Advertisement

ಕೊಡಗಿನಲ್ಲಿ  ಧಾರಾಕಾರ ಮಳೆ ಇಂದು ಶಾಲೆ, ಕಾಲೇಜುಗಳಿಗೆ ರಜೆ

07:30 AM Aug 29, 2017 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು ನದಿ, ತೊರೆ, ಜಲಪಾತಗಳು ತುಂಬಿ ಹರಿಯುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಆ. 29ರಂದು ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ಮಡಿಕೇರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ದಟ್ಟ ಮಂಜಿನೊಂದಿಗೆ ಮೈಕೊರೆಯುವ ಚಳಿಯ ಅನುಭವವಾಗುತ್ತಿದೆ.

ಕಳೆದ ವರ್ಷ ಬರದಿಂದ ಬಳಲಿದ್ದ ಕೊಡಗು ಜಿಲ್ಲೆಗೆ ಈ ಬಾರಿ ಮುಂಗಾರು ಒಂದು ತಿಂಗಳು ತಡ ವಾಗಿ ಪ್ರವೇಶಿಸಿದೆ. ಜುಲೈ ತಿಂಗಳಿನಲ್ಲಿ ಸಾಧಾರಣ ಮಳೆಯನ್ನು ಕಂಡಿದ್ದ ಜಿಲ್ಲೆ ಆಗಸ್ಟ್‌ ತಿಂಗಳ ಮಧ್ಯ ಭಾಗದಿಂದ ಆಶಾದಾಯಕ ಮಳೆಯಲ್ಲಿ ಮಿಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯ ಮೂರು ತಾಲೂಕುಗಳಾದ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಗ್ರಾಮೀಣ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಿದೆ.

ಪ್ರವಾಸಿಗರ ಸಂಖ್ಯೆ ವೃದ್ಧಿ
ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ದಟ್ಟ ಮಂಜಿನೊಂದಿಗೆ ಉತ್ತಮ ಮಳೆಯಾಗುತ್ತಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಹರಿವು ಹೆಚ್ಚಾಗಿದೆ. ಕುಶಾಲ ನಗರ ಹಾಗೂ ದಕ್ಷಿಣ ಕೊಡಗಿನಲ್ಲು ಮಳೆಯಾಗುತ್ತಿದೆ. ಮಡಿಕೇರಿ ನಗರದಲ್ಲಿ ದಟ್ಟ ಮಂಜು, ಚಳಿಯೊಂದಿಗಿನ ಮಳೆ ಪ್ರವಾಸಿಗರಿಗೆ ಹೆಚ್ಚು ಹಿತವೆನಿಸುತ್ತಿದ್ದು, ಮಳೆಯ ಮಜಾ ಅನುಭವಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಮಂಜಿನಿಂದ ಮುಚ್ಚಿಹೋಗಿರುವ ರಾಜಾ ಸೀಟು ಉದ್ಯಾನವನ ಹಾಗೂ ಧುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳ ಕೆಲಸ, ಕಾರ್ಯಗಳಿಗೆ ಅಡ್ಡಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಕಷ್ಟಪಡುತ್ತಿದ್ದಾರೆ.

Advertisement

ಹವಾಗುಣದ ಏರುಪೇರಿನಿಂದ ಅನಾರೋಗ್ಯವೂ ಕಾಡುತ್ತಿದ್ದು, ಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಎತ್ತರದ ಪ್ರದೇಶ ಹಾಗೂ ತಗ್ಗು ಪ್ರದೇಶದಲ್ಲಿರುವ ನಿವಾಸಿಗಳು ಬರೆ ಕುಸಿಯುವ ಆತಂಕವನ್ನು ಎದುರಿಸುತ್ತಿದ್ದಾರೆ. ಮಳೆಯೊಂದಿಗೆ ಗಾಳಿಯ ಆರ್ಭಟ ಇಲ್ಲದಿರುವುದರಿಂದ ಯಾವುದೇ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ.

ಕಾಫಿ ಬೆಳೆಗೆ ಹಾನಿ ಭೀತಿ
ನಿರಂತರ ಮಳೆ ಕಾಫಿ ಬೆಳೆಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿದ್ದು, ಬೆಳೆಗಾರರು ಚಿಂತೆ ಗೀಡಾಗಿ ದ್ದಾರೆ. ಸಕಾಲದಲ್ಲಿ ಸಮರ್ಪಕವಾಗಿ ಮಳೆ ಯಾಗಿದ್ದರೆ ಎಲ್ಲವೂ ಸಮೃದ್ಧಿಯಾಗಿರುತ್ತಿತ್ತು ಎನ್ನುವುದು ಗ್ರಾಮೀಣ ಜನರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next