Advertisement

ಕೈಗಾರಿಕೆಗಳ ಕ್ಷಿಪ್ರ ಪ್ರಗತಿಗೆ ಸಿಗದ “ಇಂಧನ’

11:26 AM Mar 10, 2017 | Team Udayavani |

ಬೆಂಗಳೂರು: “ಇನ್‌ವೆಸ್ಟ್‌ ಕರ್ನಾಟಕ’ ಹಾಗೂ “ಪ್ರವಾಸಿ ಭಾರತೀಯ ದಿವಸ್‌’ ಸಮಾವೇಶಗಳ ಮೂಲಕ ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ ಜಾಗತಿಕ ಮಟ್ಟದ ಹೂಡಿಕೆದಾರರು ಮೂಲ ಸೌಕರ್ಯ ಕೊರತೆ ಕಾರಣಕ್ಕೆ ನೆರೆಯ ರಾಜ್ಯಗಳತ್ತ ಗುಳೆ ಹೋಗುವತ್ತ ಚಿತ್ತ ಹರಿಸಿದ್ದಾರೆ. ಕೈಗಾರಿಕೆಗಳಿಗೆ ಅತ್ಯವಶ್ಯಕವಾಗಿ ಬೇಕಾದ ಇಂಧನ ಉತ್ಪಾದನೆಯಲ್ಲೂ ಸಹ ಸರ್ಕಾರ ನಿರೀಕ್ಷಿತ ಗುರಿ ತಲುಪದಿರುವುದರಿಂದ ತೀವ್ರ ವಿದ್ಯುತ್‌ ಅಭಾವದಿಂದ ಕೈಗಾರಿಕೆಗಳು ರಾಜ್ಯದಿಂದ ವಿಮುಖವಾಗುವ ಸ್ಥಿತಿ ನಿರ್ಮಾಣವಾಗಿದೆ.

Advertisement

2016-17 ನೇ ಸಾಲಿನ ರಾಜ್ಯ ಬಜೆಟ್‌ ನಲ್ಲಿ ವಾಣಿಜ್ಯ- ಕೈಗಾರಿಕೆ ಮತ್ತು ಇಂಧನ ಕ್ಷೇತ್ರದ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸಲು ಹಲವಾರು ಆಕರ್ಷಕ ಯೋಜನೆಗಳನ್ನು ಪ್ರಕಟಿಸುವಾಗ ತೋರಿದ ಆಸಕ್ತಿಯನ್ನು ಅನುದಾನ ಬಿಡುಗಡೆಗೆ ತೋರದಿರುವುದರಿಂದ ಹೊಸ ಕೈಗಾರಿಕೆಗಳು ಸ್ಥಾಪನೆಯಾಗದೆ ಕನ್ನಡಿಗರಿಗೆ ಉದ್ಯೋಗ ಸಿಕ್ಕಿಲ್ಲ. ವಿದ್ಯುತ್‌ ಉತ್ಪಾದನೆಯಾಗದೆ ಕೈಗಾರಿಕೆಗಳು ರಾಜ್ಯದಲ್ಲಿ ಬೆಳಕು ಕಂಡಿಲ್ಲ.

ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 2016-17 ಮಹತ್ತರ ವರ್ಷ ಎಂದರೆ ತಪ್ಪಾಗಲಾರದು.
ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಆಯೋಜಿಸಿದ “ಇನ್‌ವೆಸ್ಟ್‌ ಕರ್ನಾಟಕ’ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆಯಿತು. ಜತೆಗೆ ಮೊಟ್ಟ ಮೊದಲ ಬಾರಿಗೆ “ಪ್ರವಾಸಿ ಭಾರತೀಯ ದಿವಸ್‌’ ಸಮಾವೇಶವನ್ನೂ ಬೆಂಗಳೂರಿನಲ್ಲಿ ಆಯೋಜಿಸುವ ಮೂಲಕ ಮತ್ತೂಂದು ಮೈಲಿಗಲ್ಲು ದಾಟಿತ್ತು. ಆದರೆ ಸರ್ಕಾರ ಉದ್ಯಮಿಗಳನ್ನು ಸೆಳೆಯಲು ತೋರಿದ ಉತ್ಸಾಹವನ್ನು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಲು ತೋರಲಿಲ್ಲ ಎಂಬ ಆರೋಪವಿದೆ.

ಶೇ.37ರಷ್ಟು ಅನುದಾನವಷ್ಟೇ ಬಿಡುಗಡೆ:
ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಿದ ಸರ್ಕಾರ ಪ್ರಸಕ್ತ ವರ್ಷ 1298 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ ಮೂರನೇ ತ್ತೈಮಾಸಿಕ ಅವಧಿ ಮುಕ್ತಾಯಗೊಂಡ ಡಿಸೆಂಬರ್‌ ಅಂತ್ಯಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಕೇವಲ 481 ಕೋಟಿ ರೂ. ಅಂದರೆ, ಘೋಷಿತ ಅನುದಾನದ ಶೇ.37ರಷ್ಟು ಹಣವಷ್ಟೇ
ಬಿಡುಗಡೆಯಾಗಿರುವುದರಿಂದ ಬಹುತೇಕ ಯೋಜನೆಗಳು ಇನ್ನೂ ಪ್ರಸ್ತಾವನೆ ಹಂತದಲ್ಲೇ ಇವೆ. ಹಾಲಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯವನ್ನು ಮೇಲ್ದರ್ಜೆಗೇರಿಸಲು 175 ಕೋಟಿ ರೂ. ಘೋಷಿಸಲಾಗಿತ್ತು. ಆದರೆ ಒಟ್ಟಾರೆ ಇಲಾಖೆಗೆ 481 ಕೋಟಿ ರೂ.ಬಿಡುಗಡೆಯಾಗಿರುವುದರಿಂದ ಕೈಗಾರಿಕಾ ವಲಯದ ಮೂಲ ಸೌಕರ್ಯ ಅಭಿವೃದ್ಧಿಗೂ ಅಗತ್ಯ ಅನುದಾನ ಸಿಗದಂತಾಗಿದೆ.

ಅನ್ಯ ರಾಜ್ಯಗಳತ್ತ ಉದ್ಯಮಿಗಳ ಗುಳೆ: ಪ್ರಸಕ್ತ ವರ್ಷವಿರಲಿ, ಕಳೆದ ಹಣಕಾಸು ವರ್ಷದಲ್ಲಿ ಒಡಂಬಡಿಕೆ ಮಾಡಿಕೊಂಡ ಹಲವು ಕೈಗಾರಿಕೆಗಳೂ ಈವರೆಗೆ ಆರಂಭವಾಗಿಲ್ಲ. ರಿಯಾಯ್ತಿ ದರದಲ್ಲಿ ಭೂಮಿ ಹಾಗೂ ಏಕ ಗವಾಕ್ಷಿ ವಿಧಾನದ ಮೂಲಕ ಅಗತ್ಯ ಅನುಮೋದನೆಗಳನು ನೀಡುತ್ತಿದ್ದರೂ ಉದ್ಯಮ ಆರಂಭಿಸಲು ಪೂರಕವಾದ ಸೌಲಭ್ಯವನ್ನು
ಸಕಾಲದಲ್ಲಿ ಒದಗಿಸುವಲ್ಲಿ ಸರ್ಕಾರ ವಿಫ‌ಲವಾಗಿದೆ. ಈ ನಡುವೆ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶ
ಹೂಡಿಕೆದಾರರನ್ನು ಸೆಳೆಯಲು ಪೈಪೋಟಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿರುವುದರಿಂದ ಟಿವಿಎಸ್‌ ಕಂಪನಿ ಸೇರಿದಂತೆ ಇತರೆ ಕೆಲ ಉದ್ಯಮಗಳು ಅನ್ಯರಾಜ್ಯಗಳತ್ತ ಗುಳೆ ಹೊರಟಿದ್ದು, ರಾಜ್ಯದಲ್ಲಿನ ಕೈಗಾರಿಕಾ ಪ್ರಗತಿಯ ಸ್ಥಿತಿಗತಿಯನ್ನು ತೋರಿಸುತ್ತದೆ.

Advertisement

ಗುರಿ ತಲುಪದ ವಿದ್ಯುತ್‌ ಉತ್ಪಾದನೆ: ಕೈಗಾರಿಕೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಮೂಲ ಸೌಕರ್ಯದ ಜತೆಗೆ ಇಂಧನವೂ ಅತ್ಯವಶ್ಯಕ. ಆದರೆ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಸ್ವಾವಲಂಬನೆ ಸಾಧಿಸಲಿದೆ ಎಂಬುದು ಕೇವಲ ಘೋಷಣೆಗಷ್ಟೇ ಸೀಮಿತವಾಗಿರುವುದು ಹಿಂದಿನ ಸರ್ಕಾರದಿಂದಲೂ ನಡೆದು ಬಂದಿದೆ. ಪ್ರಸಕ್ತ ವರ್ಷದಲ್ಲೂ ಘೋಷಿತ ಪ್ರಮಾಣದಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಗುರಿ ತಲುಪುವಲ್ಲಿ ವಿಫ‌ಲವಾಗಿದ್ದು, ಅಲ್ಪ ಪ್ರಮಾಣದಲ್ಲಷ್ಟೇ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಗೆ ಇಂಧನ ಇಲಾಖೆ ತೃಪ್ತಿಪಡಬೇಕಾಗಿದೆ.

ಪ್ರಸಕ್ತ ವರ್ಷದಲ್ಲಿ ಬಳ್ಳಾರಿಯ ಯರಮರಸ್‌ ಘಟಕ- 2ರಿಂದ ಮಾರ್ಚ್‌ನೊಳಗೆ 705 ಮೆಗಾವ್ಯಾಟ್‌ (ಗರಿಷ್ಠ ಸಾಮರ್ಥಯ 800 ಮೆಗಾವ್ಯಾಟ್‌) ವಿದ್ಯುತ್‌ ಉತ್ಪಾದನೆ ಆರಂಭವಾಗುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಆದರೆ ಘಟಕ-2ರ ವಿಚಾರವಿರಲಿ 2015-16ನೇ ಸಾಲಿನಲ್ಲಿ ಯರಮರಸ್‌ ಘಟಕ- 1ರಿಂದ 800 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ ಎಂಬ ಭರವಸೆಯೇ ಈವರೆಗೂ ಈಡೇರಿಲ್ಲ. ತುಮಕೂರಿನ ಪಾವಗಡ ತಾಲ್ಲೂಕಿನಲ್ಲಿ ಉದ್ದೇಶಿತ 2000 ಮೆಗಾವ್ಯಾಟ್‌ ಸಾಮರ್ಥಯದ ಸೋಲಾರ್‌ ಪಾರ್ಕ್‌ ನಿರ್ಮಾಣ ಯೋಜನೆಯಡಿ 2017ರ ಮಾರ್ಚ್‌ ಅಂತ್ಯಕ್ಕೆ 600 ಮೆಗಾವ್ಯಾಟ್‌ ಉತ್ಪಾದನೆ ಆರಂಭವಾಗುವ ಭರವಸೆಯೂ ಹುಸಿಯಾಗಿದೆ. ಮುಂದಿನ ಜೂನ್‌ಗೆ ಮೊದಲ ಹಂತದಲ್ಲಿ 600 ಮೆಗಾವ್ಯಾಟ್‌ ಉತ್ಪಾದನೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

60 ಹಿಂದುಳಿದ ತಾಲ್ಲೂಕುಗಳಲ್ಲಿ ತಲಾ 20 ಮೆಗಾವ್ಯಾಟ್‌ ಉತ್ಪಾದನೆ ಯೋಜನೆಯೂ ಇನ್ನೂ ಟೆಂಡರ್‌ ಹಂತಕ್ಕೆ ಸೀಮಿತವಾಗಿದೆ. ಪರ್ಯಾಯ ಇಂಧನ ಮೂಲಗಳ ಪೈಕಿ ಸೌರಶಕ್ತಿಯಿಂದ 800 ಮೆಗಾವ್ಯಾಟ್‌, ಪವನ ಶಕ್ತಿ ಮೂಲದಿಂದ 600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಿದ್ದು, 1000 ಮೆಗಾವ್ಯಾಟ್‌ನಷ್ಟು ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, ಭವಿಷ್ಯದಲ್ಲಿ ಬೆಂಗಳೂರಿಗೆ ಸುಸ್ಥಿರ ವಿದ್ಯುತ್‌ ಪೂರೈಕೆಗೆ ಸಹಕಾರಿಯಾಗುವ ನಿರೀಕ್ಷೆ ಮೂಡಿದೆ. 

*ಎಂ.ಕೀರ್ತಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next