Advertisement
ಈ ಹಿಂದೆ, ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಕೆಆರ್‌ಎಸ್ ಜಲಾಶಯದ ನೀರು ಪಡೆಯಲಾಗುತ್ತಿತ್ತು. ಆದರೆ, ಇದೀಗ ಮುಂಗಾರು ಪೂರ್ವ ಮಳೆಯಿಂದಾಗಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ನದಿ ನೀರನ್ನೇ ಪಂಪಿಂಗ್ ಮೂಲಕ ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ, ಒಂದೊಮ್ಮೆ ಮುಂಗಾರು ಮಳೆ ರಾಜ್ಯ ಪ್ರವೇಶಿಸಿರುವುದು ತಡವಾದರೂ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ತತಕ್ಷಣಕ್ಕೆ ಯಾವುದೇ ತೊಂದರೆಯಾಗದು ಎಂದು ಹೇಳಲಾಗುತ್ತಿದೆ.
Related Articles
Advertisement
ಕೆಆರ್‌ಎಸ್‌ನಲ್ಲಿ 2 ಟಿಎಂಸಿ ನೀರು!ಮುಂಗಾರು ಪೂರ್ವ ಮಳೆಯಿಂದಲೇ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಸುಮಾರು 2 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಮುಂಗಾರು ವಿಳಂಬವಾದರೆ ನಗರಕ್ಕೆ ಪೂರೈಕೆ ಮಾಡಲು ನೀರನ್ನು ಮೀಸಲಿರುಸುವಂತೆ ಸರ್ಕಾರವನ್ನು ಕೋರಲಾಗಿದೆ. ಆದರೂ, ಮುಂದಿನ ಹದಿನೈದು ದಿನಗಳಿಗೆ ಬೇಕಾಗುವಷ್ಟು ನೀರು ನದಿಯಿಂದಲೇ ಲಭ್ಯವಾಗಲಿದೆ. ಆ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದ್ದು, ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ನೀರು ಪೂರೈಕೆ ಹೇಗೆ?
ಕಾವೇರಿ ನದಿಯಿಂದ ಶಿವ ಅಣೆಕಟ್ಟೆ ಮಾರ್ಗವಾಗಿ ನೆಟ್‌ಕಲ್ ಜಲಾಶಯಕ್ಕೆ ನೀರು ಬಂದು ತಲುಪುತ್ತದೆ. ಈ ಕಚ್ಚಾನೀರು ಸಂಸ್ಕರಣೆಗಾಗಿ ಕನಕಪುರ-ಮಳವಳ್ಳಿ ರಸ್ತೆಯಲ್ಲಿರುವ ತೊರೆಕಾಡನಹಳ್ಳಿಯಲ್ಲಿ ಶುದ್ದೀಕರಣ ಘಟಕವನ್ನು ನಿರ್ಮಿಸಲಾಗಿದೆ. ಶುದ್ಧೀಕರಿಸಿದ ನೀರುನ್ನು ಮೂರು ಹಂತಗಳಲ್ಲಿ ದಿನ 24 ಗಂಟೆಯೂ ಪಂಪ್ ಮಾಡುವ ಮೂಲಕ ನಗರಕ್ಕೆ ಹರಿಸಲಾಗುತ್ತದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಜಲಮಂಡಳಿಯ ಪಂಪಿಂಗ್ ಕೇಂದ್ರಗಳಿದ್ದು, ತಾತಗುಣಿ ಪಂಪಿಂಗ್ ಕೇಂದ್ರದಿಂದ ನಗರದೆಲ್ಲೆಡೆ ನಿರ್ಮಿಸಿರುವ 57 ನೆಲಮಟ್ಟದ ಜಲಾಗಾರಗಳು, 36 ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರುನ್ನು ಸರಬರಾಜು ಮಾಡಲಾಗುತ್ತಿದೆ. ಇಲ್ಲಿಂದ 9.25 ಲಕ್ಷ ಕಟ್ಟಡಗಳಿಗೆ ನೀರು ಹರಿಯುತ್ತದೆ. ಮುಂಗಾರು ಪೂರ್ವ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಆರ್‌ಎಸ್‌ನಿಂದ ನೀರು ಪಡೆಯುತ್ತಿದ್ದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ನದಿಯಲ್ಲಿ ಹರಿಯುತ್ತಿರುವ ನೀರನ್ನು ಶಿವ ಅಣೆಕಟ್ಟೆ ಮಾರ್ಗದ ಬಳಿಯ ಶಿಂಷಾ ಕೇಂದ್ರದ ಬಳಿಯಿಂದ ನಗರಕ್ಕೆ ಪಂಪ್ ಮಾಡಲಾಗುತ್ತಿದೆ. ಸದ್ಯ ಕೆಆರ್‌ಎಸ್‌ನಿಂದ ಕೇವಲ 300 ಎಂಎಲ್‌ಡಿ ನೀರನ್ನು ಮಾತ್ರ ಪಡೆಯಲಾಗುತ್ತಿದೆ. ಉಳಿದಂತೆ ಕೆಆರ್‌ಎಸ್‌ನಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂಗಾರು ವಿಳಂಬವಾದರೆ ಅಲ್ಲಿಂದ ನೀರು ಪಡೆಯಲಾಗುವುದು.
– ಕೆಂಪರಾಮಯ್ಯ, ಪ್ರಧಾನ ಅಭಿಯಂತರರು, ಜಲಮಂಡಳಿ * ವೆಂ.ಸುನೀಲ್‌ಕುಮಾರ್