Advertisement

ಮಳೆಗಾಲದ ಸಮಸ್ಯೆಗೆ ಈ ಬಾರಿಯೂ ಪರಿಹಾರ ಸಿಗಲಿಲ್ಲ !

10:49 PM Oct 03, 2019 | mahesh |

ಮಹಾನಗರ: ಮರೋಳಿ ವಾರ್ಡ್‌ ರಾಷ್ಟ್ರೀಯ ಹೆದ್ದಾರಿ 66- ರಾಷ್ಟ್ರೀಯ ಹೆದ್ದಾರಿ 75ರ ಸರಹದ್ದಿನಲ್ಲಿ ಬರುತ್ತದೆ. ಮಹಾನಗರ ಪಾಲಿಕೆಯಲ್ಲಿ 37ನೇ ವಾರ್ಡ್‌ ಆಗಿ ಗುರುತಿಸಿ ಕೊಂಡಿರುವ ಈ ಪ್ರದೇಶವು ಭೌಗೋಳಿಕವಾಗಿ ಎತ್ತರ, ತಗ್ಗು ಜಾಗವಾಗಿದೆ.

Advertisement

ಮರೋಳಿ ವಾರ್ಡ್‌
ಮರೋಳಿ ವಾರ್ಡ್‌ ಪಂಪ್‌ವೆಲ್‌ನಿಂದ ಸಾಗಿ ಕರ್ನಾಟಕ ಬ್ಯಾಂಕ್‌ ಕೇಂದ್ರ ಕಚೇರಿ ಪ್ರದೇಶ, ಕೋರ್ದಬ್ಬು ದೈವಸ್ಥಾನ, ಶಿವಬಾಗ್‌ ಪ್ರಥಮ ಕ್ರಾಸ್‌, ಪ್ರೇಮಾನಗರ, ಬಜ್ಜೋಡಿ, ಕನಪದವು, ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘದವರೆಗಿನಭಾಗ, ಜೋಡುಕಟ್ಟೆ, ಮರಿಯಾ ಪ್ರೇಮಗುಡ್ಡೆ,ಮರೋಳಿ, ಜೋಡುಕಟ್ಟ,ಮೆಸ್ಕಾಂ, ತಾತಾವು, ಅಡು ಮರೋಳಿ, ಸೂರ್ಯ ನಾರಾಯಣ ದೇವಸ್ಥಾನ ಪ್ರದೇಶಗಳನ್ನು ಹೊಂದಿದೆ.

ಈ ವಾರ್ಡ್‌ನ ನಿಕಟಪೂರ್ವ ಕಾರ್ಪೊರೇಟರ್‌ ಕಾಂಗ್ರೆಸ್‌ನ ಕೇಶವ ಮರೋಳಿ. ಪಾಲಿಕೆಯ ಅಂಕಿ-ಅಂಶದಂತೆ ಐದು ವರ್ಷಗಳಲ್ಲಿ ವಾರ್ಡ್‌ಗೆ ಬಂದಿರುವ ಅನುದಾನ 5.57 ಕೋ.ರೂ. ಇದಲ್ಲದೆ ಸಣ್ಣ ನೀರಾವರಿ ಇಲಾಖೆಯಿಂದ ಹಾಗೂ ಶಾಸಕರ ನಿಧಿಯಿಂದ ಸುಮಾರು 2.5 ಕೋ.ರೂ. ಅನುದಾನ ವಿನಿಯೋಗಿಸಲಾಗಿದೆ.

ಮರೋಳಿ ವಾರ್ಡ್‌ ಗುಡ್ಡ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಇದರಿಂದ ಒಂದಷ್ಟು ಮನೆಗಳು ಪ್ರತಿ ವರ್ಷ ಇಲ್ಲಿ ಹಾನಿಗೊಳಗಾಗುತ್ತಿವೆ. ಜತೆಗೆ ಕೆಲವು ಭಾಗದಲ್ಲಿ ಮಳೆನೀರು ಹರಿಯುವ ತೋಡುಗಳು ಒತ್ತುವರಿಯಾಗಿದ್ದು, ಮಳೆ ಗಾಲದಲ್ಲಿ ಕೆಲವೆಡೆ ಕೃತಕ ನೆರೆ ಸಮಸ್ಯೆ ಸೃಷ್ಟಿಯಾಗುತ್ತಿವೆ.

ವಾರ್ಡ್‌ನಲ್ಲಿ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ಒಳಚರಂಡಿ. ಎಡಿಬಿ ಪ್ರಥಮ ಯೋಜನೆಯಲ್ಲಿ ಇಲ್ಲಿ ಬಹುತೇಕ ಕಡೆಗಳಲ್ಲಿ ಒಳಚರಂಡಿ ಅನುಷ್ಠಾನವಾಗಿದ್ದರೂ ಬಜಾಲ್‌ನಲ್ಲಿ ದ್ರವತ್ಯಾಜ್ಯ ಸಂಸ್ಕರಣ ಸ್ಥಾವರಕ್ಕೆ ಜೋಡಣೆಯಾಗದಿರುವುದರಿಂದ ಸಮಸ್ಯೆ ನಿರ್ಮಾಣವಾಗಿದೆ. ಇದಲ್ಲದೆ ಇದೇ ಯೋಜನೆಯಲ್ಲಿ ನಿರ್ಮಿಸಿದ್ದ ಅನೇಕ ಒಳಚರಂಡಿ, ಮ್ಯಾನ್‌ಹೋಲ್‌ಗ‌ಳು ಶಿಥಿಲಗೊಂಡಿವೆ. ಕೆಲವೆಡೆ ಮ್ಯಾನ್‌ ಹೋಲ್‌ಗಳಲ್ಲಿ ಮಲೀನ ನೀರು ಉಕ್ಕಿ ಹರಿಯುತ್ತಿವೆ. ಕೆಲವು ಮ್ಯಾನ್‌ಹೋಲ್‌ ದುರಸ್ತಿಗೊಳಿಸುವ ಕಾರ್ಯ ನಡೆದಿದೆ. ಸ್ಥಳೀಯರೋರ್ವರ ಪ್ರಕಾರ ಕ್ಷೇತ್ರದಲ್ಲಿ ವಾರ್ಡ್‌ ನ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ. ಕಾಂಕ್ರೀಟ್‌ಹಾಕಿರುವ ಜಾಗದಲ್ಲಿ ಚರಂಡಿ

Advertisement

ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿಯೇ ಮಳೆ ನೀರು ರಸ್ತೆಯಲ್ಲೇ ಹರಿದುಹೋಗುತ್ತಿವೆ. ಈ ಹಿಂದೆ ಎಡಿಬಿಯಲ್ಲಿ ಆಗಿರುವ ಒಳಚರಂಡಿ ಮ್ಯಾನ್‌ಹೋಲ್‌ಗ‌ಳಲ್ಲಿ ಕೆಲವು ಕುಸಿದಿದ್ದು ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿದೆ.

ಬಸ್‌ ನಿಲ್ದಾಣ ಸಮಸ್ಯೆ: 25 ವರ್ಷಗಳ ಇತಿಹಾಸ
ಮರೋಳಿ ವಾರ್ಡ್‌ಗೆ ಬರುವ ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್‌ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಗೆ 25 ವರ್ಷಗಳ ಇತಿಹಾಸವಿದೆ. ಸುಮಾರು ಏಳು ಎಕ್ರೆ ಸ್ವಾಧೀನಗೊಳಿಸಲಾಗಿದೆ. ಆದರೆ ಇದೀಗ ಈ ಜಾಗ ಪಾಳುಬಿದ್ದಿದ್ದು ಗಿಡಗಂಟಿಗಳು ಬೆಳೆದಿವೆ. ರಾತ್ರಿ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿದೆ. ಇದರ ಪರಿಣಾಮವಾಗಿ ಕತ್ತಲಾದ ಬಳಿಕ ಇಲ್ಲಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಜನರು ಸಂಚರಿಸಲು ಭಯಪಡುವಂತಾಗಿದೆ.

ಪ್ರಮುಖ ಕಾಮಗಾರಿ
– ತಾರೆತೋಟ -ಮಾರಿಕಾಂಬಾ ದೇಗುಲ ರಸ್ತೆ ಕಾಂಕ್ರೀಟ್‌
-ನಾಗೋರಿ ಸೊಸೈಟಿಯಿಂದ ಮರೋಳಿ ಶ್ರೀ ಸತ್ಯನಾರಾಯಣ ದೇಗುಲ ಸಮೀಪದ ವೃತ್ತದವರೆಗೆ ರಸ್ತೆಗೆ ಕಾಂಕ್ರೀಟ್‌
–  ಮರೋಳಿ ತಾತಾವು ರಸ್ತೆಗೆ ಕಾಂಕ್ರೀಟ್‌
– ಪಾಂಪುಮನೆ ಬಳಿ ತೋಡಿಗೆ 25 ಲ.ರೂ. ವೆಚ್ಚದ ತಡೆಗೋಡೆ
– ಬಜ್ಜೋಡಿ 2ಕಡೆ ತೋಡಿಗೆ ತಡೆಗೋಡೆ ನಿರ್ಮಾಣ
– ಮರೋಳಿ ಶಾಂತಿಗುರಿಯ ರಸ್ತೆ ವಿಸ್ತರಣೆ ಕಾಂಕ್ರೀಟ್‌ ಕಾಮಗಾರಿ
– ಪಂಪ್‌ವೆಲ್‌ಉದ್ದೇಶಿತ ಬಸ್‌ ನಿಲ್ದಾಣ ಬಳಿ ತಡೆಗೋಡೆ
– ಜಯನಗರ-ಕೋಡಿಬೆಟ್ಟು ರಸ್ತೆಗೆ ಕಾಂಕ್ರೀಟ್‌
– ಮೆಸ್ಕಾಂ- ಶ್ರೀ ಸೂರ್ಯನಾರಾಯಣ ದೇಗುಲ ರಸ್ತೆ ಅಭಿವೃದ್ಧಿ
– ಜಯನಗರ ರಸ್ತೆ ಅಭಿವೃದ್ಧಿ

ಮರೋಳಿ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಮರೋಳಿ ಸೂರ್ಯನಾರಾಯಣ ದೇವಾಲಯ, ಆಡುಮರೋಳಿ ಶ್ರೀ ಮಾರಿಕಾಂಬ ದೇವಾಲಯ, ಆ್ಯಂಜೆಲೋರ್‌ ಚರ್ಚ್‌ ಮರೋಳಿ ವಾರ್ಡ್‌ಗೆ ಸೇರುತ್ತದೆ. ಸುಮಾರು 1,500 ಮನೆಗಳಿವೆ. ಜತೆಗೆ ಸುಮಾರು 10ಕ್ಕೂ ಅಧಿಕ ವಸತಿ ಸಮುಚ್ಚಯಗಳಿದ್ದು ಒಟ್ಟು 600 ಮನೆಗಳಿವೆ.

ಒಟ್ಟು ಮತದಾರರು 6,304
ನಿಕಟಪೂರ್ವ ಕಾರ್ಪೊರೇಟರ್‌- ಕೇಶವ ಮರೋಳಿ


ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಮರೋಳಿ ವಾರ್ಡ್‌ನಲ್ಲಿ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮುಖ್ಯವಾಗಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ದುರಸ್ತಿಯಲ್ಲಿದ್ದ ಬಹಳಷ್ಟು ಒಳ ರಸ್ತೆಗಳು ಹಾಗೂ ಅಡ್ಡರಸ್ತೆಗಳು ಕಾಂಕ್ರೀಟೀಕರಣಗೊಳಿಸಿ ಸಂಚಾರ ಯೋಗ್ಯಗೊಳಿಸಲಾಗಿದೆ. ಇದರ ಜತೆಗೆ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯವೂ ನಡೆದಿದೆ.
-ಕೇಶವ ಮರೋಳಿ

ಸುದಿನ ನೋಟ
ವಾರ್ಡ್‌ನ ಸುತ್ತ ತಿರುಗಾಡಿದಾಗ ರಸ್ತೆ ಅಭಿವೃದ್ಧಿಯಾಗಿರುವುದು ಸ್ವಲ್ಪ ಮಟ್ಟಿಗಾದರೂ ಕಾಣುತ್ತದೆ. ಆದರೆ ಮಳೆಗಾಲದ ನೀರು ಹರಿದು ಹೋಗಲು ತುರ್ತಾಗಿ ಆಗಬೇಕಾಗಿದ್ದ ಕಾಮಗಾರಿ ಮಾತ್ರ ನಡೆಯದಿರುವುದು ಬೇಸರ ಮೂಡಿಸುತ್ತದೆ. ನಾಗರಿಕರ ಅಗತ್ಯವನ್ನು ಮನಗಾಣುವಲ್ಲಿ ಸದಸ್ಯರು ಸೋತರೇ ಎಂಬ ಭಾವನೆ ಮೂಡುತ್ತದೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next