Advertisement

ರಾಮದುರ್ಗ ಕಿಲ್ಲಾ ಮಹಾದ್ವಾರಕ್ಕೆ ಬೇಕಿದೆ ಕಾಯಕಲ್ಪ

11:08 AM Jul 24, 2019 | Suhan S |

ರಾಮದುರ್ಗ: ಪಟ್ಟಣದ ಸೌಂದರ್ಯ ಹೆಚ್ಚಿಸಿದ ಪುರಾತನ ಅರಮನೆ ಆವರಣ ತಲುಪುವ ಕಿಲ್ಲಾ ಕೋಟೆ ಮಹಾದ್ವಾರದ ಕಲ್ಲು ಬಂಡೆಗಳು ಒಂದೊಂದಾಗಿ ಉರುಳುತ್ತಿದ್ದು, ಕಲ್ಲುಗಳು ನಾಗರಿಕರ ಮನೆ ಮೇಲೆ ಬೀಳುವ ಆತಂಕದಲ್ಲಿ ಜನತೆ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರಾಚೀನ ಕಾಲದ ಕೋಟೆ-ಪಳಿಯುಳಿಕೆಗಳನ್ನು ರಕ್ಷಿಸಿ ಸಾರ್ವಜನಿಕರಿಗೆ ಆಗುವ ತೊಂದರೆ ಪರಿಹರಿಸುವಂತೆ ಸಾರ್ವಜನಿಕರು ಪುರಾತತ್ವ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ತಮಗೇನು ಸಂಬಂಧವಿಲ್ಲ ಎಂಬಂತೆ ಉದಾಸೀನತೆ ತೋರುತ್ತಿರುವುದಕ್ಕೆ ಅವನತಿಯತ್ತ ಸಾಗುತ್ತಿದೆ.

ಸಂಸ್ಥಾನಿಕರ ಕಾಲದಲ್ಲಿ ಪಟ್ಟಣದ ಆಡಳಿತ ಕೇಂದ್ರದ ಹೆಬ್ಟಾಗಿಲಾಗಿದ್ದ ಕೋಟೆ ಆವರಣ ತಲುಪಲು ಬೃಹದಾಕಾರದ ಕಲ್ಲಿನ ಮಹಾದ್ವಾರವನ್ನು ಆಗಿನ ಅರಸು ಮನೆತನದ ಆಳ್ವಿಕೆ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ಮಹಾದ್ವಾರ ಪುರಾತನ ಅರಮನೆಗೆ ನಾಗರಿಕರನ್ನು ಸ್ವಾಗತಿಸುವ ಆಕರ್ಷಣೀಯ ತಾಣವಾಗಿತ್ತು. ಆದರೆ ಇಂದು ಜೀರ್ಣೋದ್ಧಾರ ಕಾಣದೇ ಅಳಿವಿನಂಚಿನಲ್ಲಿದೆ.

ಉರುಳುತ್ತಿರುವ ಕಲ್ಲುಗಳು: ಮಹಾದ್ವಾರದ ಬೃಹದಾಕಾರದ ಕಲ್ಲುಗಳು ಎತ್ತರದಿಂದ ಉರುಳುತ್ತಿದ್ದು, ಪಕ್ಕದ ನಿವಾಸಿಗಳ ಮನೆ ಆವರಣ, ಮೇಲ್ಛಾವಣಿ ಮೇಲೆ ಬೀಳುತ್ತಿವೆ. ಅವರು ದೈನಂದಿನ ಕೆಲಸದಲ್ಲಿ ತಲ್ಲೀಣರಾದ ಸಂದರ್ಭದಲ್ಲಿ ನಾಗರಿಕರ ಮೇಲೆ ಕಲ್ಲುಗಳು ಉರುಳಿದರೆ ಹೇಗೆ ಎನ್ನುವ ಭೀತಿ ಎದುರಾಗಿದ್ದು, ತಮ್ಮ ನೋವಿನ ಕುರಿತು ನಿವಾಸಿಗಳು ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಪುರಾತನ ಅರಮನೆಯ ಕೆಲ ಗೋಡೆ, ಕೋಟೆಗಳು ಅಳಿವಿನಂಚಿನಲ್ಲಿದ್ದು, ಸಂಪೂರ್ಣ ಶಿಥಿಲೀಕರಣಗೊಳ್ಳುವ ಹಂತ ತಲುಪಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸದಿರುವುದು ಜನತೆಯ ಹಿಡಿಶಾಪಕ್ಕೆ ಕಾರಣವಾಗಿದೆ.

Advertisement

ಪ್ರಮುಖ ಸಂಚಾರಿ ಮಾರ್ಗ: ಕೋಟೆ ಆವರಣದಲ್ಲಿಯೇ ಶಾಲಾ ಕಟ್ಟಡಗಳು, ನ್ಯಾಯಾಲಯ ಸಂಕೀರ್ಣ, ಅರಸರ ಕಾಲದ ಪುರಾತನ ಅರಮನೆ, ಅರಮನೆ ಸುತ್ತಲು ವಾಸಿಸುವ ಸಾವಿರಾರು ನಿವಾಸಿಗಳ ಮನೆಗಳಿವೆ. ಪ್ರತಿದಿನ ಸಾವಿರಾರು ಜನತೆಗೆ ಈ ಮಹಾದ್ವಾರ ಮುಖ್ಯ ಸಂಚಾರಿ ಮಾರ್ಗವಾಗಿದ್ದು, ಅಭಿವೃದ್ಧಿ ಕಾಣದೆ ಸಂಚಾರಿಗಳು ವ್ಯಥೆ ಪಡುವಂತಾಗಿದೆ.

ಹಬ್ಬಗಳ ಆಚರಣೆ ತಾಣ: ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಸೇರಿದಂತೆ ಹಲವು ರಾಷ್ಟ್ರೀಯ ಹಬ್ಬಗಳ ಆಚರಣೆಯ ತಾಲೂಕು ಮಟ್ಟದ ಕಾರ್ಯಕ್ರಮಗಳು ಅರಮನೆ ಆವರಣದಲ್ಲಿಯೇ ನಡೆಯುತ್ತಿವೆ. ಕಾರ್ಯಕ್ರಮದ ಸಂದರ್ಭದಲ್ಲಿ ಎನ್‌ಸಿಸಿ, ಎನ್ನೆಸ್ಸೆಸ್‌, ಪೊಲೀಸ್‌ ಪರೇಡ್‌ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಬುದ್ಧಿಜೀವಿಗಳೂ ಈ ಮಹಾದ್ವಾರದ ಸ್ಥಿತಿಗೆ ರೋಸಿ ಹೋಗುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಸ್ಥಳೀಯರ ಸಮಸ್ಯೆಗೆ ಪರಿಹಾರ ಕೈಗೊಂಡು, ಪುರಾತನ ಕೋಟೆ ಮಹಾದ್ವಾರ ಜೀರ್ಣೋದ್ಧಾರಕ್ಕೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಸೆ.

 

•ಈರನಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next