Advertisement

Israel-Palestine: ವಿಶ್ವ ರಾಷ್ಟ್ರಗಳ ಬಿರುಸಿನ ಕಾರ್ಯಾಚರಣೆ

12:11 AM Oct 13, 2023 | Team Udayavani |

ಯುದ್ಧಗ್ರಸ್ತ ಇಸ್ರೇಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಪಾರುಮಾಡಲು ವಿಶ್ವದ ವಿವಿಧ ದೇಶಗಳು ರಕ್ಷಣ ಕಾರ್ಯಾಚರಣೆಯನ್ನು ಕೈಗೊಂಡಿವೆ. ತಮ್ಮವರನ್ನು ಸ್ವದೇಶಕ್ಕೆ ವಾಪಸು ಕರೆತರಲು ವಿಶೇಷ ವ್ಯವಸ್ಥೆಗಳನ್ನು ಮಾಡಿವೆ. ವಿವಿಧ ದೇಶಗಳು ಕೈಗೊಂಡಿರುವ ರಕ್ಷಣ ಕಾರ್ಯಾಚರಣೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಆಸ್ಟ್ರೇಲಿಯಾವು ತನ್ನ ದೇಶವಾಸಿಗಳನ್ನು ಕರೆತರಲು ಎರಡು ವಿಶೇಷ ವಿಮಾನಗಳ ವ್ಯವಸ್ಥೆಯನ್ನು ಮಾಡಿದೆ. ಅ.13 ಹಾಗೂ ಅ.15ರಂದು ಎರಡು ಬ್ಯಾಚ್‌ಗಳಲ್ಲಿ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಅಲ್ಲಿನ ಸರಕಾರ ಕ್ರಮ ಕೈಗೊಂಡಿದೆ.

ಆಸ್ಟ್ರಿಯದ ಸೇನಾ ಸಿಬಂದಿ, ಯುದ್ಧಗ್ರಸ್ತ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿರುವ ಆಸ್ಟ್ರಿಯನ್‌ ನಾಗರಿಕರನ್ನು ಸಂಪರ್ಕಿಸಿ, ಅವರ ರಕ್ಷಣೆಯ ಕಾರ್ಯದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ. 60 ಪ್ರಯಾಣಿಕರನ್ನು ಹೊರಬಲ್ಲ ಸಾಮರ್ಥ್ಯವಿರುವ ವಿಮಾನವು ಆಸ್ಟ್ರಿಯಾದ ಹೋಶಿಂಗ್‌ ಏರ್‌ಬೇಸ್‌ನಿಂದ ಪ್ರಯಾಣ ಆರಂಭಿಸಿ ಇಸ್ರೇಲ್‌ ತಲುಪಲಿದೆ.

ಅ.10ರಂದೇ ಬ್ರೆಜಿಲ್‌ನ ರಕ್ಷಣ ಕಾರ್ಯಚರಣೆಯ ಮೊದಲ ವಿಮಾನವು ಇಸ್ರೇಲ್‌ ತಲುಪಿದ್ದು 211 ಪ್ರಯಾಣಿಕರನ್ನು ಸುರಕ್ಷಿತವಾಗಿ ಬ್ರೆಜಿಲ್‌ಗೆ ಕರೆದುಕೊಂಡು ಬಂದಿದೆ. ಇನ್ನು ಸಾವಿರಾರು ಮಂದಿ ಬ್ರೆಜಿಲ್‌ ಪ್ರಜೆಗಳು ಇಸ್ರೇಲ್‌ನಲ್ಲಿದ್ದು, ಸುಮಾರು 2,000 ಮಂದಿ ತವರಿಗೆ ಹಿಂದಿರುಗಲು ಸೂಕ್ತ ವ್ಯವಸ್ಥೆ ಮಾಡುವಂತೆ ಬ್ರೆಜಿಲ್‌ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಇಸ್ರೇಲ್‌ನಲ್ಲಿರುವ ಸಾವಿರಕ್ಕೂ ಅಧಿಕ ಕೆನಡ ಪ್ರಜೆಗಳು ಸ್ವದೇಶಕ್ಕೆ ಹಿಂದಿರುಗಲು ಇಚ್ಛಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾ ಸರಕಾರ ತನ್ನ ನಾಗರಿಕರನ್ನು ವಾಪಸು ಕರೆಸಿ ಕೊಳ್ಳಲು ವಿಶೇಷ ರಕ್ಷಣ ವಿಮಾನಗಳ ವ್ಯವಸ್ಥೆಯನ್ನು ಮಾಡಿದೆ.

Advertisement

ಪ್ಯಾಲೆಸ್ತೀನ್‌-ಇಸ್ರೇಲ್‌ ಯುದ್ಧದ ಸಂದರ್ಭದಲ್ಲಿ ಥೈಲ್ಯಾಂಡ್‌ನ‌ ಕೆಲವು ನಾಗರಿಕರಿಗೆ ಗಾಯಗಳಾಗಿವೆ. ಇವರನ್ನೂ ಒಳಗೊಂಡಂತೆ ಥೈಲ್ಯಾಂಡ್‌ನ‌ ನಾಗರಿಕರ ಮೊದಲ ಬ್ಯಾಚ್‌ ಅ.12ರಂದು ಸ್ವದೇಶದಲ್ಲಿ ಬಂದಿಳಿದಿದೆ. ಇನ್ನುಳಿದವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಥೈಲ್ಯಾಂಡ್‌ ಸರಕಾರ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ.

ಯುದ್ಧಗ್ರಸ್ತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 192ಮಂದಿ ತನ್ನ ಪ್ರಜೆಗಳನ್ನು ದಕ್ಷಿಣ ಕೊರಿಯಾ ಸರಕಾರ ವಿಶೇಷ ವಿಮಾನದ ಮೂಲಕ ಕರೆಸಿಕೊಂಡಿದೆ.

ಅ.9ರಂದು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ 500ಕ್ಕೂ ಅಧಿಕ ರೊಮೇನಿಯಾ ನಾಗರಿಕರನ್ನು ಅಲ್ಲಿನ ಸರಕಾರ ಈಗಾಗಲೇ ಕರೆಸಿಕೊಂಡಿದ್ದು, ವಾರಾಂತ್ಯಕ್ಕೆ ಇನ್ನೂ 600 ನಾಗರಿಕರನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ತಿಳಿಸಿದೆ.

ಇಟಲಿ ಸರಕಾರವು ಯುದ್ಧಪೀಡಿತ ಪ್ರದೇಶಗಳಲ್ಲಿ ಅತಂತ್ರರಾಗಿರುವ ತನ್ನ ಪ್ರಜೆಗಳ ರಕ್ಷಣೆಗಾಗಿ 7-8 ರಕ್ಷಣ ವಿಮಾನಗಳ ವ್ಯವಸ್ಥೆಯನ್ನು ಮಾಡಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಇಟಲಿ ಪ್ರಜೆಗಳು ಇದ್ದು, ಒಟ್ಟಾರೆಯಾಗಿ ಇಸ್ರೇಲ್‌ನಲ್ಲಿ 18 ಸಾವಿರಕ್ಕೂ ಅಧಿಕ ನಾಗರಿಕರು ವಾಸಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next