ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಪ್ರಧಾನ ಕಚೇರಿ ರೈಲುಸೌಧದಲ್ಲಿ ಸುಮಾರು 4.9 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಮಳೆನೀರು ಸಂಗ್ರಹ ಹೊಂಡವನ್ನು ಕೇಂದ್ರ ರೈಲ್ವೆ ಸಹಾಯಕ ಸಚಿವ ಮನೋಜ ಸಿನ್ಹಾ ಚಾಲನೆ ನೀಡಿದರು.
ಸುಮಾರು 12 ಮೀಟರ್‌ನಷ್ಟು ಆಳವಿರುವ ಮಳೆನೀರು ಸಂಗ್ರಹ ತೊಟ್ಟಿಗೆ ಕಟ್ಟಡ ಆವರಣದ ಸುಮಾರು 7,8000 ಚದರ ಮೀಟರ್ ವ್ಯಾಪ್ತಿಯಲ್ಲಿನ ಮಳೆನೀರು ಹರಿದು ಬರಲಿದೆ. ಸುಮಾರು 11.97 ಲಕ್ಷ ರೂ. ವೆಚ್ಚದಲ್ಲಿ ಹೊಂಡ ನಿರ್ಮಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಿದ್ದ ಮಳೆಯಿಂದಗಿ ಅರ್ಧಕ್ಕಿಂತಲೂ ಹೆಚ್ಚು ನೀರು ಈಗಾಗಲೇ ಸಂಗ್ರಹಗೊಂಡಿದೆ. ಮಳೆನೀರು ಸಂಗ್ರಹ ಹೊಂಡದಲ್ಲಿ ಮಳೆಯಿಂದ ಬಿದ್ದ ನೀರು ಪೋಲಾಗದೆ ಸಂಗ್ರಹವಾಗುತ್ತಿದ್ದು, ಈ ನೀರು ಇಂಗುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತಿದ್ದು,
ರೈಲುಸೌಧದೊಳಗಿನ ಎರಡು ಕೊಳವೆ ಬಾವಿಗಳು ಸೇರಿದಂತೆ ಸುತ್ತಲಿನ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳಕ್ಕೆ ಇದರ ಕೊಡಗೆ ಮಹತ್ವದ್ದಾಗಿದೆ ಎಂಬುದು ರೈಲ್ವೆ ಇಲಾಖೆ ಅಧಿಕಾರಿಗಳ ಅನಿಸಿಕೆ.
ಮಳೆನೀರು ಸಂಗ್ರಹ ಹೊಂಡದ ಬಗ್ಗೆ ನೈರುತ್ಯ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಮನೋಜ ಸಿನ್ಹಾ, ಮಳೆನೀರು ಸಂಗ್ರಹ ಉತ್ತಮ ಹಾಗೂ ಮಾದರಿ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೈರುತ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ ಸೇರಿದಂತೆ ಅನೇಕರು ಇದ್ದರು.