Advertisement

ಕೆಲಸ ಅರಸಿ ಬಂದವರ ಬದುಕು ಕಸಿದ ಮಳೆ; ಗುಡಿಸಲು ಜಲಾವೃತ

12:19 PM Sep 09, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆ ನಿತ್ಯ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರ ದುಡಿಮೆ ಕಿತ್ತುಕೊಂಡಿದೆ. ಕೂಲಿ ಮಾಡಿ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ನೂರಾರು ಕುಟುಂಬಗಳು ಮೂರು ದಿನದ ಮಳೆಯಿಂದ ಮೂವತ್ತು ದಿನವಾದರೂ ಸರಿಪಡಿಸಲಾಗದ ಸಮಸ್ಯೆ ಎದುರಿಸುತ್ತಿವೆ.

Advertisement

ಮಳೆಯಿಂದ ಗುಡಿಸಲುಗಳು ಜಲಾವೃತಗೊಂಡು ಪಾತ್ರೆ, ದಿನಸಿ ವಸ್ತು, ಬಟ್ಟೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ದಿನದ ಊಟಕ್ಕಾಗಿ ಪರದಾಡುವಂತಾಗಿದೆ. ಅತ್ತ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಆಗದೆ, ಇತ್ತ ತಾವೂ ಕೆಲಸಕ್ಕೆ ಹೋಗಲು ಸಾಧ್ಯವಾಗದಂತಾಗಿದೆ. ಸಿಲಿಕಾನ್‌ ಸಿಟಿಗೆ ನೆರೆ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಉದ್ಯೋಗ ಅರಸಿ ಬಂದಿದ್ದ ಕೂಲಿಕಾರ್ಮಿಕರು, ಗಾರೆ ಕೆಲಸದವರು, ಗಾರ್ಮೆಂಟ್‌ ಕಾರ್ಮಿಕರು ಬೆಳ್ಳಂದೂರು, ಮಾರತ್ತಹಳ್ಳಿ, ಮುನ್ನೇ
ಕೋಳಾಲ, ವರ್ತೂರು, ಸರ್ಜಾಪುರ ರಸ್ತೆ ಸೇರಿದಂತೆ ಅನೇಕ ಹೊರ ವರ್ತುಲ ರಸ್ತೆಗಳಲ್ಲಿ ವಾಸವಾಗಿದ್ದು, ಮಳೆ ಅವರ ಬದುಕು ಕಸಿದುಕೊಂಡಂತಾಗಿದೆ.

ಕೂಲಿಕಾರ್ಮಿಕರ ಗುಡಿಸಲುಗಳಿಗೆ ಮತ್ತು ಅಪಾರ್ಟ್ ಮೆಂಟ್‌ಗಳ ಒಳಗೆ ಮಳೆ ನೀರಿನ ಜತೆಗೆ ಕೊಳಚೆ ನೀರೂ ನುಗ್ಗಿದ್ದು, ರಾತ್ರಿ ನಿದ್ದೆ ಇಲ್ಲದೆ ಜಾಗರಣೆ ಮಾಡುವಂತಾಗಿದೆ. ಬಳ್ಳಾರಿ, ಸಿರುಗುಪ್ಪ, ರಾಯಚೂರಿನಿಂದ ಬಂದಿದ್ದರೆ, ಮತ್ತೊಂದೆಡೆ ನೆರೆ ರಾಜ್ಯ ಕೋಲ್ಕತಾದಿಂದಲೂ ಉದ್ಯೋಗಕ್ಕಾಗಿ ಕುಟುಂಬ ಸಮೇತ ಧಾವಿಸಿ ಬಂದು ಎರಡು ದಶಕಗಳಿಂದ ವಾಸಿಸುತ್ತಿರುವ ಇವರಿಗೆ ನೆಲೆ ಇಲ್ಲ.

ಆಟೋ ಚಾಲಕರು, ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಇವರಿಗೆ ನಿತ್ಯ ದುಡಿದರೇ ಮಾತ್ರ ಇವರ ಜೀವನ ಸಾಗುವುದು. ಆದರೆ, ಮಳೆಯಿಂದ ಎಲ್ಲವೂ ನೀರು ಪಾಲಾಗಿದೆ. ಇಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಎಳೆಗೂಸುಗಳು ಸೇರಿದಂತೆ ವಯಸ್ಸಾದವರೂ ಇದ್ದಾರೆ. ಎಲ್ಲರೂ ಇಡೀ ರಾತ್ರಿ ಗಾಳಿ, ಗುಡುಗು ಒಳಗೊಂಡಂತೆ ಮಳೆ ನೀರಿನಲ್ಲೇ ಪ್ಲಾಸ್ಟಿಕ್‌ ಅನ್ನು ಹೊದ್ದುಕೊಂಡು ಉಳಿಯುವಂತಹ ಪರಿಸ್ಥಿತಿ ಎದುರಾಗಿದೆ.

ಕಾರ್ಮಿಕರು ಸದ್ಯದ ಪರಿಸ್ಥಿತಿಯಲ್ಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ನಿರಂತರ ಮಳೆಯಿಂದಾಗಿ ಮಕ್ಕಳನ್ನು ಮತ್ತು ಮನೆಯವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದೇ ಇವರ ಸವಾಲಾಗಿದೆ. ಇವರ ಜೀವನ ಸುಸ್ಥಿಗೆ ಬರಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗಿದೆ. ಅಲ್ಲಿಯವರೆಗೆ ದುಡಿಮೆ ಇಲ್ಲದೇ, ಯಾರಾದರೂ ಕೊಟ್ಟ ಆಹಾರದಿಂದ ಬದುಕುವ ಸ್ಥಿತಿ ಒದಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರದಂದು ಸುಮಾರು 40 ಮನೆಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಳಿದಂತೆ ಕೆಲವು ಮನೆಗಳಿಗೆ ಅಕ್ಕಿ, ಬೇಳೆ, ಕಂಬಳಿ ನೀಡಲಾಗಿದೆ. ಉಳಿದಂತೆ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಸಂತ್ರಸ್ತರು ದೂರಿದರು.

Advertisement

ಪೌರಕಾರ್ಮಿಕರಿಗೆ ನೆರವಿಲ್ಲ
ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚಿನ ಪೌರಕಾರ್ಮಿಕರು ವಾಸವಿರುವ ಗುಡಿಸಲು ಪ್ರದೇಶಗಳು ಮುಳುಗಡೆಯಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳುವ ಕೆಲಸ ಮಾಡಿಲ್ಲ. ಹೀಗಾಗಿ ಅಲ್ಲಿನ ನಿವಾಸಿಗಳು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.ಸ್ವತ್ಛತಾಕರ್ಮಿಗಳ ಗುಡಿಸಲು ಮುಳುಗಿದ್ದರೂ ಬಿಬಿಎಂಪಿ ಮಾತ್ರ ಪರಿಹಾರ ಕಾರ್ಯ ಕೈಗೊಳ್ಳುವ ಕೆಲಸ ಮಾಡಿಲ್ಲ. ಅಲ್ಲದೆ ಅಧಿಕಾರಿಗಳು ಸೌಜನ್ಯಕ್ಕಾದರೂ ಅಲ್ಲಿಗೆ ಭೇಟಿ ನೀಡಿ ಪೌರಕಾರ್ಮಿಕರ ಪರಿಸ್ಥಿತಿ ವಿಚಾರಿಸಿಲ್ಲ. ಅದರಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಬಿಬಿಎಂಪಿಯಿಂದ ಆಹಾರವನ್ನೂ ನೀಡಿಲ್ಲ. ಹೀಗಾಗಿ ಅವರಿವರು ನೀಡುವ ಆಹಾರವನ್ನು ಸೇವಿಸಿ, ಖಾಲಿ ಕಟ್ಟಡಗಳನ್ನು ಹುಡುಕಿ ಜೀವನ ಸಾಗಿಸಬೇಕಾದ
ಪರಿಸ್ಥಿತಿಯಲ್ಲಿದ್ದಾರೆ.

ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಪೌರಕಾರ್ಮಿಕರೊಬ್ಬರು, ಮಳೆ ಬಂದು ಪ್ರವಾಹ ಸೃಷ್ಟಿಯಾದಾಗ ಮಕ್ಕಳನ್ನು ಎತ್ತಿಕೊಂಡು ಎತ್ತರ ಪ್ರದೇಶದಲ್ಲಿನ ಕಟ್ಟಡಗಳು ಮತ್ತು ಪಕ್ಕದಲ್ಲಿನ ಅಪಾರ್ಟ್‌ಮೆಂಟ್‌ಗಳ ಮಾಲೀಕರ ಅನುಮತಿ ಪಡೆದು ನೆಲಮಹಡಿಯಲ್ಲಿ ಉಳಿದುಕೊಂಡಿದ್ದೆವು. ಗುಡುಸಲಿನಲ್ಲಿದ್ದ ಆಹಾರ ಪದಾರ್ಥಗಳು, ಬಟ್ಟೆ, ಮಕ್ಕಳು ಶಾಲಾ ಪುಸ್ತಕಗಳು ಸೇರಿ ಎಲ್ಲವೂ ನೀರು ಪಾಲಾಗಿವೆ. ಗುರುವಾರ ಗುಡಿಸಲುಗಳಿದ್ದ ಪ್ರದೇಶದಲ್ಲಿ ನೀರು ಕಡಿಮೆಯಾಗಿದ್ದರೂ, ಅಲ್ಲಿ ವಾಸಿಸಲು ಸಾಧ್ಯವಾಗದಂತೆ ಹಾಳಾಗಿದೆ. ಈವರೆಗೆ ನಮಗೆ ಆಹಾರವನ್ನೂ ನೀಡಿಲ್ಲ. ಈಗ ಎಲ್ಲವನ್ನೂ ಕಳೆದುಕೊಂಡಿರುವ ನಾವು ಹೊಸದಾಗಿ
ಜೀವನ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ರಾತ್ರಿ ಊಟ ಮಾಡಿ ಮಲಗಿದ್ದ ಸಂದರ್ಭದಲ್ಲಿ 11 ಗಂಟೆ ಸುಮಾರಿಗೆ ಬಂದ ಮಳೆಗೆ ಮನೆಯ ಒಳಗೆಲ್ಲಾ ನೀರು ತುಂಬಿ, ಮಕ್ಕಳೆಲ್ಲಾ ನೀರಿನಲ್ಲಿ ತೇಲುತ್ತಿದ್ದರು. ಮಕ್ಕಳನ್ನು ಎತ್ತಿಕೊಂಡು ಗುಡಿಸಲು ಬಿಟ್ಟು ದಿಬ್ಬ ಇರುವ ಸ್ಥಳಕ್ಕೆ ಬಂದು ಇಡೀ ರಾತ್ರಿಯನ್ನು ಮಳೆಯಲ್ಲಿಯೇ ಕಳೆ ದೆವು.
●ನಾಗಪ್ಪ, ಬಿಬಿಎಂಪಿ ಪೌರಕಾರ್ಮಿರು

ಸುಮಾರು 20 ವರ್ಷದಿಂದ ಇಲ್ಲೆ ಜೀವಿಸುತ್ತಿದ್ದೇವೆ. ಯಾವತ್ತೂ ಇಷ್ಟೊಂದು ಮಳೆ ಬಂದು ಹಾನಿಯಾಗಿರಲಿಲ್ಲ. ಈ ಬಾರಿ ಸುರಿದ ಮಳೆಯಿಂದ ಮನೆಯಲ್ಲಿದ್ದ ದಿನಸಿ, ಬಟ್ಟೆ ಸೇರಿದಂತೆ ಎಲ್ಲಾ ನೀರು ಪಾಲಾಗಿವೆ. ಇಲ್ಲಿವರೆಗೆ ಯಾರೊಬ್ಬ ಅಧಿಕಾರಿಗಳೂ ನಮ್ಮ ಕಷ್ಟ ಕೇಳಲು ಬಂದಿಲ್ಲ.
●ಮಲ್ಲಿಕಾರ್ಜುನ, ಪೌರಕಾರ್ಮಿಕರು

ನಾವು ಕೋಲ್ಕತಾ ಮೂಲದವರು. ಬೆಂಗಳೂರಿನಲ್ಲಿ ಸುಮಾರು ಐದಾರು ವರ್ಷಗಳಿಂದ ಸೆಂಟರಿಂಗ್‌ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ಈ ಪ್ರದೇಶದಲ್ಲಿ ಕೋಲ್ಕತಾದಿಂದ ಬಂದಿರುವ ಸುಮಾರು 100 ಕುಟುಂಬಗಳು ಇವೆ. ಈಗ ಗುಡಿಸಲುಗಳೆಲ್ಲಾ ನೀರಿನಿಂದ ತುಂಬಿ ಹೋಗಿವೆ.
●ಕಾನು ರಾಯ್‌, ಸಂತ್ರಸ್ತರು

ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲೇ ವಾಸವಿದ್ದ ಕಾರಣ, ಮತ್ತೆ ಕೋಲ್ಕತಾಗೆ ಹೋಗಲು ಆಗುವುದಿಲ್ಲ. ಮಕ್ಕಳನ್ನು ಇಲ್ಲೇ ಶಾಲೆಗೆ ಸೇರಿಸಿರುವ ಕಾರಣ, ಅವರ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತದೆ. ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ.
● ಹಸೀನಾ, ಸಂತ್ರಸ್ತೆ

●ಭಾರತಿ ಸಜ್ಜನ್

Advertisement

Udayavani is now on Telegram. Click here to join our channel and stay updated with the latest news.

Next