Advertisement

ಮಳೆಗಾಲ ಹೊಸ್ತಿಲಲ್ಲಿದೆ; ಚರಂಡಿ ನಿರ್ವಹಣೆ ಬಾಕಿಯಾಗಿದೆ!

02:45 AM May 21, 2018 | Team Udayavani |

ಉಡುಪಿ: ಮಳೆಗಾಲ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಈಗಾಗಲೇ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಸಣ್ಣಪುಟ್ಟ ಮಳೆ ಅನಾಹುತಗಳನ್ನು ಸೃಷ್ಟಿಸಿ ಹೋಗಿದೆ. ಆದರೆ ಉಡುಪಿ ನಗರದ ವಿವಿಧೆಡೆ ಮಳೆನೀರು ಹರಿಯುವ ಚರಂಡಿಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಚುನಾವಣಾ ನೀತಿ ಸಂಹಿತೆಯಿಂದಾಗಿ ಹೊಸ ಟೆಂಡರ್‌ ಕರೆಯಲು ಅಡ್ಡಿಯಾಗಿದ್ದು, ಪ್ರಸ್ತುತ ತುರ್ತು ಕಾಮಗಾರಿಗಳನ್ನು ಮಾತ್ರವೇ ಮಾಡಲಾಗುತ್ತಿದೆ. ಉಳಿದಂತೆ ಈ ಹಿಂದೆ ಟೆಂಡರ್‌ ಕಾಮಗಾರಿ ಆರಂಭವಾಗಿದ್ದರೆ ಮಾತ್ರ ಅದನ್ನು ಮುಂದುವರೆಸಲಾಗುತ್ತಿದೆ.

Advertisement

ಎಲ್ಲೆಲ್ಲಿ ಸಮಸ್ಯೆ?
ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದೆ ಕಸಕಡ್ಡಿ, ಮಣ್ಣು ತುಂಬಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲವೆಡೆ ಮನೆ ಆವರಣದೊಳಗೆ ಪ್ರವೇಶಿಸಿದೆ. ಕಿನ್ನಿಮೂಲ್ಕಿ ಪೆಟ್ರೋಲ್‌ ಬಂಕ್‌ ಹಿಂಭಾಗದ ದೊಡ್ಡ ತೋಡಿನ ಒಂದು ಭಾಗದಲ್ಲಿ ಮಾತ್ರ ಕೆಲಸ ನಡೆದಿದ್ದು, ಕೆಲಸ ಪೂರ್ಣಗೊಳ್ಳಬೇಕಿದೆ. ಕಿನ್ನಿಮೂಲ್ಕಿಯಿಂದ ಮಿಷನ್‌ ಕಾಂಪೌಂಡ್‌ವರೆಗೆ ಈ ತೋಡು ಮುಂದುವರೆಯುತ್ತದೆ. ಕಿನ್ನಿಮೂಲ್ಕಿಯ ದೊಡ್ಡ ಹೊಟೇಲೊಂದರ ಕಡೆಯಿಂದ ಬರುವ ಮಳೆ ನೀರಿಗೆ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. 

ತೆಂಕಪೇಟೆ ವಾರ್ಡ್‌ನಲ್ಲಿ ವೆಂಕಟರಮಣ ದೇವಸ್ಥಾದ ಹಿಂಭಾಗದ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನೀರು ಹರಿಯಲು ತೊಡಕಾಗಿದೆ. ವಿದ್ಯೋದಯ ಶಾಲೆಗಿಂತ ಮುಂದೆ ಇತ್ತೀಚೆಗೆ ಸುರಿದ ಮಳೆಯ ಸಂದರ್ಭ ಮನೆಯೊಂದರ ಆವರಣಕ್ಕೆ ನೀರು ನುಗ್ಗಿದ್ದು, ಈಗ ತುರ್ತು ಕಾಮಗಾರಿ ನಡೆಸಿ ಸರಿಪಡಿಸಲಾಗಿದೆ. 

ಕೆಎಸ್‌ಆರ್‌ಟಿಸಿಯಿಂದ ಮುಂದೆ ಸಾಗಿ ಎಲ್‌ಐಸಿ ಕಾಲೊನಿ ಸನಿಹ ಅಂತ್ಯಗೊಳ್ಳುವ ಕಾಲುದಾರಿಯಲ್ಲಿ ಅಲ್ಲಲ್ಲಿ ಮಳೆ ನೀರು ಹರಿಯುವ ಮುಖ್ಯ ತೋಡುಗಳು ಸಿಗುತ್ತವೆ. ಇಲ್ಲೆಲ್ಲ ಕಸಕಡ್ಡಿ, ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯಗಳು ತೋಡಿನೊಳಗೆಯೇ ಇವೆ. ಒಂದೆರಡು ಕಡೆ ತೋಡಿನಿಂದ ಎತ್ತಿಹಾಕಿದ ಕಸಕಡ್ಡಿ ಬದಿಯಲ್ಲಿಯೇ ಇದ್ದು, ಮಳೆ ಬಂದಾಗ ಮತ್ತೆ ತೋಡು ಸೇರುವ ಸ್ಥಿತಿಯಲ್ಲಿದೆ. ಸಣ್ಣ ಮಳೆ ಸುರಿದರೂ ಇಲ್ಲಿ ತಗ್ಗು ಭಾಗದಲ್ಲಿ ನೀರು ಮ್ಯಾನ್‌ಹೋಲ್‌ಗ‌ಳಿಂದ ಉಕ್ಕಿ ಹರಿಯುವುದು ಅದೆಷ್ಟೋ ವರ್ಷಗಳ ಸಮಸ್ಯೆ. 

ಅಪೂರ್ಣ ಕಾಮಗಾರಿ
ರಾ. ಹೆದ್ದಾರಿಯ ಕರಾವಳಿ ಬೈಪಾಸ್‌ನಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಹಾಗಾಗಿ ಇಲ್ಲಿ ಮಳೆ ಬಂದಾಗ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ಪಕ್ಕದಲ್ಲಿ ಮಳೆನೀರು ಚರಂಡಿ ನಿರ್ಮಿಸುವ ಕಾಮಗಾರಿ ನಡೆಸಿಲ್ಲ.

Advertisement

ನಿರ್ಮಾಣ ಸಾಮಗ್ರಿಗಳು
ನಗರದ ಹಲವಡೆ ಸಿಮೆಂಟು, ಜಲ್ಲಿಕಲ್ಲು ಮೊದಲಾದ ನಿರ್ಮಾಣ ಸಾಮಗ್ರಿಗಳನ್ನು ಕೂಡ ಮಳೆ ನೀರು ಹರಿಯುವ ಚರಂಡಿಯಲ್ಲಿಯೇ ಹಾಕಲಾಗಿದೆ. ಇದರಿಂದಾಗಿ ಮಳೆ ನೀರಿಗೆ ತಡೆಯುಂಟಾಗಿದೆ. ಇದರ ಜತೆಗೆ ಸೋಗೆ, ಮರದ ಗೆಲ್ಲುಗಳ ವಿಲೇವಾರಿ ಕೂಡ ಸೂಕ್ತ ರೀತಿಯಲ್ಲಿ ನಡೆಯದಿರುವುದರಿಂದ ಸಮಸ್ಯೆಯಾಗಿದೆ. 

ರೋಗಭೀತಿ
ಆಗಾಗ ಮಳೆ ಸುರಿದು ಅಲ್ಲಲ್ಲಿ ನೀರು ನಿಲ್ಲುವ, ಹಗಲು ಬಿಸಿಲು ಕಾಯುವ ಇಂತಹ ಸಂದರ್ಭ ಸಾಂಕ್ರಾಮಿಕ ರೋಗಗಳ ಹಾವಳಿ ಉಂಟಾಗುವುದಕ್ಕೆ ಪ್ರಶಸ್ತ ಸ್ಥಿತಿಯನ್ನು ನಿರ್ಮಿಸುತ್ತದೆ. ಸೊಳ್ಳೆ ಉತ್ಪಾದನೆಗೆ ಅವಕಾಶ ಉಂಟಾಗಿ ಮಲೇರಿಯಾ, ಡೆಂಗ್ಯೂದಂತಹ ರೋಗ ಅಪಾಯ ಉಲ್ಬಣಿಸುತ್ತದೆ. 

ಓವರ್‌ಫ್ಲೋ
ಬನ್ನಂಜೆ-ಗರೋಡಿ ರಸ್ತೆಯಲ್ಲಿ ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದಾಗಿ ಕೊಳಚೆ ಗುಂಡಿಗಳಿಂದ ನೀರು ಮೇಲಕ್ಕೆ ಚಿಮ್ಮಿ ರಸ್ತೆಗೆ ಹರಿಯುತ್ತಿದೆ. ಮಳೆಗಾಲಕ್ಕೆ ಇದು ಗದ್ದೆ, ಮನೆಯಂಗಳಕ್ಕೆ ಹರಿಯುತ್ತದೆ. ರಸ್ತೆಯಲ್ಲಿ ವಾಹನಗಳಲ್ಲಿ ಕೂಡ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮೇ 22ಕ್ಕೆ ಸಭೆ
ಮಳೆ ನೀರು ಚರಂಡಿ ಕಾಮಗಾರಿಗಳು ಸೇರಿದಂತೆ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಪ್ರಾಕೃತಿಕ ವಿಕೋಪ ನಿರ್ವಹಣ ಸಮಿತಿ ರಚನೆ ಶೀಘ್ರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಮೇ 22ರಂದು ಸಭೆ ಕರೆದಿದ್ದಾರೆ. ನೀತಿ ಸಂಹಿತೆ ಇರುವ ಕಾರಣದಿಂದ ಹೊಸ ಟೆಂಡರ್‌ ಕರೆದಿಲ್ಲ. ಈ ಹಿಂದೆ ನಡೆದಿರುವ ಟೆಂಡರ್‌ನಂತೆ ಕೆಲವು ಕಾಮಗಾರಿಗಳು ನಡೆಯುತ್ತಿವೆ. ತುರ್ತು ಕೆಲಸಗಳಿಗೆ ನಗರಸಭೆ ಸ್ಪಂದಿಸುತ್ತಿದೆ.

– ಜನಾರ್ದನ್‌, ಆಯುಕ್ತರು, ನಗರಸಭೆ 

ಅಧಿಕಾರಿಗಳಿಗೆ ಸೂಚಿಸಲಾಗಿದೆ
ನಗರಸಭೆಯಿಂದ ವಾರ್ಡ್‌ನ ಕೆಲವು ಕಡೆಗಳಲ್ಲಿ ಚರಂಡಿಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ. ಉಳಿದ ಕಾಮಗಾರಿಗಳನ್ನು ಕೂಡ ಕೂಡಲೇ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮನೆ ಆವರಣದೊಳಗೆ ನೀರು ನಿಲ್ಲಬಹುದಾದ ಪ್ರದೇಶಗಳು ಸದ್ಯಕ್ಕೆ  ಗಮನಕ್ಕೆ ಬಂದಿಲ್ಲ. 
– ಅಮೃತಾ ಕೃಷ್ಣಮೂರ್ತಿ
ಸದಸ್ಯರು, ಕಿನ್ನಿಮೂಲ್ಕಿ ವಾರ್ಡ್‌ 

Advertisement

Udayavani is now on Telegram. Click here to join our channel and stay updated with the latest news.

Next