Advertisement

ಮಳೆ ನೀರು ಒಂದು ಹನಿಯೂ ಪೋಲಾಗದಂತೆ ಇಂಗುಗುಂಡಿ ನಿರ್ಮಾಣ

11:38 PM Jul 05, 2019 | Sriram |

ಕಾಸರಗೋಡು: ಇನ್ನು ಮುಂದೆ ಒಂದೇ ಒಂದು ಹನಿ ಮಳೆನೀರು ಪೋಲಾಗಬಾರದು ಎಂಬ ನಿಟ್ಟಿನಲ್ಲಿ ಮುಳಿಯಾರು ಗ್ರಾಮ ಪಂಚಾಯತ್‌ ನಡೆಸುತ್ತಿರವ ಚಟುವಟಿಕೆಗಳು ಜನಮನ್ನಣೆಗೆ ಪಾತ್ರವಾಗುತ್ತಿವೆ.

Advertisement

ಈ ನಿಟ್ಟಿನಲ್ಲಿ ಪಂಚಾಯತ್‌ ಮಟ್ಟದಲ್ಲಿ ಮಳೆನೀರು ಸಂಗ್ರಹ ಉದ್ದೇಶದಿಂದ 400ಕ್ಕೂ ಅಧಿಕ ಇಂಗು ಗುಂಡಿಗಳನ್ನು ಸಿದ್ಧಪಡಿಸಲಾಗಿದೆ. ಉಳಿದಂತೆ 500 ಇಂಗು ಗುಂಡಿಗಳ ನಿರ್ಮಾಣ ಕಾಮಗಾರಿ ಈ ತಿಂಗಳ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಪಂಚಾಯತ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

ಹರಿದು ಹೋಗುವ ಮಳೆ ನೀರನ್ನು ಇಂಗು ಗುಂಡಿಗಳ ಮೂಲಕ ಭೂಮಿಯಡಿ ಇಳಿಯುವಂತೆ ಮಾಡಿ ಭೂಗರ್ಭ ಜಲ ಮಟ್ಟವನ್ನು ಹೆಚ್ಚಿಸುವುದು ಇಲ್ಲಿನ ಉದ್ದೇಶ. ಇದು ಕಡು ಬೇಸಗೆಯಲ್ಲೂ ಕೆರೆಗಳಲ್ಲಿ, ಬಾವಿಗಳಲ್ಲಿ ನೀರು ಬತ್ತಿಹೋಗದಂತೆ ಒಂದು ಹಂತದ ವರೆಗೆ ತಡೆಯಲೂ ಸಹಕಾರಿಯಾಗಿದೆ.

ಪ್ರತಿ ವರ್ಷವೂ ಮುಳಿಯಾರು ಗ್ರಾಮ ಪಂಚಾಯತ್‌ನಲ್ಲಿ ಮಳೆ ನೀರ ಇಂಗು ಗುಂಡಿಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತದೆ. ಮಳೆಗಾಲಕ್ಕೆ ಮುನ್ನ (ಮಾರ್ಚ್‌ ತಿಂಗಳ ಕೊನೆಯಲ್ಲಿ) ಪಂಚಾಯತ್‌ ಅಧ್ಯಕ್ಷರ ಮತ್ತು ಕಾರ್ಯದರ್ಶಿಯ ನೇತೃತ್ವದಲ್ಲಿ ವಾರ್ಡ್‌ ಮಟ್ಟದಲ್ಲಿ ಮಳೆ ನೀರು ಸಂಗ್ರಹ, ಇಂಗು ಗುಂಡಿಗಳ ನಿರ್ಮಾಣ ಇತ್ಯಾದಿ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಂಗವಾಗಿ ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ ನಡೆಯುತ್ತಿದೆ.

ಕಳೆದ ಆರ್ಥಿಕ ವರ್ಷ 850 ಮಳೆನೀರು ಇಂಗು ಗುಂಡಿಗಳ ನಿರ್ಮಾಣ ಇಲ್ಲಿ ನಡೆಸ ಲಾಗಿತ್ತು. ಸಣ್ಣ ಪ್ರಮಾಣದ ಇಳಿಜಾರು ಪ್ರದೇಶದಲ್ಲಿ ಈ ಗುಂಡಿಗಳ ನಿರ್ಮಾಣ ನಡೆಸಲಾಗುತ್ತದೆ. ರಭಸದಿಂದ ಹರಿದು ಹೋಗುವ ಮಳೆನೀರನ್ನು ತಡೆದು ಭೂಮಿಯಡಿ ತಲಪಿಸುವಲ್ಲಿ ಇದು ಸಹಕಾರಿಯಾಗಿದೆ. ಒಂದೂವರೆ ಮೀಟರ್‌ ಉದ್ದ, ಒಂದು ಮೀಟರ್‌ ಅಗಲದ ಗುಂಡಿ ತೋಡಲಾಗುತ್ತದೆ. ಬಿರುಸಿನ ಮಳೆಯಲ್ಲೂ ಮಣ್ಣು ಕುಸಿದು ಹೋಗ ದಂತೆ ಇವುಗಳ ನಿರ್ಮಾಣ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಜಲ ಸಂರಕ್ಷಣೆಯ ಅತ್ಯಂತ ಪೂರಕ ವಿಧಾನ ಈ ಮಳೆ ನೀರು ಗುಂಡಿಗಳೇ ಆಗಿವೆ ಎಂಬ ನಿರೀಕ್ಷೆಯೊಂದಿಗೆ ಇವುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪಂಚಾಯತ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next