರ ಮತದಾನದ ಹಕ್ಕನ್ನು ಅಮಾನತ್ತಿನಲ್ಲಿಡಬೇಕು, ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಳ್ಳಬೇಕು.
– ಅಂತರ್‌ಜಾತಿ ವಿವಾಹಗಳು ಮಾರ್ಯಾದಾ ಹತ್ಯೆಗಳಿಗೆ ಕಾರಣವಾಗುತ್ತಿದ್ದು, ವಯಸ್ಕರ ಪ್ರೇಮ ವಿವಾಹಗಳನ್ನು ವಿರೋಧಿಸುವುದು “ಶಿಕ್ಷಾರ್ಹ’.
– “ಗುಜ್ಜಾರ್‌ ಮದುವೆ’ಗಳಿಗೆ ಕಡಿವಾಣ ಹಾಕಬೇಕು.
– ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ವಿಚಾರಣೆಗಾಗಿ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಬೇಕು.
– ಪ್ರೌಢಶಾಲಾ ಮತ್ತು ಕಾಲೇಜು ಪಠ್ಯದಲ್ಲಿ ದೇಹಶಾಸOಉ ಶಿಕ್ಷಣ (ಲೈಂಗಿಕ ಶಿಕ್ಷಣ) ಅಳವಡಿಸಬೇಕು.
– ನಾಪತ್ತೆಯಾದ ಹೆಣ್ಣು ಮಕ್ಕಳ ಪತ್ತೆಗೆ ವಿಶೇಷ ಪೊಲೀಸ್‌ ದಳ ನೇಮಿಸಬೇಕು.
– ಅತ್ಯಾಚಾರ ಪ್ರಕರಣಗಳಲ್ಲಿ “ಸಾಕ್ಷಿದಾರರ ರಕ್ಷಣೆ ಕಾಯ್ದೆ’ ಜಾರಿಗೆ ತರಬೇಕು.
– ಗ್ರಾ.ಪಂ.ಹಂತದಲ್ಲಿ ಪ್ರತಿ ವರ್ಷ ಮಹಿಳೆಯರ ಮತ್ತು ಮಕ್ಕಳ ವಿಶೇಷ ಸಮೀಕ್ಷೆ ನಡೆಸಬೇಕು.
– ಮನೆಗೆಲಸ ಕಾರ್ಮಿಕರು, ಮದುವೆ ನೋಂದಣಿ ಕಡ್ಡಾಯ ಪಡಿಸಬೇಕು.
– ಸಿನಿಮಾಗಳಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ತೋರಿಸುವುದನ್ನು ನಿಷೇಧಿಸಬೇಕು

ಉಗ್ರಪ್ಪ ನೇತೃತ್ವದ ಸಮಿತಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಅಂತಿಮ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಮಹಿಳೆಯರು ಮತ್ತು ಮಕ್ಕಳ ಹಕ್ಕು, ಘನತೆ ರಕ್ಷಣೆಯ ದೃಷ್ಟಿಯಿಂದ  ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಶಿಫಾರಸುಗಳ ಅನುಷ್ಠಾನಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’
– ಮುಖ್ಯಮಂತ್ರಿ ಸಿದ್ದರಾಮಯ್ಯ.

“ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಸಮಿತಿಗೆ ನೀಡಲಾಗಿದ್ದ ಅಧಿಕಾರ ವ್ಯಾಪ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ಅತ್ಯಂತ ಅನುಸರಣಾಯೋಗ್ಯ ವರದಿ ಕೊಟ್ಟಿದ್ದೇನೆ. ಸಾಧ್ಯವಾಗುವ ಎಲ್ಲ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’.
– ವಿ.ಎಸ್‌. ಉಗ್ರಪ್ಪ, ಸಮಿತಿ ಅಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next