Advertisement
ಮಳೆಗಾಲ ಬಂತೆಂದರೆ ನಮ್ಮೂರ ಬಯಲುಗಳು, ಹೊಳೆ-ಬಾವಿಗಳು ತುಂಬಿ ಹರಿಯುವ ಸೊಬಗು ನೋಡಲು ಕಣ್ಣಿಗೆ ಎಷ್ಟೊಂದು ತಂಪು. ಹೊಳೆಯ ನೀರು ಉಕ್ಕಿ ಹರಿದು ನೆರೆ ಹತ್ತುವುದನ್ನು ದೂರದಿಂದ ನೋಡಬೇಕು. ಎಂಥ ಸುಂದರ ದೃಶ್ಯ! ಮಳೆಯ ಜೊತೆ ಗದ್ದೆಯನ್ನು ಉಳುವುದು, ಭತ್ತ ನೆನೆ ಹಾಕಿ ಬಿತ್ತುವುದು, ನಾಟಿ ಮಾಡುವುದು ಎಷ್ಟು ಖುಷಿ. ಮಳೆಗಾಲದ ದಿನಗಳಲ್ಲಿ ಬಯಲಂಚಿನಲ್ಲಿ ಒಮ್ಮೆ ನಿಂತರೆ ಮನಸ್ಸು ಶಾಂತವಾಗಿಬಿಡುತ್ತದೆ. ಮಳೆಗಾಲ ಬಂದರೆ ಎಷ್ಟೋ ದಿನಗಳನ್ನು ಗದ್ದೆಯಲ್ಲೇ ಕಳೆದದ್ದುಂಟು. ಇನ್ನು ಶಾಲೆಯ ಕಡೆ ಬಂದರೆ ಮೋಜು, ಮಸ್ತಿ, ಕುಣಿದಾಟ ಕೇಳಬೇಕೆ? ಸ್ನೇಹಿತರೊಂದಿಗೆ ಮಳೆಯಲ್ಲಿ ಆಟ, ಊಟದ ಬಟ್ಟಲನ್ನು ಮಾಡಿನ ನೀರಿನಲ್ಲಿ ತೊಳೆದು ನೀರು ಚುಮುಕಿಸುವ ತುಂಟಾಟ ಎಷ್ಟು ಸೊಗಸು. ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರಕ್ಕೇನು ಕಮ್ಮಿ ಇಲ್ಲ. ಒಬ್ಬರಿಗೆ ಬಂತೆಂದರೆ ಸಾಕು ಇಡೀ ತರಗತಿಗೆ ಹರಡುತ್ತಿತ್ತು. ಅಮ್ಮ ಬಾಟಲಿಗೆ ತುಂಬಿಸಿಕೊಡುತ್ತಿದ್ದ ಬಿಸಿನೀರಿನ ಜೊತೆ ಶಾಲೆಯಲ್ಲಿಟ್ಟ ಡ್ರಮ್‌ನ ನೀರನ್ನು ಕುಡಿದು ಆರೋಗ್ಯ ಕೆಡಿಸಿಕೊಂಡು ಅಮ್ಮನ ಬೈಗುಳ ಕೇಳುವ ಮಜಾವೇ ಬೇರೆ. ಮನೆಗೆ ಹೋಗುವಾಗ ಮಳೆ-ಗಾಳಿ ರಭಸಕ್ಕೆ ಕೊಡೆ ಎಲ್ಲೋ ನಾವೆಲ್ಲೋ ಆಗಿ ಪೂರ್ತಿ ಒದ್ದೆಯಾಗಿ ಅಮ್ಮನ ಬೈಗುಳದ ಮಧ್ಯೆಯೂ ಅವಳು ಪ್ರೀತಿಯಿಂದ ಮಾಡಿಟ್ಟ ಒಂದು ಲೋಟ ಬಿಸಿ ಹಾಲಿನೊಂದಿಗೆ ಕರಿದ ಕರುಂ ಕರುಂ ಹಪ್ಪಳವನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಅಂಗಳದ ತುಂಬ ನೀರು ನಿಂತಾಗ ಕಾಗದದ ದೋಣಿ ಬಿಟ್ಟು ಅದರ ಹಿಂದೆ ಹೋಗಿ ಜಾರಿಬಿದ್ದ ಸವಿನೆನಪು ಎಂದಿಗೂ ಮಾಸದು. ಬಾಲ್ಯವೆಂದರೆ ಹಾಗೆ. ಕುಣಿದಾಟ, ಹೊಡೆದಾಟ, ಏನೂ ಅರಿಯದ ಮುಗ್ಧತೆ ಅದು. ಆದರೆ, ಈಗ ದೊಡ್ಡವರಾಗಿದ್ದೇವೆ ಎನ್ನುವ ಮುಜುಗರ.
ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಮಣಿಪಾಲ