ಚಿಂಚೋಳಿ: ತಾಲೂಕಿನಲ್ಲಿ ಬುಧವಾರ ಸಂಜೆ ಸಿಡಿಲು ಗುಡುಗಿನ ನಡುವೆ ರಭಸದಿಂದ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಬುಧವಾರ ಸಂಜೆಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಒಟ್ಟು 314ಮಿಲಿ ಮೀಟರ್ ದಾಖಲೆ ಮಳೆ ಆಗಿದೆ.
ತಾಲೂಕಿನಲ್ಲಿ ರಭಸದಿಂದ ಕೂಡಿದ ಮಳೆ ಆಗಿರುವುದರಿಂದ ಐನೋಳಿ, ಸೋಮಲಿಂಗದಳ್ಳಿ, ಮರಪಳ್ಳಿ, ತುಮಕುಂಟಾ, ಚಿಮ್ಮಾಯಿದಲಾಯಿ, ಅಣವಾರ, ಚಿಕ್ಕನಿಂಗದಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿರುವುದರಿಂದ ಇಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ.
ಐನೋಳಿ, ದೇಗಲಮಡಿ, ನಿಮಾಹೊಸಳ್ಳಿ ಗ್ರಾಮಕ್ಕೆ ಪೂರೈಸುವ ವಿದ್ಯುತ್ ಲೈನ್ ಮತ್ತು ಕಂಬಗಳು ಉರುಳಿ ಬಿದ್ದ ಪರಿಣಾಮವಾಗಿ ಎರಡು ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರಾದ ವಿಜಯಕುಮಾರ ರೊಟ್ಟಿ, ಬಸವರಾಜ ಪುಣ್ಯಶೆಟ್ಟಿ ತಿಳಿಸಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ಒಂದೇ ದಿನದಲ್ಲಿ ದಾಖಲೆ (65.5ಮಿ.ಮೀ) ಮಳೆ ಸುರಿದಿದೆ. ಕೋಡ್ಲಿ 48.5 ಮಿ.ಮೀ, ಸುಲೇಪೇಟ 47.2 ಮಿ.ಮೀ, ಕುಂಚಾವರಂ 20.4 ಮಿ.ಮೀ, ಐನಾಪುರ 52.4 ಮಿ.ಮೀ, ಚಿಮ್ಮನಚೋಡ 35.2 ಮಿ.ಮೀ, ನಿಡಗುಂದಾ 45 ಮಿ.ಮೀ ಮಳೆ ಆಗಿದೆ.
ತಾಲೂಕಿನಲ್ಲಿ ರಭಸದಿಂದ ಕೂಡಿದ ಮಳೆ ಆಗುತ್ತಿರುವುದರಿಂದ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ, ಪೋಲಕಪಳ್ಳಿ ಗ್ರಾಮಗಳ ಹತ್ತಿರುವ ಹರಿಯುವ ಮುಲ್ಲಾಮಾರಿ ನದಿಗೆ
ಕಟ್ಟಿದ ಬ್ರಿಡ್ಜ್ ಕಮ್ ಬ್ಯಾರೇಜಿಗೆ ಅಳವಡಿಸಿದ ಎಲ್ಲ ಗೇಟುಗಳನ್ನು ಮೇಲೆ ಎತ್ತಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶರಣಬಸಪ್ಪ ಕೇಶ್ವಾರ ತಿಳಿಸಿದ್ದಾರೆ.