Advertisement

ರಾಮದುರ್ಗ ಬಂದ್‌ ಸಂಪೂರ್ಣ ಯಶಸ್ವಿ

10:15 AM Jul 17, 2019 | Team Udayavani |

ರಾಮದುರ್ಗ: ಮಹದಾಯಿ-ಕಳಸಾ ಬಂಡೂರಿ ಜೋಡಣೆ ಹಾಗೂ ರೈತಪರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹದಾಯಿ ಹೋರಾಟ ಸಮನ್ವಯ ಸಮತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಮಂಗಳವಾರ ಕರೆ ನೀಡಿದ್ದ ರಾಮದುರ್ಗ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

Advertisement

ಪಟ್ಟಣದ ಹುತಾತ್ಮ ಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ತೇರ ಬಝಾರಕ್ಕೆ ತೆರಳಿ ಮಹಾತ್ಮಾ ಗಾಂಧಿಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮುನವಳ್ಳಿ ವಕೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಅಲ್ಲಿಂದ ಜುನಿಪೇಟ ಮೂಲಕ ಹುತಾತ್ಮ ಚೌಕಕ್ಕೆ ಬಂದು ಗೌರವ ಸಮರ್ಪಿಸಿದರು.

ಪ್ರತಿಭಟನೆಯಲ್ಲಿ ಮಹದಾಯಿ ಹೋರಾಟ ಸಮನ್ವಯ ಸಮಿತಿ ತಾಲೂಕಾಧ್ಯಕ್ಷ ವೆಂಕಟೇಶ ಹಿರೇರಡ್ಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲದಿಂದ ತತ್ತರಿಸಿರುವ ಜನ ಜಾನುವಾರುಗಳಿಗೆ ಮತ್ತು ಕೃಷಿಗೆ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವೇ ನ್ಯಾಯಾಧಿಕರಣದ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿ ಕಾಮಗಾರಿ ಕೈಗೊಂಡು ನಾಲ್ಕು ವರ್ಷಗಳಿಂದ ನಿರಂತರವಾಗಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಾ ಬಂದ ರೈತರ ಮನವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ, ಮಹದಾಯಿ ಹೋರಾಟಕ್ಕಾಗಿ ಸಾಕಷ್ಟು ಜೀವಗಳು ಹೋಗಿವೆ. ಹಸಿರು ಶಾಲು ಹಾಕಿದ ರೈತರಿಗಷ್ಟೆ ಇದು ಸಿಮೀತ ಎಂಬ ಭಾವನೆ ಬಿಟ್ಟು ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಯಶಸ್ವಿಗೊಳ್ಳಲು ಸಾಧ್ಯ. ಮಹದಾಯಿ ಹೋರಾಟದ ವ್ಯಾಪ್ತಿಯಲ್ಲಿ 6 ಜನ ಸಂಸದರು ಇದ್ದರೂ ಸಹ ಇದರ ಬಗ್ಗೆ ಕಾಳಜಿ ವಹಿಸದೆ ಇರುವುದು ಬೇಸರ ತಂದಿದೆ. ಅಲ್ಲದೇ ಒಂದೇ ಹೋರಾಟಕ್ಕೆ ಸೀಮಿತವಾಗದೇ ರೈತಪರ ಎಲ್ಲ ಬೇಡಿಕೆಗಳನ್ನು ಪಡೆದುಕೊಳ್ಳುವಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದರು.

ತಾಲೂಕಿನ ಲಕನಾಯ್ಕನಕೊಪ್ಪದ ಫೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ, ಸಿ.ಪಿ.ಐ.ಎಂ ಮುಖಂಡ ಗೈಬು ಜೈನೆಖಾನ್‌, ಶಂಕರಗೌಡ ಪಾಟೀಲ, ಆನಂದ ಜಗತಾಪ, ಎಚ್.ಎಸ್‌. ಪಾಟೀಲ ಸೇರಿದಂತೆ ಅನೇಕ ಮುಖಂಡರು ಮಹದಾಯಿ ಹೋರಾಟದ ಕುರಿತು ಮಾತನಾಡಿದರು. ಬಾಬಣ್ಣ ಪತ್ತೇಪೂರ, ಆನಂದ ಜಗತಪ, ಶಿವಾನಂದ ದೊಡವಾಡ, ಜಗದೀಶ ದೇವರಡ್ಡಿ, ಯಲ್ಲಪ್ಪ ದೊಡಮನಿ, ಕೃಷ್ಣಗೌಡ ಪಾಟೀಲ, ಮಲ್ಲು ದೇಸಾಯಿ, ನಿಂಗನಗೌಡ ಪಾಟೀಲ, ಕೃಷ್ಣ ಕಂಬಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next